ಶನಿವಾರ, ಮೇ 21, 2022
23 °C
ಕಾರ್ಯಕರ್ತರಿಗೆ ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕಿವಿಮಾತು

ಸದಸ್ಯತ್ವ ಹೆಚ್ಚಳದಿಂದ ಪಕ್ಷ ಸಂಘಟನೆಗೆ ಬಲ- ವೆಂಕಟಶಿವಾರೆಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಸದಸ್ಯತ್ವ ಹೆಚ್ಚಳದಿಂದ ಪಕ್ಷ ಸಂಘಟನೆಗೆ ಬಲ ಬರುತ್ತದೆ. ಆದರೆ, ಜಿಲ್ಲೆಯಲ್ಲಿ ಪಕ್ಷದ ಸದಸ್ಯತ್ವ ನೋಂದಣಿ ಪ್ರಕ್ರಿಯೆ ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ’ ಎಂದು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ ಕಳವಳ ವ್ಯಕ್ತಪಡಿಸಿದರು.

ಇಲ್ಲಿ ಶನಿವಾರ ನಡೆದ ವಿವಿಧ ವಿಧಾನಸಭಾ ಕ್ಷೇತ್ರಗಳ ಜೆಡಿಎಸ್‌ ಮುಖಂಡರ ಸಭೆಯಲ್ಲಿ ಮಾತನಾಡಿ, ‘ಜಿಲ್ಲೆಯಲ್ಲಿ ಪಕ್ಷಕ್ಕೆ ಸದಸ್ಯತ್ವ ಮಾಡಿಸುವುದು ತಡವಾಗಿದೆ. ಸದ್ಯದಲ್ಲೇ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಬರಲಿದ್ದು, ಸದಸ್ಯತ್ವ ನೋಂದಣಿ ಕಾರ್ಯ ಚುರುಕಾಗಬೇಕು’ ಎಂದು ಸೂಚಿಸಿದರು.

‘ಮುಂಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು. ಇದಕ್ಕೆ ಪೂರಕವಾಗಿ ಪಕ್ಷದ ಮುಖಂಡರಿಗೆ ನೀಡುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಬೇಕು. ಇದರಲ್ಲಿ ಲೋಪವಾಗಬಾರದು. ಮುಖಂಡರು ಪರಸ್ಪರ ಭಿನ್ನಾಭಿಪ್ರಾಯ ಮರೆತು ಪಕ್ಷದ ಒಳಿತಿಗೆ ಕೆಲಸ ಮಾಡಬೇಕು’ ಎಂದು ತಿಳಿಸಿದರು.

‘ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಯಲಿದೆ. ಪ್ರತಿ ವಿಧಾನಸಭಾ ಕ್ಷೇತ್ರದಿಂದ ಕನಿಷ್ಠ 6 ಸಾವಿರದಷ್ಟು ಸದಸ್ಯತ್ವ ಮಾಡಿಸಿ ಒಂದು ವಾರದೊಳಗೆ ಸಲ್ಲಿಸಬೇಕು. ಬೂತ್ ಮಟ್ಟದ ಮುಖಂಡರನ್ನು ಒಗ್ಗೂಡಿಸಿ ವರದಿ ತರಿಸಿಕೊಳ್ಳಬೇಕು. ಈ ಸಂಬಂಧ ಪಕ್ಷದ ರಾಜ್ಯ ಕಚೇರಿಯಿಂದ ಒತ್ತಡ ಬರುತ್ತದೆ. ಪಕ್ಷ ಸಂಘಟನೆ ಬಲಗೊಂಡರೆ ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಬಹುದು’ ಎಂದರು.

ಚಿಂತಿಸಿ ಫಲವಿಲ್ಲ: ‘ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ ಪಕ್ಷಕ್ಕೆ ಆದ ಕಹಿ ಅನುಭವದ ಬಗ್ಗೆ ಈಗ ಚಿಂತಿಸಿ ಫಲವಿಲ್ಲ. ಸೋಲಿನ ಬಗ್ಗೆ ಯೋಚಿಸುತ್ತಾ ಕಾಲಹರಣ ಮಾಡುವ ಬದಲು ಪಕ್ಷ ಸಾಗಬೇಕಾದ ಮುಂದಿನ ದಾರಿ ಬಗ್ಗೆ ಯೋಚಿಸೋಣ. ಪಕ್ಷದ ಮಿಷನ್ 123 ಕಾರ್ಯಕ್ರಮದಡಿ ಪಕ್ಷ ಬಲಪಡಿಸಿ ಅಧಿಕಾರಕ್ಕೆ ತರುವ ಸಂಕಲ್ಪ ಮಾಡೋಣ’ ಎಂದು ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಹೇಳಿದರು.

‘ರಾಷ್ಟ್ರೀಯ ಪಕ್ಷಗಳು ಅಸ್ತಿತ್ವ ಉಳಿಸಿಕೊಳ್ಳಲು ಪ್ರತಿ ಐದು ವರ್ಷಕೊಮ್ಮೆ ಪ್ರಾಥಮಿಕ ಸದಸ್ಯತ್ವ ನಡೆಸುತ್ತವೆ. ಚುನಾವಣೆ ಮೂಲಕ ಪಕ್ಷದ ವಿವಿಧ ಘಟಕಗಳಿಗೆ ಪದಾಧಿಕಾರಿಗಳನ್ನು ನೇಮಕ ಮಾಡುತ್ತವೆ. ಸಕ್ರಿಯ ಕಾರ್ಯಕರ್ತರನ್ನು ಗುರುತಿಸಿ ಜವಾಬ್ದಾರಿ ಕೊಟ್ಟು ಪಕ್ಷ ಸಂಘಟನೆಗೆ ಒತ್ತು ನೀಡುತ್ತವೆ. ಅದೇ ಮಾದರಿಯನ್ನು ಜೆಡಿಎಸ್‌ ಪಕ್ಷದಲ್ಲೂ ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಜೆಡಿಎಸ್ ಪ್ರಾದೇಶಿಕ ಪಕ್ಷವಾದರೂ ಬಲಿಷ್ಠವಾಗಿದೆ. ಜಿಲ್ಲೆಯಲ್ಲೂ ಪಕ್ಷದ ಬೇರುಗಳು ಗಟ್ಟಿಯಾಗಿವೆ. ಪಕ್ಷವು ಜಿಲ್ಲೆಯಲ್ಲಿ ಕಾರ್ಯಕರ್ತರ ದೊಡ್ಡ ಪಡೆಯನ್ನೇ ಹೊಂದಿದ್ದು, ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಒಡೆಯುವಂತೆ ಪಕ್ಷ ಸಂಘಟಿಸಬೇಕು. ಇದು ಕಾರ್ಯಕರ್ತರ ಹಾಗೂ ಮುಖಂಡರ ಜವಾಬ್ದಾರಿ. ಪಕ್ಷದ ಸಭೆಗಳಲ್ಲಿ ವಿಚಾರ ಮೀರಿ ಚರ್ಚೆ ಮಾಡಬಾರದು’ ಎಂದು ತಿಳಿಸಿದರು.

ಸುಲಭವಲ್ಲ: ‘ಚುನಾವಣೆ ಮೂಲಕ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳ ಆಯ್ಕೆಗೆ ರಾಜ್ಯ ನಾಯಕರಿಂದ ನಿರ್ದೇಶನ ಬಂದಿದೆ. ಸದಸ್ಯತ್ವ ಮಾಡಿಸೋದು ಕಷ್ಟ. ಸಭೆಯಲ್ಲಿ ಮಾತನಾಡಿದಷ್ಟು ಸುಲಭವಲ್ಲ. ಪ್ರಾಯೋಗಿಕವಾಗಿ ಕೆಲಸ ಮಾಡಿದಾಗ ಅದರ ಕಷ್ಟ ಏನೆಂದು ಗೊತ್ತಾಗುತ್ತದೆ. ‌ಸದಸ್ಯತ್ವ ಪ್ರಕ್ರಿಯೆಯನ್ನು ಅಭಿಯಾನದ ರೀತಿ ನಡೆಸಿದ್ದರೆ ಈ ವೇಳೆಗಾಗಲೇ ಪೂರ್ಣಗೊಂಡಿರುತ್ತಿತ್ತು’ ಎಂದು ಜೆಡಿಎಸ್‌ ತಾಲ್ಲೂಕು ಘಟಕದ ಅಧ್ಯಕ್ಷೆ ಕುರ್ಕಿ ರಾಜೇಶ್ವರಿ ಹೇಳಿದರು.

‘‍ಪಕ್ಷದ ಮುಖಂಡರು, ಚುನಾವಣಾ ಟಿಕೆಟ್‌ ಅಕಾಂಕ್ಷಿಗಳು, ಮಾಜಿ ಶಾಸಕರು ಗಮನ ಹರಿಸದ ಕಾರಣ ಪಕ್ಷ ಸಂಘಟನೆ ಹಿಂದುಳಿದಿದೆ. ಜಿಲ್ಲೆಯಲ್ಲಿ ಪಕ್ಷ ಬಲಿಷ್ಠವಾಗಿದೆ ಎಂದು ಬಾಯಿ ಮಾತಿನಲ್ಲಿ ಹೇಳಿದರೆ ಸಾಲದು. ಸಕ್ರಿಯ ಸದಸ್ಯರನ್ನು ಆಯ್ಕೆ ಮಾಡಿಕೊಂಡು ಸದಸ್ಯತ್ವ ಮಾಡಿಸಬೇಕು’ ಎಂದು ಸೂಚನೆ ನೀಡಿದರು.

ಜೆಡಿಎಸ್‌ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ನಟರಾಜ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಮಂಗಮ್ಮ ಮುನಿಸ್ವಾಮಿ, ಮಾಜಿ ಸದಸ್ಯ ನಂಜುಂಡಪ್ಪ, ಮುಖಂಡರಾದ ಮಲ್ಲೇಶ್‍ಬಾಬು, ಜಿ.ಇ.ರಾಮೇಗೌಡ, ರಾಮು, ತಾ.ಪಂ ಮಾಜಿ ಸದಸ್ಯರಾದ ಗೋಪಾಲಗೌಡ, ಮಂಜುನಾಥ್ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.