ಬಾಕಿ ವಿದ್ಯಾರ್ಥಿವೇತನ ಬಿಡುಗಡೆಗೆ ಒತ್ತಾಯ

7
ಸಮಾಜ ಕಲ್ಯಾಣ ಇಲಾಖೆ ಕಚೇರಿ ಎದುರು ಧರಣಿ

ಬಾಕಿ ವಿದ್ಯಾರ್ಥಿವೇತನ ಬಿಡುಗಡೆಗೆ ಒತ್ತಾಯ

Published:
Updated:
Deccan Herald

ಕೋಲಾರ: ‘ಪರಿಶಿಷ್ಟ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಪಾವತಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಬಹುಜನ ಸಂಘದ ಸದಸ್ಯರು ಇಲ್ಲಿ ಸೋಮವಾರ ಸಮಾಜ ಕಲ್ಯಾಣ ಇಲಾಖೆ ಕಚೇರಿ ಎದುರು ಧರಣಿ ನಡೆಸಿದರು.

‘ಪರಿಶಿಷ್ಟ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ವಿದ್ಯಾರ್ಥಿವೇತನ ಬಿಡುಗಡೆಯಾಗಬೇಕಿತ್ತು. ಆದರೆ, ಇಲಾಖೆ ಅಧಿಕಾರಿಗಳು 5 ವರ್ಷಗಳಿಂದ ವಿದ್ಯಾರ್ಥಿವೇತನ ನೀಡದೆ ಸತಾಯಿಸುತ್ತಿದ್ದಾರೆ. ಸರ್ಕಾರ ವಿದ್ಯಾರ್ಥಿವೇತನಕ್ಕೆ ಅನುದಾನ ಬಿಡುಗಡೆ ಮಾಡಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ’ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.

‘ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕಾಗಿ ಸರ್ಕಾರ ವಿದ್ಯಾರ್ಥಿವೇತನ ನೀಡುತ್ತದೆ. ಆದರೆ, ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಸಕಾಲಕ್ಕೆ ವಿದ್ಯಾರ್ಥಿವೇತನ ಕೊಡದೆ ಶೋಷಣೆ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಪದೇ ಪದೇ ಸಮಾಜ ಕಲ್ಯಾಣ ಇಲಾಖೆ ಕಚೇರಿಗೆ ಅಲೆಯುವಂತಾಗಿದೆ’ ಎಂದು ಸಂಘದ ಸಂಸ್ಥಾಪಕ ಅಧ್ಯಕ್ಷ ನಾಗರಾಜ್ ಹೇಳಿದರು.

‘ಜಿಲ್ಲೆಯಾದ್ಯಂತ ಪರಿಶಿಷ್ಟ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಬಂದಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೆ ಹಲವು ಬಾರಿ ದೂರು ಕೊಟ್ಟಿದ್ದೇವೆ. ಆದರೆ, ಅಧಿಕಾರಿಗಳು ಸಮಸ್ಯೆ ಪರಿಹಾರಕ್ಕೆ ಗಮನ ಹರಿಸುತ್ತಿಲ್ಲ’ ಎಂದು ದೂರಿದರು.

ಅಕ್ರಮದ ಗುಮಾನಿ: ‘ವಿದ್ಯಾರ್ಥಿವೇತನ ವಿಳಂಬವಾಗಿರುವ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಅರ್ಜಿಗಳ ಪರಿಶೀಲನೆಗೆ ಸಿಬ್ಬಂದಿ ಕೊರತೆ ಎಂದು ಸಬೂಬು ಹೇಳುತ್ತಾರೆ. ಇಲಾಖೆಯಲ್ಲಿ ಸಾಕಷ್ಟು ಅಕ್ರಮ ನಡೆದಿದ್ದು, ಮಕ್ಕಳ ವಿದ್ಯಾರ್ಥಿವೇತನವನ್ನು ಅಧಿಕಾರಿಗಳೇ ದುರ್ಬಳಕೆ ಮಾಡಿಕೊಂಡಿರುವ ಗುಮಾನಿ ಇದೆ. ಈ ಬಗ್ಗೆ ಅಧಿಕಾರಿಗಳು ಗುಟ್ಟು ಬಿಟ್ಟು ಕೊಡುತ್ತಿಲ್ಲ’ ಎಂದು ಧರಣಿನಿರತರು ಆರೋಪಿಸಿದರು.

‘ಅಧಿಕಾರಿಗಳು ವಿದ್ಯಾರ್ಥಿಗಳ ಜೀವನದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಅವರಿಗೆ ವಿದ್ಯಾರ್ಥಿಗಳ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲ. ಜಿಲ್ಲಾಧಿಕಾರಿಯು ವಿದ್ಯಾರ್ಥಿವೇತನ ವಿಳಂಬವಾಗಿರುವ ಬಗ್ಗೆ ಪರಿಶೀಲನೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು. ಬಾಕಿ ವಿದ್ಯಾರ್ಥಿವೇತನವನ್ನು ಸಾಧ್ಯವಾದಷ್ಟು ಬೇಗನೆ ಬಿಡುಗಡೆ ಮಾಡಿಸಬೇಕು’ ಎಂದು ಒತ್ತಾಯಿಸಿದರು.

ಸಂಘದ ಜಿಲ್ಲಾ ಮಹಿಳಾ ಘಟಕದ ಜಿಲ್ಲಾ ಘಟಕದ ಅಧ್ಯಕ್ಷೆ ಸುಜಾತಾ, ತಾಲ್ಲೂಕು ಘಟಕದ ಅಧ್ಯಕ್ಷ ಮಂಜು ಪಾಲ್ಗೊಂಡಿದ್ದರು.

Tags: 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !