ಶನಿವಾರ, ಜನವರಿ 25, 2020
15 °C

ಪೊಲೀಸ್‌ ಲಾಠಿ ಪ್ರಹಾರ: ಪಿತೂರಿಯಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ಶಾಂತಿ ಸುವ್ಯವಸ್ಥೆ ದೃಷ್ಟಿಯಿಂದ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಇದರ ಹಿಂದೆ ಯಾವುದೇ ದುರುದ್ದೇಶವಿಲ್ಲ’ ಎಂದು ಕೇಂದ್ರ ವಲಯ ಐಜಿಪಿ ಕೆ.ವಿ.ಶರತ್‌ಚಂದ್ರ ಪೊಲೀಸರ ಲಾಠಿ ಪ್ರಹಾರದ ಕ್ರಮವನ್ನು ಸಮರ್ಥಿಸಿಕೊಂಡರು.

ಇಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಸಿಎಎ ಕಾಯ್ದೆ ಬೆಂಬಲಿಸಿ ಜನಾಂದೋಲನ ನಡೆಸಲು ಭಾರತೀಯ ಹಿತರಕ್ಷಣಾ ವೇದಿಕೆಯ ತಿಮ್ಮರಾಯಪ್ಪ ಎಂಬುವರು ಇಲಾಖೆಯ ಅನುಮತಿ ಕೋರಿದ್ದರು. ಅವರಿಗೆ ಎಂ.ಜಿ ರಸ್ತೆಯ ಚಂಪಕ್‌ ವೃತ್ತದಲ್ಲಿ ಬಹಿರಂಗ ಸಭೆ ನಡೆಸಲು ಅನುಮತಿ ನೀಡಲಾಗಿತ್ತು. ಯಾವುದೇ ಕಾರಣಕ್ಕೂ ಮೆರವಣಿಗೆ ನಡೆಸದಂತೆ ಅವರಿಗೆ ಸ್ಪಷ್ಟವಾಗಿ ಸೂಚಿಸಲಾಗಿತ್ತು’ ಎಂದು ಹೇಳಿದರು.

‘2006ರಿಂದ ಕೋಲಾರ ನಗರದಲ್ಲಿ ಶಾಂತಿ ಸುವ್ಯವಸ್ಥೆ ದೃಷ್ಟಿಯಿಂದ ಕೆಲ ರಸ್ತೆಗಳಲ್ಲಿ ಕೆಲವೊಂದು ಸಮುದಾಯಗಳ ಮೆರವಣಿಗೆ ನಿರ್ಬಂಧಿಸಲಾಗಿದೆ. ಅದರಂತೆ ಅಧಿಕಾರಿಗಳು ತಿಮ್ಮರಾಯಪ್ಪ ಅವರಿಗೆ ಕೆಲ ಷರತ್ತುಗಳನ್ನು ವಿಧಿಸಿ ಸಭೆಗೆ ಅನುಮತಿ ನೀಡಿದ್ದರು. ಆದರೆ, ಭಾರತೀಯ ಹಿತರಕ್ಷಣಾ ವೇದಿಕೆ ಸದಸ್ಯರು ಆ ಷರತ್ತುಗಳನ್ನು ಉಲ್ಲಂಘಿಸಿ ಮೆರವಣಿಗೆ ನಡೆಸಲು ಮುಂದಾದರು’ ಎಂದು ವಿವರಿಸಿದರು.

‘ವೇದಿಕೆ ಮುಖಂಡರು ಪ್ರವಾಸಿ ಮಂದಿರದ ಬಳಿ ಬ್ಯಾರಿಕೇಡ್‌ಗಳನ್ನು ತಳ್ಳಿ ಮುನ್ನುಗ್ಗಿದ್ದರಿಂದ ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕಾಗಿ ಲಾಠಿ ಪ್ರಹಾರ ನಡೆಸಿದ್ದಾರೆ. ಪೊಲೀಸ್‌ ಕ್ರಮದ ಹಿಂದೆ ಯಾವುದೇ ಪಿತೂರಿಯಿಲ್ಲ. ಘಟನೆ ಸಂಬಂಧ ತನಿಖೆ ನಡೆಸಿ ಪೊಲೀಸರಿಂದ ತಪ್ಪಾಗಿದ್ದರೆ ಶಿಸ್ತುಕ್ರಮ ಜರುಗಿಸುತ್ತೇವೆ’ ಎಂದು ಸ್ಪಷ್ಟಪಡಿಸಿದರು.

‘ಕ್ಲಾಕ್‌ಟವರ್ ಸಮೀಪ ಮತ್ತೊಂದು ಕೋಮಿನ ಸಾವಿರಾರು ಮಂದಿ ಕಾನೂನುಬಾಹಿರವಾಗಿ ಗುಂಪುಗೂಡಿ ಶಾಂತಿಗೆ ಭಂಗ ತಂದಿರುವ ಸಂಬಂಧ ತನಿಖೆಗೆ ಆದೇಶಿಸಲಾಗಿದೆ. ‘ಪ್ರಜಾವಾಣಿ’ ಪತ್ರಿಕೆಯ ಛಾಯಾಗ್ರಾಹಕರ ಮೇಲೆ ಗುಂಪೊಂದು ಹಲ್ಲೆಗೆ ಯತ್ನಿಸಿ ಕ್ಯಾಮೆರಾ ಕಸಿದುಕೊಂಡಿರುವ ಸಂಗತಿ ಗಮನಕ್ಕೆ ಬಂದಿದೆ. ಈ ಬಗ್ಗೆ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುತ್ತೇವೆ’ ಎಂದು ಭರವಸೆ ನೀಡಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು