ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾರಣ ಅಧಃಪತನಕ್ಕೆ ತಲುಪಿದೆ : ಸ್ಪೀಕರ್ ಕಿಡಿ

Last Updated 2 ಜುಲೈ 2019, 12:42 IST
ಅಕ್ಷರ ಗಾತ್ರ

ಕೋಲಾರ: ‘ರಾಜಕಾರಣ ಅದಃಪತನಕ್ಕೆ ತಲುಪಿದೆ. ಸಾರ್ವಜನಿಕ ಜೀವನಕ್ಕೆ ಮೂರು ಕಾಸು ಮರ್ಯಾದೆ ಉಳಿದಿಲ್ಲ. ಗೌರವವಾಗಿ ಸಾಯೋದಕ್ಕೆ ಆಸೆ ಪಡ್ತಾ ಇದ್ದೀರಿ ಅದಕ್ಕೂ ತೊಂದರೆ ಮಾಡುತ್ತೀರಲ್ಲ. ಕೇಳಿದ್ದನ್ನೇ ಹತ್ತು ಬಾರಿ ಕೇಳುತ್ತೀರಲ್ಲ’ ಎಂದು ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‌ಕುಮಾರ್ ಮಾದ್ಯಮಗಳ ವಿರುದ್ಧ ಕಿಡಿಕಾರಿದರು.

ನಗರದ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ್ದ ವೇಳೆ ಶಾಸಕರ ರಾಜೀನಾಮೆ ವಿಚಾರದ ಕುರಿತು ಮಾತನಾಡಿಸಲು ಮಾದ್ಯಮದವರು ಮುಂದಾಗ ಪ್ರತಿಕ್ರಿಯಿಸಿ, ‘ರಾಜೀನಾಮೆ ಕೊಡುವುದಾಗಿ ಯಾರು ಹೇಳಿದ್ದಾರೋ ಅವರನ್ನೇ ಹೋಗಿ ಪ್ರಶ್ನಿಸಿ’ ಎಂದು ಆಕ್ರೋಶದಿಂದ ಉತ್ತರಿಸಿದರು.

‘ಸಮಾಜದಲ್ಲಿ ಗೌರವವಾಗಿ ಸಾಯೋದಕ್ಕೆ ಆಸೆ ಪಡ್ತಿರುವ ನಮ್ಮನ್ನು ಕೆಳಕ್ಕೆ ತಳ್ಳುವುದಕ್ಕೆ ಯಾಕೆ ಪ್ರಯತ್ನ ಮಾಡುತ್ತಿದ್ದೀರಿ’ ಎಂದು ಅಸಮಾಧಾನವ್ಯಕ್ತಪಡಿಸಿದರು.

‘ಶಾಸಕರು ಎಲ್ಲಿ ಹೊರಟಿದ್ದಾರೆ, ಎಲ್ಲಿಗೆ ಬರುತ್ತಾರೆ, ಯಾವಾಗ ಬರುತ್ತಾರೆ, ಕಾರಲ್ಲಿ ಬರುತ್ತಾರಾ, ಹೆಲಿಕ್ಯಾಪ್ಟರ್‍ನಲ್ಲಿ ಬರುತ್ತಾರಾ ನನಗೆ ಗೊತ್ತಿಲ್ಲ. ತನಿಖಾ ತಂಡವಾಗಿ ನೀವೇ ಕಾರ್ಯನಿರ್ವಹಿಸುತ್ತಿದ್ದೀರಲ್ಲವೇ ತಿಳಿದುಕೊಳ್ಳಿ’ ಎಂದು ಸಲಹೆ ನೀಡಿದರು.

‘ಶಾಸಕ ರಮೇಶ್ ಜಾರಕಿಹೊಳಿ ಯಾರೂ ಸಹ ನನ್ನ ಬಳಿ ಬಂದಿಲ್ಲ. ನನಗೆ ಏನೂ ಕೊಟ್ಟಿಲ್ಲ, ಆನಂದ್‌ಸಿಂಗ್ ರಾಜೀನಾಮೆ ಪತ್ರ ಬಂದಿದೆ. ನನ್ನ ಕಚೇರಿಗೆ ಹೋದಾಗ ಅದನ್ನು ನೋಡಿ ನಿಯಮಾನುಸಾರ ಕ್ರಮಕೈಗೊಳ್ಳುತ್ತೇನೆ’ ಎಂದು ಪ್ರತಿಕ್ರಿಯಿಸಿದರು.

‘ನನಗೆ ಯಾರು ಸಹ ಸಮಯ ಕೇಳಿಲ್ಲ. ನನ್ನನ್ನು ಯಾರೂ ಸಂಪರ್ಕಿಸಿಲ್ಲ. ದೇಶದಲ್ಲಿ ಯಾರ್ಯಾರೋ ಏನೇನೋ ಹೇಳಿಕೆ ಕೊಟ್ಟರೆ ಅದಕ್ಕೆ ಉತ್ತರ ಕೊಡುವುದಕ್ಕೆ ನಾನು ಸಿದ್ದವಿಲ್ಲ, ಸಂವಿಧಾನಕ್ಕೆ, ಅದರ ಆಶಯಗಳಿಗೆ ತಲೆಬಾಗಿಸಿ ಗೌರವದಿಂದ ಸ್ಥಾನ ಕಾಪಾಡಿಕೊಳ್ಳುವುದು ನನ್ನ ಜವಾಬ್ದಾರಿ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT