ಕೆರೆ ಮಣ್ಣು ಬಳಕೆಗೆ ಅನುಮತಿ ನೀಡದಿದ್ದರೆ ಹೋರಾಟ

7
ಇಟ್ಟಿಗೆ ಕಾರ್ಖಾನೆಗಳ ಮಾಲೀಕರ ಸಂಘದ ತೀರ್ಮಾನ

ಕೆರೆ ಮಣ್ಣು ಬಳಕೆಗೆ ಅನುಮತಿ ನೀಡದಿದ್ದರೆ ಹೋರಾಟ

Published:
Updated:
Deccan Herald

ಕೋಲಾರ: ಇಟ್ಟಿಗೆ ತಯಾರಿಕೆಗೆ ಕೆರೆ ಮಣ್ಣು ಬಳಕೆಗೆ ಸಂಬಂಧಪಟ್ಟ ಇಲಾಖಾಧಿಗಳು ಅಡ್ಡಿಪಡಿಸುತ್ತಿದ್ದು, ಮಣ್ಣು ಬಳಕೆಗೆ ಅವಕಾಶ ನೀಡಲು ಜಿಲ್ಲಾಡಳಿತ ಕ್ರಮಕೈಗೊಳ್ಳದಿದ್ದರೆ ಹೋರಾಟ ನಡೆಸಲು ಇಟ್ಟಿಗೆ ಕಾರ್ಖಾನೆಗಳ ಮಾಲೀಕರ ಸಂಘದ ಮುಖಂಡರು ತೀರ್ಮಾನಿಸಿದರು.

ಇಟ್ಟಿಗೆ ಕಾರ್ಖಾನೆಗಳ ಮಾಲೀಕರ ಸಂಘದಿಂದ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ರಾಜಪ್ಪ, ‘ಎಲ್ಲಿಯೇ ಮಣ್ಣು ತೆಗೆಯಲು ಹೋದರೂ ಪೊಲೀಸರು, ಕಂದಾಯ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಇದಲ್ಲದೆ ಗ್ರಾಮ ಪಂಚಾಯಿತಿಗಳಿಂದಲೂ ಅಡ್ಡಿಯಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ತಾಲೂಕಿನಲ್ಲಿ ಸುಮಾರು 150 ಇಟ್ಟಿಗೆ ಕಾರ್ಖಾನೆಗಳಿದ್ದರೂ, ಕೆರೆಯಲ್ಲಿ ಮಣ್ಣು ತೆಗೆಯುವುದಕ್ಕೆ ಕೇವಲ ಒಂದು ಕಾರ್ಖಾನೆಗೆ ಮಾತ್ರವೇ ಅವಕಾಶ ನಿಡಲಾಗಿದೆ. ಎಲ್ಲಾ ಇಲಾಖೆಗಳಿಂದ ಅನುಮತಿ ಪಡೆದಿದ್ದರು ಕೆಲಸ ಮಾಡಲು ಸಾಧ್ಯವಿಲ್ಲ. ಹೀಗಾಗಿ ನಮಗೆ ಜಿಲ್ಲಾಡಳಿತದ ವತಿಯಿಂದಲೇ ಅನುಮತಿ ನೀಡಿದಾಗ ಕೆರೆಗಳಲ್ಲಿ ಮಣ್ಣನ್ನು ತೆಗೆದುಕೊಳ್ಳುತ್ತೇವೆ. ಯಾವುದೇ ಸಮಸ್ಯೆ ಎದುರಾಗುವುದಿಲ್ಲ’ ಎಂದು ಅಭಿಪ್ರಾಯಪಟ್ಟರು.

‘ಇಟ್ಟಿಗೆ ತಯಾರಿಕೆ ಮಾಲೀಕರಲ್ಲಿನ ಒಗ್ಗಟ್ಟಿನ ಕೊರತೆಯಿಂದಾಗಿ ಇಂತಹ ಸಮಸ್ಯೆಗಳು ಬಗೆಹರಿಸಿಕೊಳ್ಳಲಾಗುತ್ತಿಲ್ಲ. ಅದಕ್ಕಾಗಿಯೇ ನೂತನ ಸಂಘ ರಚಿಸಿಕೊಳ್ಳಲಾಗಿದೆ. ಈ ಮೂಲಕ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ನಮ್ಮ ಸಮಸ್ಯೆಯನ್ನು ಅರ್ಥೈಸಿ ಮಣ್ಣು ತೆಗೆಯುವುದಕ್ಕೆ ಅನುಮತಿ ಪಡೆದುಕೊಳ್ಳೋಣ’ ಎಂದು ಸಲಹೆ ನೀಡಿದರು.

‘ಮಣ್ಣು ತೆಗೆಯುವುದಕ್ಕೆ ಕಂದಾಯ, ಪೊಲೀಸ್, ಗಣಿ ಇಲಾಖೆಯವರು ಮತ್ತಷ್ಟು ತೊಂದರೆ ನೀಡುತ್ತಿದ್ದಾರೆ. ಈಗಾಗಲೇ ಮಾಲೂರು ತಾಲ್ಲೂಕು ಮಾಲೀಕರು ಅಲ್ಲಿನ ಶಾಸಕರ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ತೊಂದರೆ ನೀಡದಂತೆ ಸೂಚನೆ ನೀಡಿದ್ದಾರೆ. ಈಗಾಗಲೇ ನಾವೂ ಸಹ ವಿಧಾನಸಭಾಧ್ಯಕ್ಷ ರಮೇಶ್‌ಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಅವರಿಗೂ ಮಾಹಿತಿ ನೀಡಲಾಗಿದ್ದು, ಸಮಸ್ಯೆ ಬಗೆಹರಿಸುವುದಾಗಿ ಕೊಟ್ಟು ಮಾತು ಭರವಸೆಯಾಗಿಯೇ ಉಳಿದಿದೆ’ ಎಂದು ದೂರಿದರು.

‘ಸರ್ಕಾರ ಕೈಗಾರಿಕೆಗಳ ಸ್ಥಾಪನೆಗೆ ಬೇರೆ ಬೇರೆ ದೇಶದವರಿಗೆ ಭೂಮಿಯನ್ನು ಪರಿವರ್ತನೆ ಮಾಡುವುದು ಸೇರಿದಂತೆ ಎಲ್ಲ ಸೌಕರ್ಯ ಕಲ್ಪಿಸುತ್ತಿದೆ. ಇಲ್ಲಿನ ರೈತರು ನಡೆಸುವ ಇಟ್ಟಿಗೆ ಕಾರ್ಖಾನೆಗಳಿಗೆ ಸರ್ಕಾರ ಈವರೆಗೂ ಯಾವುದೇ ರೀತಿಯ ನೆರವನ್ನು ನೀಡಿಲ್ಲ. ಕನಿಷ್ಠ ಕೆರೆ ಮಣ್ಣು ಬಳಕೆಗೂ ಅವಕಾಶ ನೀಡದಿರುವುದು ವಿಷಾಧನೀಯ’ ಎಂದರು.

‘ಗ್ರಾಮ ಪಂಚಾಯಿತಿಯಿಂದ ಪಡೆದಿರುವ ರಸೀದಿಗಳಿದ್ದು ಅದನ್ನು ಪರಿಗಣಿಸುತ್ತಿಲ್ಲ. ಹಾಗೆಯೇ ಜಿಲ್ಲಾಡಳಿತದಿಂದಲೂ ಯಾವುದೇ ಪತ್ರವನ್ನೂ ನೀಡಿಲ್ಲ. ಹೀಗಾಗಿ ಸದ್ಯದಲ್ಲೇ ಕಾರ್ಯಕ್ರಮವನ್ನು ಆಯೋಜಿಸಿ ಜನಪ್ರತಿನಿಧಿಗಳು, ಜಿಲ್ಲಾಡಳಿತದ ಅಧಿಕಾರಿಗಳನ್ನು ಆಹ್ವಾನಿಸಿ ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ನ್ಯಾಯಕ್ಕಾಗಿ ಹೋರಾಟ ನಡೆಸುವುದು ಅನಿವಾರ್ಯ’ ಎಂದು ತಿಳಿಸಿದರು.

ಸಂಘದ ತಾಲ್ಲೂಕು ಘಟಕದ ಉಪಾಧ್ಯಕ್ಷ ಎ.ವಿ.ಜಿ.ವೆಂಕಟರೆಡ್ಡಿ, ಪ್ರಧಾನ ಕಾರ್ಯದರ್ಶಿ ಇನಾಯತ್, ಸಲಹ ಸಮಿತಿ ಸದಸ್ಯರಾದ ಗೋಪಾಲಕೃಷ್ಣ, ಕುಮಾರ್, ಮಂಜುನಾಥ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !