ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚುವರಿ ಬಸ್‌ ಸೇವೆ ಕಲ್ಪಿಸಿ: ರೈತ ಸಂಘ ಸದಸ್ಯರ ಮನವಿ

Last Updated 1 ಫೆಬ್ರುವರಿ 2021, 16:38 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಸಮರ್ಪಕ ಬಸ್‌ ಸೇವೆ ಕಲ್ಪಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಇಲ್ಲಿ ಸೋಮವಾರ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಎಸ್‌.ಚಂದ್ರಶೇಖರ್‌ ಅವರಿಗೆ ಮನವಿ ಸಲ್ಲಿಸಿದರು.

‘ಜಿಲ್ಲೆಯಲ್ಲಿ ಶಾಲಾ ಕಾಲೇಜು ಆರಂಭವಾಗಿವೆ. ಆದರೆ, ಗ್ರಾಮೀಣ ಭಾಗದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಸೇವೆ ಸಮರ್ಪಕವಾಗಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಶಾಲೆ ಕಾಲೇಜಿಗೆ ಹೋಗಿ ಬರಲು ತುಂಬಾ ತೊಂದರೆಯಾಗುತ್ತಿದೆ’ ಎಂದು ಸಂಘಟನೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

‘ಗ್ರಾಮೀಣ ಭಾಗದಿಂದ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರದಲ್ಲಿನ ಶಾಲಾ ಕಾಲೇಜುಗಳಿಗೆ ಪ್ರತಿನಿತ್ಯ ಸಾವಿರಾರು ವಿದ್ಯಾರ್ಥಿಗಳು ಬರುತ್ತಾರೆ. ಕೆಎಸ್‌ಆರ್‌ಟಿಸಿ ಬಸ್ ಚಾಲಕರು ಸಾಕಷ್ಟು ಹಳ್ಳಿಗಳಲ್ಲಿ ಬಸ್‌ ನಿಲ್ಲಿಸುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮೀಣ ಜನರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ’ ಎಂದು ಸಂಘಟನೆ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ಹೇಳಿದರು.

‘ವಿದ್ಯಾರ್ಥಿಗಳು ಮತ್ತು ಗ್ರಾಮೀಣ ಜನರು ಪ್ರಯಾಣಕ್ಕೆ ಕೆಎಸ್‌ಆರ್‌ಟಿಸಿ ಬಸ್‌ಗಳನ್ನೇ ಅವಲಂಬಿಸಿದ್ದಾರೆ. ಕೋವಿಡ್‌ ಕಾರಣಕ್ಕೆ ಈ ಹಿಂದೆ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಪ್ರಮಾಣ ಕಡಿಮೆ ಮಾಡಲಾಗಿತ್ತು. ಕೋವಿಡ್‌ ಆತಂಕ ದೂರವಾಗಿ ಜನರ ಓಡಾಟ ಸಹಜ ಸ್ಥಿತಿಗೆ ಮರಳಿದರೂ ಬಸ್‌ ಸೇವೆ ಹೆಚ್ಚು ಮಾಡಿಲ್ಲ’ ಎಂದು ತಿಳಿಸಿದರು.

ಆರ್ಥಿಕ ಹೊರೆ: ‘ವಿದ್ಯಾರ್ಥಿಗಳಿಗೆ ಹೊಸದಾಗಿ ರಿಯಾಯಿತಿ ದರದ ಬಸ್‌ ಪಾಸ್‌ ಕೊಟ್ಟಿಲ್ಲ. ನಿರ್ವಾಹಕರು ಹಳೆಯ ಪಾಸ್‌ ಮಾನ್ಯ ಮಾಡದೆ ವಿದ್ಯಾರ್ಥಿಗಳಿಗೆ ವಿನಾಕಾರಣ ತೊಂದರೆ ಕೊಡುತ್ತಿದ್ದಾರೆ. ಪಾಸ್‌ ಮಾನ್ಯ ಮಾಡದ ಕಾರಣ ಮತ್ತು ಬಸ್‌ ನಿಲ್ಲಿಸದಿರುವುದರಿಂದ ವಿದ್ಯಾರ್ಥಿಗಳು ಖಾಸಗಿ ವಾಹನಗಳಲ್ಲಿ ಹಣ ಕೊಟ್ಟು ಪ್ರಯಾಣಿಸುವಂತಾಗಿದೆ. ಇದರಿಂದ ಪೋಷಕರಿಗೆ ಆರ್ಥಿಕ ಹೊರೆಯಾಗುತ್ತಿದೆ’ ಎಂದು ಸಂಘಟನೆ ಸದಸ್ಯರು ದೂರಿದರು.

‘ಆನ್‌ಲೈನ್‌ ಮೂಲಕ ಬಸ್‌ ಪಾಸ್‌ ವಿತರಣೆ ಪ್ರಕ್ರಿಯೆಯಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಪಾಸ್‌ಗಾಗಿ ವಿದ್ಯಾರ್ಥಿಗಳು ದಿನಗಟ್ಟಲೇ ಕಾಯುವ ಪರಿಸ್ಥಿತಿ ಸೃಷ್ಟಿಯಾಗಿದೆ. ವಿದ್ಯಾರ್ಥಿಗಳು ಪಾಸ್‌ಗಾಗಿ ಸೈಬರ್ ಸೆಂಟರ್‌, ಬಸ್‌ ಡಿಪೊ, ನಿಲ್ದಾಣಕ್ಕೆ ಅಲೆಯುವಂತಾಗಿದೆ’ ಎಂದು ಆರೋಪಿಸಿದರು.

ಹೆಚ್ಚುವರಿ ಬಸ್‌ ಸೇವೆ: ‘ಗ್ರಾಮೀಣ ಮಾರ್ಗದಲ್ಲಿ ಹೆಚ್ಚುವರಿ ಬಸ್‌ ಸೇವೆ ಕಲ್ಪಿಸಬೇಕು. ಹಳ್ಳಿಗಳ ಬಳಿ ಕೋರಿಕೆ ನಿಲುಗಡೆಯ ಫಲಕ ಅಳವಡಿಸಬೇಕು. ಪಾಸ್‌ ವಿತರಣೆ ಪ್ರಕ್ರಿಯೆಯಲ್ಲಿನ ತಾಂತ್ರಿಕ ಸಮಸ್ಯೆ ಪರಿಹರಿಸಬೇಕು. ಹಳೆಯ ಪಾಸ್‌ ಮಾನ್ಯ ಮಾಡಬೇಕು. ನಿರ್ವಾಹಕರು ಹಾಗೂ ಚಾಲಕರು ವಿದ್ಯಾರ್ಥಿಗಳ ಜತೆ ಸೌಜನ್ಯದಿಂದ ವರ್ತಿಸಬೇಕು’ ಎಂದು ಒತ್ತಾಯಿಸಿದರು.

ಸಂಘಟನೆ ರಾಜ್ಯ ಘಟಕದ ಸಂಚಾಲಕ ನಾಗರಾಜಗೌಡ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಎ.ನಳಿನಿಗೌಡ, ಕೋಲಾರ ತಾಲ್ಲೂಕು ಘಟಕದ ಅಧ್ಯಕ್ಷ ಇ.ಮಂಜುನಾಥ್, ಬಂಗಾರಪೇಟೆ ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT