ಗುರುವಾರ , ಜನವರಿ 30, 2020
20 °C
ನಗರಸಭೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಮಂಜುನಾಥ್‌ ಎಚ್ಚರಿಕೆ

ಕಾಮಗಾರಿ ಗುಣಮಟ್ಟ: ರಾಜಿಯಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ನಗರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಗುಣಮಟ್ಟದಲ್ಲಿ ರಾಜಿಯಿಲ್ಲ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ನಗರಸಭೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಇಲ್ಲಿ ಶುಕ್ರವಾರ ನಗರ ಪ್ರದಕ್ಷಿಣೆ ನಡೆಸಿದ ಜಿಲ್ಲಾಧಿಕಾರಿ ಕಸ ವಿಲೇವಾರಿ ಪ್ರಕ್ರಿಯೆ, ವಿವಿಧ ಯೋಜನೆಗಳ ಕಾಮಗಾರಿ ಗುಣಮಟ್ಟ ಪರಿಶೀಲಿಸಿ ಸಾರ್ವಜನಿಕರ ಅಹವಾಲು ಆಲಿಸಿ ಮಾತನಾಡಿದರು. ಬೆಳಗಿನ ಜಾವ ನಗರಸಭೆ ಕಚೇರಿಗೆ ದಿಢೀರ್‌ ಬೇಟಿ ನೀಡಿದ ಜಿಲ್ಲಾಧಿಕಾರಿಯು ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಜಲಕಂಠೇಶ್ವರ ಉದ್ಯಾನಕ್ಕೆ ತೆರಳಿದರು.

‘ನಗರದಲ್ಲಿನ ಉದ್ಯಾನಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಉದ್ಯಾನಗಳಲ್ಲಿ ಹೂವು ಮತ್ತು ಹಣ್ಣಿನ ಗಿಡ ಬೆಳೆಸಬೇಕು. ಸ್ವಚ್ಛತೆ ಕಾಪಾಡಲು ಸಾರ್ವಜನಿಕರು ನಗರಸಭೆ ಸಿಬ್ಬಂದಿಗೆ ಸಹಕರಿಸಬೇಕು’ ಎಂದು ಮನವಿ ಮಾಡಿದರು.

ಜಿಲ್ಲಾ ಕಾರಾಗೃಹದ ಬಳಿ ರಸ್ತೆಯಲ್ಲಿ ಸುರಕ್ಷತಾ ಸಲಕರಣೆ ಧರಿಸದೆ ಕಸ ತೆರವುಗೊಳಿಸುತ್ತಿದ್ದ ಪೌರ ಕಾರ್ಮಿಕರನ್ನು ಭೇಟಿಯಾದ ಜಿಲ್ಲಾಧಿಕಾರಿ, ‘ಮುಖಗವುಸು (ಮಾಸ್ಕ್) ಮತ್ತು ಕೈಗವುಸು (ಗ್ಲೌಸ್‌್) ಕೆಲಸ ಮಾಡಬಾರದು. ಪೌರ ಕಾರ್ಮಿಕರು ಕಸ ತೆಗೆಯುವಾಗ ಕಡ್ಡಾಯವಾಗಿ ಬೂಟು ಧರಿಸಬೇಕು ಮತ್ತು ಸುರಕ್ಷತಾ ಕ್ರಮ ಅನುಸರಿಸಬೇಕು’ ಎಂದು ಸೂಚಿಸಿದರು.

‘ನಗರದ ಎಲ್ಲಾ ಬಡಾವಣೆಗಳಲ್ಲೂ ಕಸ ವಿಲೇವಾರಿ ಪ್ರಕ್ರಿಯೆ ಸಮರ್ಪಕವಾಗಿ ನಡೆಯಬೇಕು. ಜಿಲ್ಲಾ ಕೇಂದ್ರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ನಗರವಾಸಿಗಳು ಮನೆಯಲ್ಲೇ ಹಸಿ ಮತ್ತು ಒಣ ಕಸ ವಿಂಗಡಿಸಿ ಪೌರ ಕಾರ್ಮಿಕರಿಗೆ ವಿಲೇವಾರಿ ಮಾಡಬೇಕು. ಮನಬಂದಂತೆ ರಸ್ತೆ ಬದಿಯಲ್ಲಿ ಅಥವಾ ಖಾಲಿ ನಿವೇಶನಗಳಲ್ಲಿ ಕಸ ಸುರಿಯಬಾರದು’ ಎಂದು ತಿಳಿಸಿದರು.

ಕುರುಬರಪೇಟೆ ಬಡಾವಣೆಯಲ್ಲಿನ ರಸ್ತೆ, ಒಳಚರಂಡಿ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿದರು. ಅಮೃತ್ ಸಿಟಿ ಯೋಜನೆ ಮತ್ತು ನಗರೋತ್ಥಾನ ಯೋಜನೆಯಲ್ಲಿ ನಡೆದಿರುವ ಕಾಮಗಾರಿಗಳನ್ನು ಪರಿಶೀಲಿಸಿದರು.

ಚಿತಾಗಾರ ಸುಪರ್ದು 

ರಹಮತ್‌ನಗರ ಹಿಂದೂ ರುದ್ರಭೂಮಿಯಲ್ಲಿ ಹೊಸದಾಗಿ ನಿರ್ಮಿಸಿರುವ ವಿದ್ಯುತ್ ಚಿತಾಗಾರ ಪರಿಶೀಲಿಸಿದ ಜಿಲ್ಲಾಧಿಕಾರಿ, ‘ಚಿತಾಗಾರದಲ್ಲಿನ ಬಾಕಿ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸಿ ನಗರಸಭೆ ಸುಪರ್ದಿಗೆ ತೆಗೆದುಕೊಳ್ಳಿ’ ಎಂದು ನಗರಸಭೆ ಆಯುಕ್ತ ಶ್ರೀಕಾಂತ್ ಅವರಿಗೆ ಸೂಚನೆ ನೀಡಿದರು. ವಾಲ್ಮೀಕಿ ಭವನ ಕಾಮಗಾರಿ ಪರಿಶೀಲಿಸಿ 15 ದಿನದೊಳಗೆ ಭವನ ಉದ್ಘಾಟಿಸಬೇಕು ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು