ಜಿಲ್ಲೆಯಾದ್ಯಂತ ರಾಮನವಮಿ ಆಚರಣೆ

ಶುಕ್ರವಾರ, ಏಪ್ರಿಲ್ 19, 2019
27 °C
ಎಲ್ಲೆಡೆ ಶ್ರೀರಾಮ ನಾಮ ಸ್ಮರಣೆ: ಪಾನಕ ಕೋಸಂಬರಿ ವಿತರಣೆ

ಜಿಲ್ಲೆಯಾದ್ಯಂತ ರಾಮನವಮಿ ಆಚರಣೆ

Published:
Updated:
Prajavani

ಕೋಲಾರ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ರಾಮನವಮಿಯನ್ನು ಶನಿವಾರ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಜಿಲ್ಲೆಗೂ ಶ್ರೀರಾಮ ನವಮಿಗೂ ವಿಶೇಷ ನಂಟು. ಇಲ್ಲಿ ಶ್ರೀರಾಮನ ಭಕ್ತ ಹನುಮನಿಲ್ಲದ ಊರು, ಕೇರಿಯೇ ಇಲ್ಲ. ಹಬ್ಬದ ಪ್ರಯುಕ್ತ ಶ್ರೀರಾಮ ದೇವಸ್ಥಾನ ಮತ್ತು ಆಂಜನೇಯ ದೇವಸ್ಥಾನಗಳಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಪೂಜೆ ನಡೆಯಿತು. ಭಕ್ತರು ಶ್ರೀರಾಮ ಸ್ಮರಣೆಯಲ್ಲಿ ತೊಡಗಿದ್ದ ದೃಶ್ಯ ಎಲ್ಲೆಡೆ ಕಂಡುಬಂತು. ನಗರದ ಬೀದಿ ಬೀದಿಯಲ್ಲಿ ಪಾನಕ, ಮಜ್ಜಿಗೆ, ಹೆಸರು ಬೇಳೆ ವಿನಿಯೋಗ ನಡೆಯಿತು.

ದೊಡ್ಡಪೇಟೆಯ ಶ್ರೀರಾಮ ದೇವಸ್ಥಾನ, ವೆಂಕಟರಮಣಸ್ವಾಮಿ, ಬ್ರಾಹ್ಮಣರ ಬೀದಿಯ ಕೋದಂಡರಾಮ, ದೊಡ್ಡ ಆಂಜನೇಯಸ್ವಾಮಿ, ಕುರುಬರಪೇಟೆಯ ಪಂಚಮುಖಿ ಗಣಪತಿ, ನಗರದೇವತೆ ಕೋಲಾರಮ್ಮ ದೇವಾಲಯ, ಕೊಂಡರಾಜನಹಳ್ಳಿ ಆಂಜನೇಯಸ್ವಾಮಿ ದೇವಾಲಯವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.

ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿಯ ಶ್ರೀರಾಮದೇವರ ಗುಡಿಯಲ್ಲಿ ಅಭಿಷೇಕ ಮತ್ತು ವಿಶೇಷ ಪೂಜೆ ನಡೆಯಿತು. ಇಡೀ ದೇವಾಲಯವನ್ನು ಹೂಗಳಿಂದ ಸಿಂಗರಿಸಲಾಗಿತ್ತು. ಪೂಜೆ ಬಳಿಕ ಉತ್ಸವ ಮೂರ್ತಿಯ ಮೆರವಣಿಗೆ ಮತ್ತು ಅನ್ನದಾನ ನಡೆಯಿತು.

ಭಕ್ತರು ದೇವಾಲಯಗಳಲ್ಲಿ ದೇವರ ದರ್ಶನಕ್ಕಾಗಿ ಮುಂಜಾನೆಯಿಂದಲೇ ಸಾಲುಗಟ್ಟಿ ನಿಂತಿದ್ದರು. ಅಭಿಷೇಕ, ಮಹಾ ಸುದರ್ಶನ ಹೋಮ, ರಾಮತಾರಕ ಹೋಮ, ರಾಮಾಯಣ ಪಾರಾಯಣ, ವೇದ ಪಾರಾಯಣ, ಮಹಾ ಮಂಗಳಾರತಿ ನೆರವೇರಿತು. ಹಲವು ಭಕ್ತರು ಉಪವಾಸ ವ್ರತ ಆಚರಿಸಿ ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಪಾನಕ, ಕೋಸಂಬರಿ, ಮಜ್ಜಿಗೆ ಸೇವಿಸಿದರು.

ವಿವಿಧ ಸಂಘ ಸಂಸ್ಥೆಗಳು, ಬಜರಂಗದಳ, ಹಿಂದೂಪರ ಸಂಘಟನೆಗಳ ಸದಸ್ಯರು ಹಾಗೂ ವ್ಯಾಪಾರಿಗಳು ದೊಡ್ಡಪೇಟೆ, ಗಾಂಧಿಚೌಕ, ಎಂ.ಬಿ.ರಸ್ತೆ, ಗಲ್‌ಪೇಟೆ, ಪಿ.ಸಿ ಬಡಾವಣೆ, ಟೇಕಲ್‌ ರಸ್ತೆ, ಎಸ್‌ಎನ್‌ಆರ್‌ ಜಿಲ್ಲಾ ಆಸ್ಪತ್ರೆ ಆವರಣದ ಗಣಪತಿ ದೇವಾಲಯದ ಮುಂಭಾಗ, ಎಪಿಎಂಸಿ, ನಗರದ ಹೊರವಲಯದ ತೋಟಗಾರಿಕಾ ಮಹಾವಿದ್ಯಾಲಯದ ಬಳಿ, ಕೀಲುಕೋಟೆ ಸೇರಿದಂತೆ ಪ್ರಮುಖ ವೃತ್ತ ಮತ್ತು ರಸ್ತೆಗಳಲ್ಲಿ ಪೆಂಡಾಲ್‌ ಹಾಕಿ ಸಾರ್ವಜನಿಕರಿಗೆ ಮಜ್ಜಿಗೆ, ಪಾನಕ, ಕೋಸಂಬರಿ ವಿತರಿಸಿದರು. ಸುಡು ಬಿಸಿಲಿನಲ್ಲಿ ಬಸವಳಿದಿದ್ದ ಜನ ಮಜ್ಜಿಗೆ, ಪಾನಕ ಸೇವಿಸಿ ಸಂತೃಪ್ತರಾದರು.

ಭಜನಾ ಮಂಡಳಿಗಳು ರಾತ್ರಿ ಶ್ರೀರಾಮ ಭಜನೆ, ಹನುಮಾನ್ ಕೀರ್ತನೆ, ಸಂಗೀತ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ದೇವಾಲಯಗಳ ಬಳಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.

ವಸ್ತ್ರ ದಾನ: ಶ್ರೀರಾಮನಮಿ ಅಂಗವಾಗಿ ಬಜರಂಗ ದಳ ಕಾರ್ಯಕರ್ತರು ಶ್ರೀರಾಮ, ಸೀತಾ ಮಾತೆಗೆ ಅರ್ಪಿಸುವ ವಸ್ತ್ರಗಳನ್ನು ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿಯ ಶ್ರೀರಾಮ ಗುಡಿಗೆ ಅರ್ಪಿಸಿದರು. ಕೇಸರ ಧ್ವಜ ಹಿಡಿದಿದ್ದ ಕಾರ್ಯಕರ್ತರು ದಾರಿಯುದ್ದಕ್ಕೂ ಶ್ರೀರಾಮನಿಗೆ ಜೈಕಾರ ಕೂಗಿದರು. ಬಳಿಕ 25 ಪೌರ ಕಾರ್ಮಿಕರಿಗೆ ವಸ್ತ್ರ ದಾನ ಮಾಡಿ ಸತ್ಕರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !