ಶುಕ್ರವಾರ, ಮೇ 20, 2022
23 °C

ಕೋಲಾರ: ಕೆರೆ ಒತ್ತುವರಿ ತೆರವಿಗೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ತಾಲ್ಲೂಕಿನ ಕೋಟಿಗಾನಹಳ್ಳಿ ಗ್ರಾಮದ ಕೆರೆ ಜಾಗ ಸರ್ವೆ ಮಾಡಿ ಒತ್ತುವರಿ ತೆರವುಗೊಳಿಸಬೇಕೆಂದು ಒತ್ತಾಯಿಸಿ ರಾಜ್ಯ ರೈತ ಸೇನೆ ಸದಸ್ಯರು ಇಲ್ಲಿ ಬುಧವಾರ ಉಪ ವಿಭಾಗಾಧಿಕಾರಿ ವಿ.ಸೋಮಶೇಖರ್ ಅವರಿಗೆ ಮನವಿ ಸಲ್ಲಿಸಿದರು.

‘ಗ್ರಾಮದ ಕೆರೆ, ಸ್ಮಶಾನ ಹಾಗೂ ಸರ್ಕಾರಿದ ಜಾಗದ ಒತ್ತುವರಿ ಸಂಬಂಧ ತಹಶೀಲ್ದಾರ್‌ಗೆ ಹಲವು ಬಾರಿ ನೀಡಿದ್ದರೂ ಸರ್ವೆ ಮಾಡಿಲ್ಲ. ಈ ಸಂಬಂಧ ಚರ್ಚಿಸಲು ತಾಲ್ಲೂಕು ಕಚೇರಿಗೆ ಹೋದರೆ ತಹಶೀಲ್ದಾರ್‌ ಸೌಜನ್ಯಕ್ಕೂ ಮನವಿ ಸ್ವೀಕರಿಸುತ್ತಿಲ್ಲ’ ಎಂದು ಸಂಘಟನೆ ಸದಸ್ಯರು ದೂರಿದರು.

‘ಕೋಟಿಗಾನಹಳ್ಳಿ ಗ್ರಾಮದ ಕೆರೆ 12 ಎಕರೆ ವಿಸ್ತಾರವಾಗಿದೆ. ಈ ಪೈಕಿ ಸ್ವಲ್ಪ ಜಾಗವನ್ನು ಗ್ರಾಮದ ಖಾಸಗಿ ವ್ಯಕ್ತಿ ಹೆಸರಿಗೆ ಖಾತೆ ಮಾಡಲಾಗಿತ್ತು. ಗ್ರಾಮಸ್ಥರು ಇದರ ವಿರುದ್ಧ ದೂರು ನೀಡಿದ ನಂತರ ಖಾತೆ ರದ್ದುಪಡಿಸಿ ಸರ್ವೆಗೆ ಆದೇಶ ಹೊರಡಿಸಲಾಗಿದೆ. ಆದರೆ, ತಹಶೀಲ್ದಾರ್ ಸರ್ವೆ ಮಾಡಿಸಲು ಮೀನಮೇಷ ಎಣಿಸುತ್ತಿದ್ದಾರೆ’ ಎಂದು ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ್‌ಗೌಡ ಅಸಮಾಧಾನ ವ್ಯಕ್ತಪಡಿಸಿದರು.

‘ಸರ್ವೆಯರ್‌ ಮತ್ತು ಕಂದಾಯ ನಿರೀಕ್ಷಕರು ಕೆರೆ ಸರ್ವೆ ಕಾರ್ಯಕ್ಕಾಗಿ ಗ್ರಾಮಕ್ಕೆ ಬಂದಿದ್ದಾಗ ಒತ್ತುವರಿದಾರರು ಬೆದರಿಕೆ ಹಾಕಿದ್ದಾರೆ. ಈ ಸಂಗತಿಯನ್ನು ಹಿರಿಯ ಅಧಿಕಾರಗಳ ಗಮನಕ್ಕೆ ತರದ ಸರ್ವೆಯರ್‌ ಮತ್ತು ಕಂದಾಯ ನಿರೀಕ್ಷಕರು ಕೆರೆ ಕಟ್ಟೆ ಹಾಗೂ ಗ್ರಾಮದ ಭಾಗದಲ್ಲಿ ಸರ್ವೆ ಮಾಡಿರುವುದಾಗಿ ಸುಳ್ಳು ಹೇಳಿ ವಾಸವಿರುವ ಮನೆಗಳಿಗೆ ಗಡಿ ಗುರುತಿಸಿದ್ದಾರೆ’ ಎಂದು ಆರೋಪಿಸಿದರು.

ಸುಳ್ಳು ವರದಿ: ‘ಸರ್ವೆ ಕಾರ್ಯದಲ್ಲಿ ತಾರತಮ್ಯವಾಗಿದೆ. ಕೆರೆ ಮುಳುಗಡೆ ಜಾಗ ಒತ್ತುವರಿಯಾಗಿದ್ದು, ಆ ಭಾಗದಲ್ಲಿ ಸರ್ವೆ ಮಾಡಿಲ್ಲ. ಆದರೂ ಸರ್ವೆಯರ್‌ ಮತ್ತು ಕಂದಾಯ ನಿರೀಕ್ಷಕರು ಸುಳ್ಳು ವರದಿ ಕೊಟ್ಟು ಹಿರಿಯ ಅಧಿಕಾರಿಗಳ ದಿಕ್ಕು ತಪ್ಪಿಸುತ್ತಿದ್ದಾರೆ. ಈ ಸುಳ್ಳು ವರದಿ ಆಧರಿಸಿ ತಹಶೀಲ್ದಾರ್‌ ಒತ್ತುವರಿ ತೆರವುಗೊಳಿಸಲು ಮುಂದಾಗಿದ್ದಾರೆ’ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಮನವಿಗೆ ಸ್ಪಂದಿಸಿದ ಉಪ ವಿಭಾಗಾಧಿಕಾರಿಯು, ‘ಗ್ರಾಮಕ್ಕೆ ಖುದ್ದು ಭೇಟಿ ನೀಡಿ ಕೆರೆ ಜಾಗವನ್ನು ಸಂಪೂರ್ಣವಾಗಿ ಸರ್ವೆ ಮಾಡಿಸುತ್ತೇವೆ. ಆ ನಂತರ ಒತ್ತುವರಿ ತೆರವು ಮಾಡಿಸುತ್ತೇವೆ’ ಎಂದು ಭರವಸೆ ನೀಡಿದರು.

ಸಂಘಟನೆ ಜಿಲ್ಲಾ ಘಟಕದ ಗೌರವಾಧ್ಯಕ್ಷ ಕೆ.ಬಿ.ಮುನಿವೆಂಕಟಪ್ಪ, ಸಂಘಟನಾ ಕಾರ್ಯದರ್ಶಿ ಚಲಪತಿ, ಉಪಾಧ್ಯಕ್ಷ ಶ್ರೀಧರ್, ಸಂಚಾಲಕ ಮಕ್ಸೂದ್ ಪಾಷಾ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು