ಸಾಮಾಜಿಕ ನ್ಯಾಯ: ಬಿಜೆಪಿ ವಿಫಲ-ಎಂ.ನಾರಾಯಣಸ್ವಾಮಿ

ಭಾನುವಾರ, ಏಪ್ರಿಲ್ 21, 2019
26 °C

ಸಾಮಾಜಿಕ ನ್ಯಾಯ: ಬಿಜೆಪಿ ವಿಫಲ-ಎಂ.ನಾರಾಯಣಸ್ವಾಮಿ

Published:
Updated:

ಕೋಲಾರ: ‘ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 3 ಮೀಸಲು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯು ಸಾಮಾಜಿಕ ನ್ಯಾಯ ದೊರಕಿಸುವಲ್ಲಿ ವಿಫಲವಾಗಿದೆ. ಹೀಗಾಗಿ ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಅವರನ್ನು ಬೆಂಬಲಿಸುತ್ತೇನೆ’ ಎಂದು ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ತಿಳಿಸಿದರು.

ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ರಾಜ್ಯದಲ್ಲಿ 5 ಮೀಸಲು ಲೋಕಸಭಾ ಕ್ಷೇತ್ರಗಳಿವೆ. ಆದರೆ, ಈ ಪೈಕಿ ಯಾವುದೇ ಕ್ಷೇತ್ರದಲ್ಲೂ ಭೋವಿ ಸಮುದಾಯದ ಅಭ್ಯರ್ಥಿಗೆ ಬಿಜೆಪಿ ಟಿಕೆಟ್ ಕೊಟ್ಟಿಲ್ಲ’ ಎಂದು ದೂರಿದರು.

‘ಕನಿಷ್ಠ ಒಂದು ಕ್ಷೇತ್ರದಲ್ಲಿ ಭೋವಿ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂದು ಸಮುದಾಯದ ಸ್ವಾಮೀಜಿ ಸಿದ್ಧರಾಮೇಶ್ವರ ಅವರ ನೇತೃತ್ವದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದೆವು’ ಎಂದು ವಿವರಿಸಿದರು.

‘ಕೋಲಾರ ಕ್ಷೇತ್ರದಲ್ಲಿ ರಮೇಶ್‌ಬಾಬು, ಶಂಕರ್ ಬಿಜೆಪಿಯ ಟಿಕೆಟ್‌ ಆಕಾಂಕ್ಷಿಗಳಾಗಿದ್ದರು. ಇವರಲ್ಲಿ ಒಬ್ಬರಿಗೆ ಟಿಕೆಟ್‌ ಕೊಡುವುದಾಗಿ ಯಡಿಯೂರಪ್ಪ ಭರವಸೆ ಕೊಟ್ಟಿದ್ದರು. ಆದರೆ, ಕೊನೆ ಗಳಿಗೆಯಲ್ಲಿ ಟಿಕೆಟ್‌ ನೀಡದೆ ಸಮುದಾಯಕ್ಕೆ ವಂಚಿಸಿದ್ದಾರೆ’ ಎಂದು ಆರೋಪಿಸಿದರು.

‘ರಾಜ್ಯದಲ್ಲಿ ಕಾಂಗ್ರೆಸ್– ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರದಲ್ಲಿದೆ. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರು ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮೈತ್ರಿ ಧರ್ಮ ಪಾಲನೆ ಮಾಡುವಂತೆ ಆದೇಶಿಸಿದ್ದು, ಈ ಸೂಚನೆಯಂತೆ ಮೈತ್ರಿ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಅವರಿಗೆ ಬೆಂಬಲ ನೀಡುತ್ತೇವೆ’ ಎಂದು ಸ್ಪಷ್ಟಪಡಿಸಿದರು.

ಪರಿಚಯಿಸಬೇಕಿಲ್ಲ: ‘ಬಿಜೆಪಿ ಅಭ್ಯರ್ಥಿಯ ಪೂರ್ವಾಪರವನ್ನು ಜನರಿಗೆ ಹೊಸದಾಗಿ ಪರಿಚಯಿಸಬೇಕಿಲ್ಲ. ಜಿಲ್ಲೆಯ ಜನ ಬಿಜೆಪಿ ಅಭ್ಯರ್ಥಿಗೆ ಮತ ನೀಡಿದರೆ ಕ್ಷೇತ್ರದಲ್ಲಿ ಶಾಂತಿ ಸುವ್ಯವಸ್ಥೆ ಹಾಳಾಗುತ್ತದೆ. ಆದ ಕಾರಣ ಮತದಾರರು ಬಿಜೆಪಿ ಅಭ್ಯರ್ಥಿಯನ್ನು ತಿರಸ್ಕರಿಸಿ ಕಾಂಗ್ರೆಸ್‌–ಜೆಡಿಎಸ್ ಮೈತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು’ ಎಂದು ಕೋರಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !