ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೀಘ್ರದಲ್ಲಿ ಎಪಿಎಂಸಿಗೆ ಜಾಗ: ಸಿ.ಸತ್ಯಭಾಮ

ವಿಶ್ವ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸತ್ಯಭಾಮ
Last Updated 24 ಡಿಸೆಂಬರ್ 2020, 3:13 IST
ಅಕ್ಷರ ಗಾತ್ರ

ಕೋಲಾರ: ಎಪಿಎಂಸಿ, ಹೂ ಮಾರುಕಟ್ಟೆ ಜಾಗದ ಸಮಸ್ಯೆಯ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ಹತ್ತು ಎಕರೆ ಜಾಗ ಬೇಕಾಗಿದೆ. ಶೀಘ್ರದಲ್ಲಿ ಎಪಿಎಂಸಿಗೆ ಜಾಗ ನೀಡಲಾಗುವುದು. ಅದರಲ್ಲಿಯೇ ಒಂದು ಭಾಗವನ್ನು ಹೂವಿನ ಮಾರುಕಟ್ಟೆಗೆ ಮೀಸಲಿಡುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಹೇಳಿದರು.

ನಗರದಲ್ಲಿ ಬುಧವಾರ ವಿಶ್ವ ರೈತ ದಿನಾಚರಣೆ ಮತ್ತು ರೈತ ಮುಖಂಡ ಕೆ.ಎಸ್‌.ಪುಟ್ಟಣ್ಣಯ್ಯ ಅವರ ಜನ್ಮದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೋವಿಡ್‌ ಸಂಕಷ್ಟದ ಸಮಯದಲ್ಲಿಯೂ ಜಿಲ್ಲಾಡಳಿತವು ಕೆರೆ, ರಾಜಕಾಲುವೆ ಮೊದಲಾದ ಒತ್ತುವರಿಗಳನ್ನು ತೆರವುಗೊಳಿಸುವ ಕಾರ್ಯವನ್ನು ಯಶಸ್ವಿಯಾಗಿ ನಡೆಸಿದೆ. ರೈತರ ಕೋರಿಕೆಯಂತೆ ಕೆರೆ ಒತ್ತುವರಿ ತೆರವು ಕಾರ್ಯವನ್ನು ನಡೆಸುವುದಾಗಿ ಜಿಲ್ಲಾಧಿಕಾರಿ ಹೇಳಿದರು.

ಜಿಲ್ಲೆಯಲ್ಲಿ ಕೈಗಾರಿಕೆ ಅಭಿವೃದ್ಧಿಗೆ ಒತ್ತು ಕೊಡಲಾಗಿದೆ. ಕೈಗಾರಿಕೆಗೆ ಪಡೆದ ಜಾಗಕ್ಕೆ ತಕ್ಕ ಬೆಲೆಯನ್ನು ಕೊಡಲಾಗಿದೆ. ಜಿಲ್ಲೆಯ ಮಿಂಡಹಳ್ಳಿ ಬಳಿ ಎಕರೆಗೆ ₹1.30 ಕೋಟಿ ನೀಡಲು ಪ್ರಸ್ತಾವನೆ ಸಲ್ಲಿಸಲಾಗಿದ್ದು, ₹1.10 ಕೋಟಿ ನೀಡಲು ಒಪ್ಪಿಗೆ ದೊರೆತಿದೆ ಎಂದರು.

ಬಂಗಾರಪೇಟೆಯ ರೈತ ಚಂದ್ರಪ್ಪ ಅವರೊಂದಿಗೆ ಡಿ.25ರಂದು ಪ್ರಧಾನ ಮಂತ್ರಿ ನೇರ ಸಂವಾದ ನಡೆಸಲಿದ್ದಾರೆ. ಜಿಲ್ಲೆಯ ರೈತ ಆಯ್ಕೆಯಾಗಿರುವುದು ನಮ್ಮ ಭಾಗ್ಯವಾಗಿದೆ. ಇನ್ನೂ ಹೆಚ್ಚಿನ ರೈತರು ಇದೇ ರೀತಿ ಆಯ್ಕೆಯಾಗಬೇಕು ಎಂದು ಜಿಲ್ಲಾಧಿಕಾರಿ
ಹೇಳಿದರು.

ಭೂಮಿ ತಾಯಿಗೆ ಸಮ. ಆಕೆಯನ್ನು ನಂಬಿದವರಿಗೆ ಎಂದೂ ಆಕೆ ಕೈಬಿಡುವುದಿಲ್ಲ. ರೈತನ ಬವಣೆ ಎಲ್ಲರಿಗೂ ಅರ್ಥವಾಗಬೇಕು. ರೈತರ ಬೆಂಬಲಕ್ಕೆ ಎಲ್ಲರೂ ನಿಲ್ಲಬೇಕು. ಬೆಳೆಗೆ ಆಸರೆಯಾಗಿರುವ ಕೆರೆ ಕುಂಟೆ, ರಾಜಕಾಲುವೆಗಳನ್ನು ಮುಲಾಜಿಲ್ಲದೆ ತೆರವುಗೊಳಿಸಲಾಗುವುದು. ಬೇಸಿಗೆ ಬಂದಿರುವುದರಿಂದ ತೆರವು ಕಾರ್ಯ ಕೂಡ ಸುಲಭವಾಗುತ್ತದೆ ಎಂದರು.

ಉಪ ವಿಭಾಗಾಧಿಕಾರಿ  ಸೋಮಶೇಖರ್ ಮಾತನಾಡಿ, ಕೆ.ಸಿ.ವ್ಯಾಲಿ ನೀರು ಬಹುತೇಕ ಕಡೆಗೆ ಬಂದಿದೆ. ಇನ್ನು ಮುಂದಿನ ದಿನಗಳಲ್ಲಿ ರೈತರ ಬದುಕು ಹಸನಾಗುತ್ತದೆ ಎಂದರು.

ರೈತ ಸಂಘದ ಮುಖಂಡ ಕೆ.ಶ್ರೀನಿವಾಸಗೌಡ ಮಾತನಾಡಿ, ಕೆರೆಗಳ ಒತ್ತುವರಿ ತೆರವುಗೊಳಿಸುವ ಬಗ್ಗೆ ಹಲವಾರು ಹೋರಾಟಗಳನ್ನು ಮಾಡಿ, ದಾಖಲೆಗಳನ್ನು ನೀಡಲಾಗಿದೆ. ಕೆಲವು ಪ್ರಕರಣಗಳನ್ನು ದಾಖಲು ಮಾಡಿಲಾಗಿದೆ. ಆದರೆ ಒತ್ತುವರಿ ತೆರವು ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರೈತರು, ಯೋಧರು ಹಾಗೂ ಕೊರೊನಾ ವಾರಿಯರ್ಸ್‌ಗಳನ್ನು ಸನ್ಮಾನಿಸಲಾಯಿತು. ಮುಖಂಡ ರಾಜಪ್ಪ, ಕೆ.ನಾರಾಯಣಗೌಡ, ನಾಗರಾಜಗೌಡ, ಎ.ನಳಿನಿಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT