ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ: ಅಕ್ರಮಕ್ಕೆ ಅವಕಾಶ ಬೇಡ

ಸಭೆಯಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಜಿ.ಪಂ ಸಿಇಒ ಜಗದೀಶ್‌ ಸೂಚನೆ
Last Updated 14 ಮಾರ್ಚ್ 2019, 15:27 IST
ಅಕ್ಷರ ಗಾತ್ರ

ಕೋಲಾರ: ‘ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನಡೆಯದಂತೆ ಎಚ್ಚರ ವಹಿಸಬೇಕು. ಕಳಂಕ ಬಂದರೆ ಶಿಸ್ತುಕ್ರಮ ಜರುಗಿಸುತ್ತೇನೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಜಗದೀಶ್ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆ ಸಿದ್ಧತೆ ಕುರಿತು ಇಲ್ಲಿ ಗುರುವಾರ ನಡೆದ ಸಭೆಯಲ್ಲಿ ಮಾತನಾಡಿ, ‘ಪರೀಕ್ಷೆಯಲ್ಲಿ ನಕಲು ಮಾಡುವುದು, ವಿದ್ಯಾರ್ಥಿ ಡಿಬಾರ್ ಆಗುವುದು ಸೇರಿದಂತೆ ಯಾವುದೇ ರೀತಿಯ ಕಳಂಕ ಜಿಲ್ಲೆಗೆ ಬರುವುದಕ್ಕೆ ಅವಕಾಶ ನೀಡಬಾರದು’ ಎಂದು ತಾಕೀತು ಮಾಡಿದರು.

‘ಫಲಿತಾಂಶ ಹೆಚ್ಚಿಸುವ ಉದ್ದೇಶಕ್ಕಾಗಿ ಈ ಹಿಂದೆ ಪರೀಕ್ಷೆಯಲ್ಲಿ ಅಕ್ರಮಕ್ಕೆ ಅವಕಾಶ ನೀಡಲಾಗುತ್ತಿತ್ತು. ಶಿಕ್ಷಕರೇ ಮುಂದೆ ನಿಂತು ಸಾಮೂಹಿಕ ನಕಲು ಮಾಡಿಸುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಈ ಪದ್ಧತಿ ಇಲ್ಲವಾಗಿದೆಯಾದರೂ ಕೆಲವು ಕಡೆ ನಡೆಯುತ್ತಿದೆ’ ಎಂದರು.

‘ಗುಣಮಟ್ಟದ ಫಲಿತಾಂಶಕ್ಕಾಗಿ ಈಗಾಗಲೇ ಸಾಕಷ್ಟು ಪ್ರಯತ್ನ ಪಟ್ಟಿದ್ದೀರಿ. ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಕೆಲಸ ಮಾತ್ರವಿರಲಿ, ನಿಮ್ಮ ಹಸ್ತಕ್ಷೇಪ ಬೇಡ. ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವ ವಿದ್ಯಾರ್ಥಿಗಳು ಮುಂದಿನ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದಕ್ಕೆ ಅಗತ್ಯ ವ್ಯವಸ್ಥೆ ಮಾಡಿ. ಸಿ.ಸಿ ಕ್ಯಾಮೆರಾ, ಆಸನ ವ್ಯವಸ್ಥೆ ಉತ್ತಮವಾಗಿರಬೇಕು’ ಎಂದು ಸಲಹೆ ನೀಡಿದರು.

ಪೊಲೀಸ್ ಭದ್ರತೆ: ‘ಉತ್ತರ ಪತ್ರಿಕೆ ಬಂಡಲ್‌ಗಳನ್ನು ಎಲ್ಲಾ ವಿಷಯದ ಪರೀಕ್ಷೆಗಳು ಮುಗಿಯುವವರೆಗೂ ಡಿಡಿಪಿಐ ಕಚೇರಿಯ ಕೊಠಡಿಯಲ್ಲಿ ಇರಿಸಲಾಗುವುದು. ಆ ಕೊಠಡಿಗೆ ಪೊಲೀಸ್ ಭದ್ರತೆ ಕಲ್ಪಿಸಲಾಗುತ್ತದೆ ಮತ್ತು ಸಿ.ಸಿ ಕ್ಯಾಮೆರಾ ಅಳವಡಿಸಲಾಗುತ್ತದೆ’ ಎಂದು ಅಧಿಕಾರಿಗಳ ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಗದೀಶ್, ‘ಚುನಾವಣೆ ನಂತರ ಮತ ಪೆಟ್ಟಿಗೆಗಳನ್ನು ಸಂಗ್ರಹಿಸುವ ಭದ್ರತಾ ಕೊಠಡಿಗೆ ನೀಡುವಂತೆಯೇ ಉತ್ತರ ಪತ್ರಿಕೆಯ ಬಂಡಲ್‌ಗಳಿರುವ ಕೊಠಡಿಗೂ ಹೆಚ್ಚಿನ ಪೊಲೀಸ್‌ ಭದ್ರತೆ ಒದಗಿಸಬೇಕು. ಯಾವುದೇ ಕಾರಣಕ್ಕೂ ಪರೀಕ್ಷಾ ಅಕ್ರಮಕ್ಕೆ ಅವಕಾಶ ನೀಡಬೇಡಿ’ ಎಂದು ಸೂಚಿಸಿದರು.

71 ಕೇಂದ್ರಗಳು: ‘ಜಿಲ್ಲೆಯ 71 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿದ್ದು, 20,194 ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿದ್ದಾರೆ. ಖಾಸಗಿ ಶಾಲಾ ವಿದ್ಯಾರ್ಥಿಗಳು ಹಾಗೂ ಪುನರಾವರ್ತಿತ ವಿದ್ಯಾರ್ಥಿಗಳು ಇರುವುದರಿಂದ ಪರೀಕ್ಷಾ ಅಕ್ರಮ ನಡೆಯುವ ಸಾಧ್ಯತೆ ಹೆಚ್ಚು. ಕೋಲಾರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಮತ್ತು ಬಾಪೂಜಿ ಶಾಲೆ ಕೇಂದ್ರಗಳನ್ನು ಸೂಕ್ಷ್ಮ ಕೇಂದ್ರಗಳೆಂದು ಗುರುತಿಸಲಾಗಿದೆ’ ಎಂದು ವಿವರಿಸಿದರು.

‘ಕೋಲಾರದ 17, ಬಂಗಾರಪೇಟೆ 10, ಕೆಜಿಎಫ್ 10, ಮಾಲೂರು 10, ಮುಳಬಾಗಿಲು 11 ಹಾಗೂ ಶ್ರೀನಿವಾಸಪುರದ 13 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. 10,476 ಬಾಲಕರು ಮತ್ತು 9,717 ಮಂದಿ ಬಾಲಕಿಯರು (823 ಪುನರಾವರ್ತಿತ ಅಭ್ಯರ್ಥಿಗಳು ಸೇರಿದಂತೆ) ಪರೀಕ್ಷೆ ಬರೆಯಲಿದ್ದಾರೆ. ಹಿಂದಿನ ವರ್ಷ ಜಿಲ್ಲೆಯಲ್ಲಿ ಯಾವುದೇ ಡಿಬಾರ್ ಪ್ರಕರಣ ನಡೆದಿಲ್ಲ. ಅದೇ ರೀತಿ ಈ ಬಾರಿಯೂ ಸುಗಮವಾಗಿ ಪರೀಕ್ಷೆ ನಡೆಸಬೇಕು’ ಎಂದರು.

ಸಕಲ ವ್ಯವಸ್ಥೆ: ‘ಜಿಲ್ಲೆಯಲ್ಲಿ 6 ಮೌಲ್ಯಮಾಪನಾ ಕೇಂದ್ರಗಳಿವೆ. ಕೋಲಾರದ ನಳಂದಾ, ಚಿನ್ಮಯ, ಸೇಂಟ್‍ ಆನ್ಸ್, ಸುಗುಣ, ಮಹಿಳಾ ಸಮಾಜ, ಸೈನಿಕ್ ಪಬ್ಲಿಕ್ ಶಾಲೆಯಲ್ಲಿ ಎಲ್ಲಾ ಸೌಲಭ್ಯ ಒಳಗೊಂಡಂತೆ ಮೌಲ್ಯಮಾಪನಕ್ಕೆ ಸಕಲ ವ್ಯವಸ್ಥೆ ಮಾಡಲಾಗಿದೆ. ಆಗಿಂದಾಗ್ಗೆ ವಿದ್ಯಾರ್ಥಿಗಳ ಅಂಕವನ್ನು ಆನ್‌ಲೈನ್‌ನಲ್ಲಿ ದಾಖಲು ಮಾಡಲಾಗುವುದು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ರತ್ನಯ್ಯ ಮಾಹಿತಿ ನೀಡಿದರು.

‘ಜಿಲ್ಲೆಯಲ್ಲಿನ 71 ಪರೀಕ್ಷಾ ಕೇಂದ್ರಗಳಿಗೆ ಒಬ್ಬರು ಮೇಲ್ವಿಚಾರಕರನ್ನು ನೇಮಿಸಲಾಗಿದೆ ಮತ್ತು ಜಿಲ್ಲಾ ಮಟ್ಟದಲ್ಲಿ 3 ಜಾಗೃತ ತಂಡ ರಚಿಸಲಾಗಿದೆ’ ಎಂದು ವಿವರಿಸಿದರು.

ಎಸ್ಸೆಸ್ಸೆಲ್ಸಿ ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್, ವಿವಿಧ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ನಾಗರಾಜಗೌಡ, ಕೆಂಪರಾಮು, ಮಾಧವರೆಡ್ಡಿ, ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್ ಹಾಜರಿದ್ದರು.

ಅಂಕಿ ಅಂಶ.....
* 20,194 ವಿದ್ಯಾರ್ಥಿಗಳ ನೋಂದಣಿ
* 10,476 ಮಂದಿ ಬಾಲಕರು
* 9,717 ಬಾಲಕಿಯರು
* 6 ಮೌಲ್ಯಮಾಪನಾ ಕೇಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT