ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರ ರಾಜ್ಯದ ಟೊಮೆಟೊ ನಿಲ್ಲಿಸಿ

ಸಭೆಯಲ್ಲಿ ಮಂಡಿ ಮಾಲೀಕರಿಗೆ ಎಪಿಎಂಸಿ ಅಧ್ಯಕ್ಷ ವಡಗೂರು ನಾಗರಾಜ್‌ ಸೂಚನೆ
Last Updated 9 ಫೆಬ್ರುವರಿ 2019, 14:55 IST
ಅಕ್ಷರ ಗಾತ್ರ

ಕೋಲಾರ: ‘ಹೊರ ರಾಜ್ಯಗಳಿಂದ ಸ್ಥಳೀಯ ಮಾರುಕಟ್ಟೆಗೆ ಟೊಮೆಟೊ ತರಿಸಬಾರದು’ ಎಂದು ಎಪಿಎಂಸಿ ಅಧ್ಯಕ್ಷ ವಡಗೂರು ನಾಗರಾಜ್‌ ಎಪಿಎಂಸಿಯ ಮಂಡಿ ಮಾಲೀಕರಿಗೆ ಮನವಿ ಮಾಡಿದರು.

ಇಲ್ಲಿ ಶನಿವಾರ ನಡೆದ ಮಂಡಿ ಮಾಲೀಕರ ಸಭೆಯಲ್ಲಿ ಮಾತನಾಡಿ, ‘ಮಾಲೀಕರು ಕಡ್ಡಾಯವಾಗಿ ತಮ್ಮ ಮಂಡಿ ಮುಂಭಾಗದಲ್ಲೇ ಟೊಮೆಟೊ ಬಾಕ್ಸ್‌ಗಳನ್ನು ಇಡಬೇಕು’ ಎಂದು ಸೂಚಿಸಿದರು.

‘ಮಂಡಿ ಮಾಲೀಕರು ಹೊರ ರಾಜ್ಯಗಳಿಂದ ಟೊಮೆಟೊ ತರಿಸುತ್ತಿರುವುದರಿಂದ ಸ್ಥಳೀಯ ರೈತರ ಟೊಮೆಟೊ ಸರಕಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಇದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಟೊಮೆಟೊ ಬೀದಿಗೆ ಸುರಿಯುವ ಪರಿಸ್ಥಿತಿ ಎದುರಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಮಾರುಕಟ್ಟೆಯಲ್ಲಿ ಕಮಿಷನ್ ವಸೂಲಿ ಮಾಡಲಾಗುತ್ತಿದೆ ಎಂದು ರೈತ ಮುಖಂಡರು ಎಪಿಎಂಸಿ ಎದುರು ಹೋರಾಟ ನಡೆಸಿದ್ದರು. ಅಲ್ಲದೇ, ಮುಖ್ಯಮಂತ್ರಿ ಅವರೊಂದಿಗೆ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಬಳಿ ಕಮಿಷನ್‌ ದಂಧೆ ವಿಷಯ ಪ್ರಸ್ತಾಪಿಸಿದ್ದಾರೆ. ಮಂಡಿ ಮಾಲೀಕರಿಗೂ ರೈತರ ಬಗ್ಗೆ ಕಳಕಳಿ ಇರಬೇಕು. ನಾಸಿಕ್ ಸೇರಿದಂತೆ ಹೊರ ರಾಜ್ಯಗಳಿಂದ ಟೊಮೆಟೊ ತರಿಸಬಾರದು’ ಎಂದರು.

‘ಕೆಲ ಮಂಡಿ ಮಾಲೀಕರು ಒಂದೆರಡು ದಿನ ನಾಸಿಕ್‌ನಿಂದ ಟೊಮೆಟೊ ತರಿಸಿದ್ದು ನಿಜ. ಈಗ ಅದೂ ನಿಂತು ಹೋಗಿದೆ. ಹೊರಗಡೆಯಿಂದ ಟೊಮೆಟೊ ತರಿಸಿ ಕೆಲವರು ನಷ್ಟ ಅನುಭವಿಸಿದ್ದಾರೆ’ ಎಂದು ಮಂಡಿ ಮಾಲೀಕ ಬೈಚೇಗೌಡ ಹೇಳಿದರು.

ದುರ್ಬಳಕೆಯಾಗುತ್ತಿದೆ: ‘ಟೊಮೆಟೊಗೆ ದರ ಇಲ್ಲದಿರುವ ಸಂದರ್ಭದಲ್ಲೂ ಹೆಚ್ಚು ಬೆಲೆಗೆ ಮಾರಾಟವಾಗಿರುವ ಬಗ್ಗೆ ಎಪಿಎಂಸಿಯಿಂದ ಬಿಲ್ ಕಳುಹಿಸಿದ್ದೀರಿ. ಕೈಯಿಂದ ಹಣ ಕಟ್ಟುವಂತಾಗಿದೆ. ಟೊಮೆಟೊ ಯಾವ ಬೆಲೆಗೆ ಹರಾಜು ಆಗಿದೆಯೋ ಅಷ್ಟೇ ಬೆಲೆಯನ್ನು ಬಿಲ್‌ನಲ್ಲಿ ಹಾಕಬೇಕು. ಅದು ಬಿಟ್ಟು ಸರಾಸರಿ ಲೆಕ್ಕ ಹಾಕಿದರೆ ಹೇಗೆ?’ ಎಂದು ಮಂಡಿ ಮಾಲೀಕ ಮಂಜು ಪ್ರಶ್ನಿಸಿದರು.

‘ಕೆಲ ಮಂಡಿ ಮಾಲೀಕರು ವ್ಯಾಪಾರ ಮಾಡದಿದ್ದರೂ ಬಿಕರಿ ಪಟ್ಟಿ ಮತ್ತು ಲೆಕ್ಕ ತಿರುವಳಿ ಪುಸ್ತಕ ಇಟ್ಟುಕೊಂಡಿದ್ದಾರೆ. ಇದು ದುರ್ಬಳಕೆಯಾಗುತ್ತಿದೆ’ ಎಂದು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಎಪಿಎಂಸಿ ಕಾರ್ಯದರ್ಶಿ ರವಿಕುಮಾರ್, ‘ಮುಂದಿನ ದಿನಗಳಲ್ಲಿ ಯಾವ ಬೆಲೆಗೆ ಟೊಮೆಟೊ ಮಾರಾಟವಾಗುತ್ತದೆಯೋ ಆ ಪ್ರಕಾರವೇ ಬಿಲ್ ಮಾಡಲಾಗುವುದು. ವ್ಯಾಪಾರ ಮಾಡದ ಮಂಡಿ ಮಾಲೀಕರಿಂದ ಬಿಕರಿ ಪಟ್ಟಿ ಮತ್ತು ಲೆಕ್ಕ ತೀರುಪಳಿ ಪುಸ್ತಕ ವಾಪಸ್ ಪಡೆಯುತ್ತೇವೆ’ ಎಂದು ಭರವಸೆ ನೀಡಿದರು.

ಕಾರ್ಯರೂಪಕ್ಕೆ ಬಂದಿಲ್ಲ: ‘ಎಪಿಎಂಸಿ ಕಾಯಿದೆ ಜಾರಿಯಾದ ದಿನದಿಂದ ನಾವು ಪರವಾನಗಿ ಪಡೆದು ಕಮಿಷನ್ ಏಜೆಂಟ್ ಆಗಿಯೇ ವಹಿವಾಟು ನಡೆಸುತ್ತಿದ್ದೇವೆ’ ಎಂದು ಜೈ ಕರ್ನಾಟಕ ತರಕಾರಿ ದಲ್ಲಾಳರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಆರ್.ಎ.ಪಿ ನಾರಾಯಣಸ್ವಾಮಿ ವಿವರಿಸಿದರು.

‘ಪ್ರತಿ ಸಭೆಯಲ್ಲಿ ಈ ವಿಚಾರ ಚರ್ಚೆಯಾಗುತ್ತಿದೆ. ಆದರೆ, ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ. ಸ್ಥಳೀಯ ಮಾರುಕಟ್ಟೆಗೆ ನಾಸಿಕ್ ಟೊಮೆಟೊ ಬರುತ್ತಿರುವ ಸಂಗತಿಯನ್ನು ತಿಂಗಳ ಹಿಂದೆಯೇ ಅಧ್ಯಕ್ಷರ ಗಮನಕ್ಕೆ ತಂದಿದ್ದೆ. ಟೊಮೆಟೊ ಬರುವುದು ನಿಂತು ಹೋದ ಮೇಲೆ ಸಭೆ ನಡೆಸಿದರೆ ಏನು ಪ್ರಯೋಜನ?’ ಎಂದು ಕಿಡಿಕಾರಿದರು.

ಅತಿ ದೊಡ್ಡ ಮಾರುಕಟ್ಟೆ: ‘ಕೋಲಾರ ಎಪಿಎಂಸಿಯು ಏಷ್ಯಾದಲ್ಲೇ 2ನೇ ಅತಿ ದೊಡ್ಡ ಟೊಮೆಟೊ ಮಾರುಕಟ್ಟೆಯಾಗಿದೆ. ಮೂಲಸೌಕರ್ಯ ಒದಗಿಸುವಂತೆ ಮುಖ್ಯಮಂತ್ರಿಯವರನ್ನು ಕೇಳಿದ್ದೆವು. ಆದರೆ. ಬಜೆಟ್‌ನಲ್ಲಿ ಈ ಸಂಗತಿಯನ್ನೇ ಪ್ರಸ್ತಾಪಿಸಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಮಾರುಕಟ್ಟೆ ವಿಸ್ತರಣೆ ಕಾರ್ಯ ಸದ್ಯಕ್ಕೆ ಆಗುವ ಲಕ್ಷಣವಿಲ್ಲ. ನಾಲ್ಕೈದು ವರ್ಷವಾದರೂ ಬೇಕು. ಆವರೆಗೆ ಇದೇ ಮಾರುಕಟ್ಟೆಯಲ್ಲಿ ವಹಿವಾಟು ನಡೆಸಬೇಕಿರುವುದರಿಂದ ರಸ್ತೆ ಅಭಿವೃದ್ಧಿಪಡಿಸಿ ಮತ್ತು ನೆರಳಿನ ವ್ಯವಸ್ಥೆ ಮಾಡಿ’ ಎಂದು ಒತ್ತಾಯಿಸಿದರು.

ಆಗ ಅಧ್ಯಕ್ಷರು, ‘ಮಾರುಕಟ್ಟೆ ವಿಸ್ತರಣೆಗೆ ಮಂಗಸಂದ್ರದ ಬಳಿ ಜಾಗ ಗುರುತಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡರು ಆಸಕ್ತಿ ವಹಿಸಿ ₹ 30 ಕೋಟ ವಿಶೇಷ ಪ್ಯಾಕೇಜ್ ಒದಗಿಸುತ್ತಿದ್ದಾರೆ. ಇದನ್ನು ಕಾರ್ಯರೂಪಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ’ ಎಂದು ಭರವಸೆ ನೀಡಿದರು.

‘ಮಾರುಕಟ್ಟೆ ಹೊರ ಭಾಗದ ಮಾಲೂರು ರಸ್ತೆ ಬದಿಯ ಚರಂಡಿಗೆ ತ್ಯಾಜ್ಯ ಸುರಿಯುವುದಕ್ಕೆ ಕಡಿವಾಣ ಹಾಕಲು ಸಿ.ಸಿ ಕ್ಯಾಮೆರಾ ಅಳವಡಿಸಿ. ತ್ಯಾಜ್ಯ ಸರಿಯುವರರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸೋಣ’ ಎಂದು ಹೇಳಿದರು.

ಪಾರದರ್ಶಕ ವಹಿವಾಟು: ‘ಕೋಲಾರ ಎಪಿಎಂಸಿಯು ಟೊಮೆಟೊ ವಹಿವಾಟಿನಲ್ಲಿ ಅತಿ ದೊಡ್ಡ ಮಾರುಕಟ್ಟೆ ಎಂದು ಹೇಳಲಾಗುತ್ತಿದೆ. ಆದರೆ, ಆವಕ ಕಡಿಮೆಯಿದೆ ಎಂದು ರಾಜ್ಯ ಮಟ್ಟದ ಸಭೆಗಳಲ್ಲಿ ಅಧಿಕಾರಿಗಳು ಪ್ರಶ್ನೆ ಎತ್ತುತ್ತಾರೆ. ಹೀಗಾಗಿ ಸಿಬ್ಬಂದಿಯು ಮಾರುಕಟ್ಟೆಗೆ ಟೊಮೆಟೊ ಆವಕ ಎಷ್ಟು ಆಗುತ್ತದೆ ಎಂಬ ಬಗ್ಗೆ ಸರಿಯಾದ ಲೆಕ್ಕ ಒದಗಿಸಬೇಕು. ಪಾರದರ್ಶಕ ವಹಿವಾಟಿಗೆ ಮಂಡಿ ಮಾಲೀಕರು ಸಹಕರಿಸಬೇಕು’ ಎಂದು ಕಾರ್ಯದರ್ಶಿ ರವಿಕುಮಾರ್ ತಿಳಿಸಿದರು.

‘ಎಪಿಎಂಸಿ ಕ್ಯಾಂಟೀನ್ ಎದುರು ಜೋಡಿ ರಸ್ತೆ ನಿರ್ಮಿಸುವ ಸಂಬಂಧ ಮುಂದಿನ ಸಮಿತಿ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ನೆರಳಿನ ವ್ಯವಸ್ಥೆ ಮಾಡಲು ಕ್ರಿಯಾಯೋಜನೆ ರೂಪಿಸಿ ವಿವಿಧ ಯೋಜನೆಯಡಿ ಸೌಲಭ್ಯ ಕಲ್ಪಿಸುತ್ತೇವೆ. ಮಾಲೂರು ರಸ್ತೆ ಬದಿಯಲ್ಲಿನ ತ್ಯಾಜ್ಯ ತೆರವಿಗೆ ಕ್ರಮ ಕೈಗೊಳ್ಳುತ್ತೇವೆ’ ಎಂದರು.

ಎಪಿಎಂಸಿ ನಿರ್ದೇಶಕರಾದ ಅಬ್ಬಯ್ಯಪ್ಪ, ದೇವರಾಜ್, ವಿವಿಧ ಮಂಡಿಗಳ ಮಾಲೀಕರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT