ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೋಟಿಗೆ ಹಣ; ಪರ್ಸೆಂಟೇಜ್‌ನಲ್ಲಿ ವಸೂಲಿ: ಸುಪ್ರೀಂ ನಿವೃತ್ತ ನ್ಯಾ. ವಿ.ಗೋಪಾಲಗೌಡ

Last Updated 6 ಜುಲೈ 2022, 11:24 IST
ಅಕ್ಷರ ಗಾತ್ರ

ಕೋಲಾರ: ‘ಮತಗಳನ್ನು ಸರಕು ಮಾಡಿಕೊಂಡು, ಜನರಿಗೆ ಹಣ ಹಂಚುತ್ತಿರುವ ರಾಜಕಾರಣಿಗಳು ಗೆದ್ದ ಮೇಲೆ ಅಭಿವೃದ್ಧಿ ಕೆಲಸಗಳಲ್ಲಿ ಪರ್ಸೆಂಟೇಜ್‌ ರೂಪದಲ್ಲಿ ವಸೂಲಿ ಮಾಡುತ್ತಿದ್ದಾರೆ. ಭ್ರಷ್ಟರಹಿತವಾಗಿ ಚುನಾವಣೆ ನಡೆಸಲು ಚುನಾವಣಾ ಆಯೋಗಕ್ಕೂ ಸಾಧ್ಯವಾಗುತ್ತಿಲ್ಲ’ ಎಂದು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಬೇಸರ ವ್ಯಕ್ತಪಡಿಸಿದರು.

ನಗರದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳು ಸೇರಿ ಸ್ಥಾಪಿಸಿರುವ ‘ಸ್ವಾಭಿಮಾನಿ ಕೋಲಾರ ಆಂದೋಲನ’ಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಗ್ರಾಮ ಪಂಚಾಯಿತಿ ಸದಸ್ಯ ಚುನಾವಣೆ ಗೆಲ್ಲಲು ₹ 10 ಕೋಟಿವರೆಗೆ ಖರ್ಚು ಮಾಡುತ್ತಿದ್ದಾನೆ. ಕಾರ್ಪೊರೇಟರ್‌ ಆಗಲು ₹ 20 ಕೋಟಿ ಖರ್ಚು ಮಾಡುತ್ತಾರೆ. ಎಲ್ಲಾ ಹಂತಗಳಲ್ಲೂ ಎಲ್ಲಾ ರಾಜಕೀಯ ಪಕ್ಷಗಳು ಹಣ ಚೆಲ್ಲುತ್ತಿವೆ. ಕಾರು, ಮೊಬೈಲ್, ಧಾನ್ಯ, ತರಕಾರಿ, ಬಟ್ಟೆಗೆ ಹಣ ನೀಡಿ ಖರೀದಿಸಿದಂತೆ ಮತವನ್ನೂ ಖರೀದಿಸುತ್ತಿದ್ದಾರೆ. ಅಷ್ಟು ಹಣ ಚೆಲ್ಲಿ ಗೆದ್ದ ಮೇಲೆ ಸರ್ಕಾರದ ಕಾಮಗಾರಿಗಳಲ್ಲಿ ಗುತ್ತಿಗೆದಾರರಿಂದ ಶೇ 10, ಶೇ 40 ಪರ್ಸೆಂಟೇಜ್‌ ಪಡೆಯುತ್ತಾರೆ. ಇದನ್ನು ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಹೇಳಿದ್ದಾರೆ’ ಎಂದರು.

‘ವರ್ಗಾವಣೆಯಲ್ಲಂತೂ ಕೋಟ್ಯಂತರ ರೂಪಾಯಿ ಹರಿದಾಡುತ್ತಿದೆ. ಎಸಿಪಿ, ಎಸ್‌ಐ, ತಹಶೀಲ್ದಾರ್‌, ಉಪನೋಂದಣಾಧಿಕಾರಿ, ಜಿಲ್ಲಾಧಿಕಾರಿಗಳು ಶಾಸಕರಿಗೆ, ಮಂತ್ರಿಗಳಿಗೆ ಕೋಟ್ಯಂತರ ಹಣ ನೀಡಿ ಆಯಕಟ್ಟಿನ ಜಾಗಕ್ಕೆ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದಾರೆ. ಈ ಅಧಿಕಾರಿಗಳು ಜನರಿಂದ ಹಣ ಹೀರುತ್ತಾರೆ. ಇಡೀ ಸಮಾಜ ಲಂಚಮಯವಾಗಿದೆ. ಜೈಲಿನಲ್ಲಿರಬೇಕಾದವರು ಹೊರಗಿದ್ದಾರೆ. ಖುಲಾಸೆ ಆಗಬೇಕಾದವರು ಜೈಲಿನಲ್ಲಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘ರಿಯಲ್‌ ಎಸ್ಟೇಟ್‌ ಏಜೆಂಟ್‌ಗಳು, ಕೈಗಾರಿಕೋದ್ಯಮಿಗಳು ಚುನಾವಣೆಗೆ ನಿಂತು ಗೆಲ್ಲುತ್ತಿದ್ದಾರೆ. ಅವರಿಗೆ ಜನಸಾಮಾನ್ಯ ಮೇಲೆ ಕಾಳಜಿ ಬರಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.

‘ಸರ್ಕಾರ ಮಾಡಬೇಕಾದ ಕೆಲಸಗಳನ್ನು ಖಾಸಗಿಯವರಿಗೆ ವಹಿಸಲಾಗುತ್ತಿದೆ. ಹೀಗಾಗಿ, ಖಾಸಗಿ ಶಾಲೆ, ಖಾಸಗಿ ಆಸ್ಪತ್ರೆ ಹೆಚ್ಚುತ್ತಿವೆ. ಸರ್ಕಾರಿ ಆಸ್ಪತ್ರೆಯಲ್ಲಿ ₹ 20 ಸಾವಿರ ಖರ್ಚಾದರೆ, ಅದೇ ಸಮಸ್ಯೆಗೆ ಖಾಸಗಿ ಆಸ್ಪತ್ರೆಯಲ್ಲಿ ₹ 5 ಲಕ್ಷ ವಸೂಲಿ ಮಾಡುತ್ತಾರೆ’ ಎಂದು ವ್ಯವಸ್ಥೆಯನ್ನು ಟೀಕಿಸಿದರು.

‘ಈಗ ವ್ಯವಸ್ಥೆಯು ನ್ಯಾಯಮೂರ್ತಿಗಳಿಗೆ ಬೆದರಿಕೆ ಹಾಕುವ ಹಂತಕ್ಕೂ ಬಂದು ನಿಂತಿದೆ. ಆದರೆ, ನ್ಯಾಯಮೂರ್ತಿಗಳು ಇದಕ್ಕೆ ಹೆದರಲ್ಲ’ ಎಂದರು.

‘ಭ್ರಷ್ಟಾಚಾರಕ್ಕೆ ಅವಕಾಶವೇ ಇಲ್ಲದ ರೀತಿಯಲ್ಲಿ ಚುನಾವಣಾ ಆಯೋಗವು ಚುನಾವಣೆ ನಡೆಸಬೇಕು. ಅದು ಸಂಪೂರ್ಣವಾಗಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು. ಭ್ರಷ್ಟಾಚಾರ ಎಸಗಿರುವುದು ಗೊತ್ತಾದರೆ ಚಾಲ್ತಿಯಲ್ಲಿರುವ ಕಾಯ್ದೆ ಬಳಸಿಕೊಂಡು ಜನಪ್ರತಿನಿಧಿಗಳನ್ನು ಅನರ್ಹಗೊಳಿಸಬೇಕು’ ಎಂದು ಆಗ್ರಹಿಸಿದರು.

ಇ.ಡಿ ಪ್ರಕರಣದ ಬೆದರಿಕೆ ಹಾಕಿ ಶಾಸಕರನ್ನು ಸೆಳೆದು, ಕಾನೂನುಬದ್ಧವಾಗಿ ರಚನೆಯಾಗಿರುವ ಸರ್ಕಾರ ಬೀಳಿಸುವ ಹೊಸ ವ್ಯವಸ್ಥೆ ದೇಶದಲ್ಲಿ ಬಂದಿದೆ.

- ವಿ.ಗೋಪಾಲಗೌಡ, ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT