ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3ಕ್ಕೆ ಶಿಕ್ಷಕರ ಅರ್ಹತಾ ಪರೀಕ್ಷೆ

ಸುಗಮವಾಗಿ ಪರೀಕ್ಷೆ ನಡೆಸಿ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ
Last Updated 30 ಜನವರಿ 2019, 16:49 IST
ಅಕ್ಷರ ಗಾತ್ರ

ಕೋಲಾರ: ‘ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯು (ಟಿಇಟಿ) ನಗರದ 13 ಕೇಂದ್ರಗಳಲ್ಲಿ ಫೆ.3ರಂದು ನಡೆಯಲಿದ್ದು, ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದಂತೆ ಪರೀಕ್ಷೆ ಸುಗಮವಾಗಿ ನಡೆಸಿ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಕೇಂದ್ರಗಳ ಮುಖ್ಯಸ್ಥರಿಗೆ ಸೂಚಿಸಿದರು.

ಟಿಇಟಿ ಪೂರ್ವಸಿದ್ಧತೆ ಸಂಬಂಧ ಇಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿ, ‘ಟಿಇಟಿ ದೇಶದ ಭವಿಷ್ಯ ರೂಪಿಸುವ ಶಿಕ್ಷಕರ ಅರ್ಹತಾ ಪರೀಕ್ಷೆ. ಲೋಪಕ್ಕೆ ಅವಕಾಶವಿಲ್ಲದಂತೆ ಹೆಚ್ಚಿನ ನಿಗಾ ವಹಿಸಿ. ಪರೀಕ್ಷಾ ಪಾವಿತ್ರ್ಯತೆಗೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಿ’ ಎಂದು ತಿಳಿಸಿದರು.

‘ಬೆಳಿಗ್ಗೆ 1ನೇ ತರಗತಿಯಿಂದ 5ನೇ ತರಗತಿ ಶಾಲೆಗಳ ಶಿಕ್ಷಕರ ಅರ್ಹತಾ ಪರೀಕ್ಷೆ ಮತ್ತು ಮಧ್ಯಾಹ್ನ 6ನೇ ತರಗತಿಯಿಂದ 8ನೇ ತರಗತಿವರೆಗಿನ ಶಿಕ್ಷಕರಿಗೆ ಪರೀಕ್ಷೆ ನಡೆಯಲಿದೆ. ಬೆಳಗಿನ ಅವಧಿಯಲ್ಲಿ 2,305 ಮಂದಿ ಹಾಗೂ ಮಧ್ಯಾಹ್ನ 3,770 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಕೇಂದ್ರಗಳ ಬಳಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗುತ್ತದೆ. ಪೊಲೀಸ್‌ ಕಾವಲಿನಲ್ಲಿ ಪ್ರಶ್ನೆಪತ್ರಿಕೆ ಕೊಂಡೊಯ್ಯಬೇಕು’ ಎಂದು ವಿವರಿಸಿದರು.

ಮಾರ್ಗಾಧಿಕಾರಿ ನೇಮಕ: ‘ಜಿಲ್ಲಾ ಖಜಾನೆಯಿಂದ ಬೆಳಿಗ್ಗೆ 8 ಗಂಟೆಗೆ ಪ್ರಶ್ನೆಪತ್ರಿಕೆ ಪಡೆದು ಕೇಂದ್ರಕ್ಕೆ ತಲುಪಿಸಲು ಅನುವಾಗುವಂತೆ ಮಾರ್ಗಾಧಿಕಾರಿಗಳನ್ನು ನೇಮಿಸಲಾಗಿದೆ. ಜತೆಗೆ ಸ್ಥಾನಿಕ ಜಾಗೃತದಳ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ರತ್ನಯ್ಯ ಮಾಹಿತಿ ನೀಡಿದರು.

‘ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಫೆ.3ರಂದು ಮಾಜಿ ಸಚಿವ ದಿವಂಗತ ಎಂ.ವಿ.ಕೃಷ್ಣಪ್ಪರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ನಡೆಸಲು ಅನುಮತಿ ನೀಡಲಾಗಿದೆ. ಈ ಕೇಂದ್ರದಲ್ಲಿ ನಡೆಯುವ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಿ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕೇಂದ್ರ ಸ್ಥಳಾಂತರಿಸಿ: ‘ಪರೀಕ್ಷೆ ಸಂಬಂಧ ಜೂನಿಯರ್‌ ಕಾಲೇಜಿನ ಪ್ರಾಂಶುಪಾಲರಿಗೆ ಮೊದಲೇ ಮಾಹಿತಿ ನೀಡದ ಕಾರಣ ಅವರು ಕಾರ್ಯಕ್ರಮಕ್ಕೆ ಅನುಮತಿ ನೀಡಿದ್ದಾರೆ. ಹೀಗಾಗಿ ಅಲ್ಲಿ ಪರೀಕ್ಷೆ ನಡೆಸಲು ಸಾಧ್ಯವಿಲ್ಲ. ಕೇಂದ್ರದಲ್ಲಿ 1,200 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದು, ಅವರಿಗೆ ತೊಂದರೆಯಾಗದಂತೆ ಸಮೀಪದ ಬಾಲಕರ ಪದವಿ ಕಾಲೇಜು ಕಟ್ಟಡಕ್ಕೆ ಕೇಂದ್ರ ಸ್ಥಳಾಂತರಿಸಿ’ ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ರತ್ನಯ್ಯ, ‘ನಮಗೆ ಪರೀಕ್ಷಾ ಕೇಂದ್ರ ಬದಲಿಸಲು ಅಧಿಕಾರವಿಲ್ಲ. ಇದಕ್ಕೆ ರಾಜ್ಯ ಆಯುಕ್ತರ ಅನುಮತಿ ಅಗತ್ಯ’ ಎಂದು ಸ್ಪಷ್ಟಪಡಿಸಿದರು.

ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್, ಜಿಲ್ಲಾ ಖಜಾನಾಧಿಕಾರಿ ರಾಮಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಮಾಧವರೆಡ್ಡಿ, ಸಹಾಯಕ ಸಮನ್ವಯಾಧಿಕಾರಿ ಸಿದ್ದೇಶ್, ಕ್ಷೇತ್ರ ಸಮನ್ವಯಾಧಿಕಾರಿ ರಾಮಕೃಷ್ಣಪ್ಪ, ವಿಷಯ ಪರಿವೀಕ್ಷಕರಾದ ಕೃಷ್ಣಪ್ಪ, ಶಶಿವಧನ, ಗಾಯಿತ್ರಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT