ಶನಿವಾರ, ಫೆಬ್ರವರಿ 22, 2020
19 °C
ಸುದ್ದಿಗಾರರಿಗೆ ಜಿಲ್ಲಾ ಉಸ್ತುವಾರಿ ಸಚಿವ ನಾಗೇಶ್ ಹೇಳಿಕೆ

ಕೊತ್ತೂರು ಮಂಜುನಾಥ್‌ ಜತೆ ಭಿನ್ನಾಭಿಪ್ರಾಯವಿಲ್ಲ: ಸಚಿವ ನಾಗೇಶ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಮುಳಬಾಗಿಲು ಕ್ಷೇತ್ರದ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಾವಿಬ್ಬರೂ ಸಹೋದರರಂತೆ ಇದ್ದೇವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಹೇಳಿದರು.

ಇಲ್ಲಿ ಸೋಮವಾರ ನಡೆದ ಸಾರ್ವಜನಿಕರ ಕುಂದು ಕೊರತೆ ಸಭೆಯ ನಂತರ ಮಾತನಾಡಿ, ‘ಕೊತ್ತನೂರು ಮಂಜುನಾಥ್‌ ಮತ್ತು ನನ್ನ ನಡುವೆ ಯಾವುದೇ ಸಮಸ್ಯೆಯಿಲ್ಲ. ವೈಮನಸ್ಸು ಸಹ ಇಲ್ಲ. ನಾವು ಜತೆಯಾಗಿದ್ದೇವೆ’ ಎಂದರು.

‘ಕೊತ್ತೂರು ಮಂಜುನಾಥ್ ಅವರು ಯಾವುದೋ ಸಂದರ್ಭದಲ್ಲಿ ತಮ್ಮ ದಾರಿ ತಮಗೆ, ನಾಗೇಶ್‌ರ ದಾರಿ ಅವರಿಗೆ ಎಂದು ಹೇಳಿರಬಹುದು. ಆದರೆ, ನಮ್ಮಲ್ಲಿ ಬೇಧ ಭಾವವಿಲ್ಲ. ಮಂಜುನಾಥ್‌ ಅವರು ನನ್ನನ್ನು ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿಸಿ ಜತೆಗಿದ್ದು ಗೆಲ್ಲಿಸಿದರು. ಅವರ ಸಂಬಂಧ ಕಡಿದುಕೊಳ್ಳಲು ನಾನು ಇಷ್ಟಪಡುವುದಿಲ್ಲ’ ಎಂದು ತಿಳಿಸಿದರು.

‘ಚುನಾವಣೆ ವೇಳೆ ನನ್ನ ಕೈ ಹಿಡಿದಿರುವರು ಮಂಜುನಾಥ್‌. ಅವರನ್ನು ಮರೆಯಲು ಸಾಧ್ಯವೇ? ಅವರಿಗೆ ಎಂದಿಗೂ ದ್ರೋಹ ಬಗೆಯುವುದಿಲ್ಲ. ಅವರು ಯಾವ ಉದ್ದೇಶಕ್ಕೆ ಆ ರೀತಿ ಮಾತಾಡಿದ್ದಾರೋ ಗೊತ್ತಿಲ್ಲ. ನನ್ನ ವಿರುದ್ಧ ಅವರಿಗೆ ಬೇಸರವಿದ್ದರೆ ಖುದ್ದು ಅವರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುತ್ತೇನೆ’ ಎಂದು ಸ್ಪಷ್ಟಪಡಿಸಿದರು.

‘ಮಂಜುನಾಥ್ ಅವರು ಸ್ಥಳೀಯ ಸಮಸ್ಯೆಗಳನ್ನು ಪ್ರಸ್ತಾಪಿಸಿದ್ದಾರೆ. ನಾವು ಚೆನ್ನಾಗಿದ್ದೇವೆ. ಅವರ ಮಾರ್ಗದರ್ಶನದಂತೆ ನಡೆದುಕೊಳ್ಳುತ್ತೇನೆ’ ಎಂದು ತಿಳಿಸಿದರು.

ಸಂಪುಟ ವಿಸ್ತರಣೆ: ‘ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಿದೇಶದಿಂದ ಬಂದ ಮೇಲೆ ಸಚಿವ ಸಂಪುಟ ವಿಸ್ತರಣೆ ಆಗುತ್ತದೆ. ಯಡಿಯೂರಪ್ಪ ಅವರು ಮೂರ್ನಾಲ್ಕು ದಿನದಲ್ಲಿ ಬೆಂಗಳೂರಿಗೆ ಬರಲಿದ್ದು, ಗೆದ್ದ ನೂತನ ಶಾಸಕರಿಗೆ ಸಚಿವ ಸಂಪುಟದಲ್ಲಿ ಅವಕಾಶ ಕಲ್ಪಿಸುತ್ತಾರೆ. ಇಷ್ಟು ದಿನ ಕಾದಿರುವ ಗೆದ್ದ ಶಾಸಕರು ಮೂರ್ನಾಲ್ಕು ದಿನ ತಾಳ್ಮೆಯಿಂದ ಇದ್ದರೆ ಎಲ್ಲಾ ಸರಿ ಹೋಗುತ್ತದೆ’ ಎಂದು ವಿವರಿಸಿದರು.

‘ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆ ಗಂಭೀರವಾಗದೆ. ಮಳೆ ಇಲ್ಲ ಬೆಳೆ ಇಲ್ಲ. ಜಿಲ್ಲೆಯು ಆರ್ಥಿಕವಾಗಿ ಹಿಂದುಳಿದಿರುವುದರಿಂದ ಇಲ್ಲಿನ ವಿದ್ಯಾವಂತ ಮಕ್ಕಳಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶಕ್ಕೆ ಫೆ.11 ಮತ್ತು 12ರಂದು ಬೃಹತ್‌ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

‘ಉದ್ಯೋಗ ಮೇಳದಿಂದ ಜಿಲ್ಲೆಯ ಸುಮಾರು 6 ಸಾವಿರ ಮಂದಿ ನಿರುದ್ಯೋಗಿಗಳಿಗೆ ಕೆಲಸ ಕೊಡಿಸುವ ಗುರಿಯಿದೆ. ಸುಮಾರು 150 ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲಿವೆ. 7ನೇ ತರಗತಿಯಿಂದ ಪದವಿ ಹಂತದವರೆಗಿನ ನಿರುದ್ಯೋಗಿಗಳು ಮೇಳದಲ್ಲಿ ಭಾಗವಹಿಸಬಹುದು. ಕಂಪನಿ ಪ್ರತಿನಿಧಿಗಳು ಅರ್ಹರನ್ನು ಮೇಳದಲ್ಲೇ ಕೆಲಸಕ್ಕೆ ಆಯ್ಕೆ ಮಾಡುತ್ತಾರೆ’ ಎಂದು ಹೇಳಿದರು.

ಯಶಸ್ವಿ ಆಗುತ್ತದೆ: ‘ಉದ್ಯೋಗ ಮೇಳದ ವಿಚಾರದಲ್ಲಿ ಜಿಲ್ಲಾಧಿಕಾರಿ ಜತೆ ಚರ್ಚೆ ನಡೆಸಿದ್ದೇನೆ. ಅವರು ಸಹ ಮೇಳದ ಬಗ್ಗೆ ಹಲವು ಸಭೆ ನಡೆಸಿದ್ದಾರೆ. ಜಿಲ್ಲೆಯಲ್ಲಿ ಉದ್ಯೋಗ ಮೇಳ ಯಶಸ್ವಿ ಆಗುತ್ತದೆ’ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

‘ಸಾರ್ವಜನಿಕರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಕುಂದು ಕೊರತೆ ಸಭೆ ನಡೆಸಲಾಗುತ್ತಿದೆ. ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳು ಸೇರಿದಂತೆ ವಿವಿಧ ಇಲಾಖೆಗಳ ಸಮಸ್ಯೆಗಳ ಸಂಬಂಧ ಸಾರ್ವಜನಿಕರು ಅಹವಾಲು ಹೇಳುತ್ತಾರೆ. ಅರ್ಜಿ ಸ್ವೀಕರಿಸಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುತ್ತಿದೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು