ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಾಲೂರು | ಪಂಚಾಯಿತಿ ಸಹಕಾರವೂ ಇಲ್ಲ; ಪುರಸಭೆ ನೆರವೂ ಇಲ್ಲ

11 ವರ್ಷಗಳಿಂದ ಮೂಲ ಸೌಲಭ್ಯದಿಂದ ವಂಚಿತ ಮಾಲೂರಿನ ವೈಟ್ ಗಾರ್ಡನ್
Published : 16 ಸೆಪ್ಟೆಂಬರ್ 2024, 5:16 IST
Last Updated : 16 ಸೆಪ್ಟೆಂಬರ್ 2024, 5:16 IST
ಫಾಲೋ ಮಾಡಿ
Comments

ಮಾಲೂರು: ಪಟ್ಟಣದ ಪ್ರತಿಷ್ಠಿತ ಬಡಾವಣೆ (ವೈಟ್ ಗಾರ್ಡನ್) ನಾಗರಿಕರು ಸುಮಾರು 11 ವರ್ಷಗಳಿಂದ ಮೂಲ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಈ ಬಡಾವಣೆ ಜನರಿಗೆ ಇತ್ತ ಪಂಚಾಯಿತಿ ಸಹಕಾರವೂ ಇಲ್ಲ, ಅತ್ತ ಪುರಸಭೆ ನೆರವು ಇಲ್ಲದೇ ತ್ರಿಶಂಕು ಪರಿಸ್ಥಿತಿ ಎದುರಿಸುಂತಾಗಿದೆ.

ಪಟ್ಟಣದ 22 ,23 ಮತ್ತು 24ನೇ ವಾರ್ಡ್‌ಗಳಲ್ಲಿ ಈ ಬಡಾವಣೆ ಹಂಚಿ ಹೋಗಿದೆ. ಪಟ್ಟಣದಲ್ಲಿ 2013ರಲ್ಲಿ ನೂತನವಾಗಿ ಆರಂಭಿಸಿದ ವೈಟ್ ಗಾರ್ಡನ್ ಬಡಾವಣೆಯಲ್ಲಿ ಮಾಲೂರು ಪಟ್ಟಣಕ್ಕೆ ಸಮೀಪದ ಗ್ರಾಮಾಂತರದ ಪ್ರದೇಶದ ಕೆಲ ಕುಟುಂಬಗಳು ಬಂದು ಇಲ್ಲಿ ನೆಲೆಸಿವೆ.

ಆದರೆ, ವೈಟ್ ಗಾರ್ಡ್‌ನ್ ತಾಲ್ಲೂಕಿನ ಅರಳೇರಿ ಗ್ರಾಮ ಪಂಚಾಯಿತಿಗೆ ಸೇರಿದೆ. ಅಭಿವೃದ್ಧಿ ಕಾಣದೆ ನಾಗರಿಕರು ಮೂಲ ಸೌಲಭ್ಯ ಕೊರತೆಯಿಂದ ತೊಂದರೆ ಪಡುವಂತಾಗಿದೆ. ಬಡಾವಣೆ ನಾಗರಿಕರು ಮನೆ ತೆರಿಗೆಯನ್ನು ಅರಳೇರಿ ಪಂಚಾಯಿತಿಗೆ ಸಂದಾಯ ಮಾಡುತ್ತಿದ್ದಾರೆ. ಆದರೆ, ಪಂಚಾಯಿತಿ ವತಿಯಿಂದ ಅಭಿವೃದ್ಧಿ ಮಾತ್ರ ಶೂನ್ಯ.

ಕುಡಿಯುವ ನೀರಿನ ಸಮಸ್ಯೆ: ಬಡಾವಣೆ ಜನರು ಕುಡಿಯುವ ನೀರಿನ ಕೊರತೆಯಿಂದ ತೊಂದರೆ ಪಡುತ್ತಿದ್ದಾರೆ. ಕೆಲವರು ಸ್ವಂತ ಖರ್ಚಿನಲ್ಲಿ ಕೊಳವೆ ಬಾವಿ ಕೊರೆಯಿಸಿಕೊಂಡಿದ್ದಾರೆ. ಉಳಿದಂತೆ ಮಧ್ಯಮ ವರ್ಗದ ಕುಟುಂಬಗಳು ನೀರಿನ ಟ್ಯಾಂಕರ್‌ ಮೇಲೆ ಅವಲಂಭಿತರಾಗಿದ್ದಾರೆ.

ಟ್ಯಾಂಕರ್‌ ನೀರು ಖರೀದಿಸಲು ಸಾಧ್ಯವಿಲ್ಲದವರು ಮಾರಿಕಾಂಬ ಸಮಿತಿ ವತಿಯಿಂದ ನಿರ್ಮಾಣ ಮಾಡಿರುವ ಶುದ್ಧ ಕುಡಿಯುವ ನೀರಿನ ಘಟಕಗಳಿಂದ ನೀರು ತರುತ್ತಾರೆ. ಇನ್ನು ಕೆಲವರು ಕೃಷಿ ಭೂಮಿಗೆ ತೆರಳಿ ಕೊಳವೆ ಬಾವಿಗಳಿಂದ ನೀರು ತಂದು ಬಳಸುವ ಪರಿಸ್ಥಿತಿ ಇದೆ.

ಬೀದಿದೀಪ ಕೊರತೆ: ವೈಟ್ ಗಾರ್ಡನ್ ಬಡಾವಣೆಯಲ್ಲಿ ಸುಮಾರು 600ರಿಂದ 700 ಮನೆಗಳು ಇವೆ. ಯಾವುದೇ ರಸ್ತೆಗಳಿಗೆ ಬೀದಿದೀಪ ಇಲ್ಲ. ಹಾಕಿರುವ ಕೆಲವು ಬೀದಿ ದೀಪಗಳು ಹುರಿಯುತ್ತಿಲ್ಲ. ಒಂಟಿ ಮಹಿಳೆಯರ ಸರ ಕಳವು, ಮನೆಗಳ ಮುಂದೆ ನಿಲ್ಲಿಸುವ ದ್ವಿಚಕ್ರ ವಾಹನ ಕಳವು, ಜಾನುವಾರು ಕಳವು ಸಾಮಾನ್ಯವಾಗಿದೆ.

ಡಾಂಬರ್‌ ಕಾಣದ ರಸ್ತೆಗಳು: ಈ ಪತ್ರಿಷ್ಠಿತ ಬಡಾವಣೆಯಲ್ಲಿ ಯಾವುದೇ ರಸ್ತೆಗೆ ಡಾಂಬರ್‌ ಹಾಕಿಲ್ಲ. ಪ್ರತಿ ರಸ್ತೆಯು ಹಳ್ಳ ಕೊಳ್ಳಗಳಿಂದ ಕೂಡಿದೆ. ಈ ಬಡಾವಣೆಯಲ್ಲಿ ಚರಂಡಿ ವ್ಯವಸ್ಥೆಯೇ ಇಲ್ಲ. ಈ ಬಡಾವಣೆಯಲ್ಲಿ ಪ್ರತಿಷ್ಠಿತ ಖಾಸಗಿ ಶಾಲೆ, ತಾಂತ್ರಿಕ ಕಾಲೇಜು ಸೇರಿದಂತೆ ಪದವಿ ಪೂರ್ವ ಕಾಲೇಜು ಇದೆ. ಪ್ರತಿದಿನ ನೂರಾರು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಭೇಟಿ ಕೊಡುತ್ತಾರೆ. ಆದರೆ, ಸ್ವಚ್ಛತೆ ಮಾತ್ರ ಶೂನ್ಯ. ಅಲ್ಲದೆ, ಕುಡುಕರ ಹಾವಳಿಯೂ ಹೆಚ್ಚಾಗಿದೆ.

ಹಾವುಗಳ ಕಾಟ: ಬಡಾವಣೆಯಲ್ಲಿ ಸ್ವಚ್ಚತೆ ಇಲ್ಲದ ಕಾರಣ ಹಾವುಗಳ ಕಾಟ ಹೆಚ್ಚಾಗಿದೆ. ಖಾಲಿ ನಿವೇಶನಗಳಲ್ಲಿ ಗಿಡಗಂಟಿ ಬೆಳೆದು ಹಾವುಗಳ ಆವಾಸ ಸ್ಥಾನವಾಗಿದೆ.

ಬೀದಿ ದೀಪ ಇಲ್ಲದೆ ರಾತ್ರಿ ವೇಳೆ ಮನೆಯಿಂದ ಹೊರಗೆ ಬರಲು ಸಾಧ್ಯವಾಗುತ್ತಿಲ್ಲ. ಸ್ವಚ್ಛತೆ ಇಲ್ಲದೆ ಹಾವುಗಳ ಕಾಟ ಹೆಚ್ಚಾಗಿದೆ

- ರಾಜಮ್ಮ ವೈಟ್ ಗಾರ್ಡನ್ ಬಡಾವಣೆ ನಿವಾಸಿ

ತೆರಿಗೆ ಮಾತ್ರ ಅರಳೇರಿ ಪಂಚಾಯಿತಿಗೆ ಪಾವತಿಸುತ್ತವೆ. ಆದರೆ ಮೂಲ ಸೌಕರ್ಯ ಮಾತ್ರ ಕಲ್ಪಿಸಿಲ್ಲ. -ಸುರೇಶ್ ವೈಟ್ ಗಾರ್ಡನ್ ಬಡಾವಣೆ ನಿವಾಸಿ

ಕುಡುಕರ ಕಾಟ ಹೆಚ್ಚಾಗಿದೆ. ಸುತ್ತಮುತ್ತಲು ಬಾರ್‌ಗಳ ಸಂಖ್ಯೆ ಹೆಚ್ಚಾಗಿದೆ. ಮಹಿಳೆಯರು ಮತ್ತು ಹೆಣ್ಣು ಮಕ್ಕಳು ಸಂಚಾರ ಮಾಡಲು ಸಾಧ್ಯವಾಗುತ್ತಿಲ್ಲ

-ಸುಜಾತ ವೈಟ್ ಗಾರ್ಡನ್ ಬಡಾವಣೆಯ ನಿವಾಸಿ

ಅಭಿವೃದ್ಧಿಗೆ ಒತ್ತು: ಶಾಸಕ

ಪಟ್ಟಣದ ವೈಟ್ ಗಾರ್ಡನ್ ಬಡಾವಣೆ ನಾಗರಿಕರ ಸಮಸ್ಯೆ ನೀಗಿಸಲು ಈಚೆಗೆ ಬಡಾವಣೆ ಸದಸ್ಯರು ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿ ಸಮಸ್ಯಗಳ ಬಗ್ಗೆ ಪೂರ್ಣ ಮಾಹಿತಿ ಪಡೆಯಲಾಗಿದೆ. ಈ ಬಡಾವಣೆ ಅರಳೇರಿ ಪಂಚಾಯಿತಿಗೆ ಸೇರಿರುವುದರಿಂದ ಅಭಿವೃದ್ಧಿಪಡಿಸಲು ಸಾಧ್ಯವಾಗಿಲ್ಲ. ಇಲ್ಲಿವರೆಗೂ ಯಾರು ಈ ಬಡಾವಣೆ ಬಗ್ಗೆ ಗಮನವಹಿಸಿಲ್ಲ. ಪಟ್ಟಣದ ಪುರಸಭೆಗೆ ಸೇರಿಸಿಕೊಂಡು ಅಭಿವೃದ್ಧಿಪಡಿಸಲಾಗುವುದು. ಕೆ.ವೈ.ನಂಜೇಗೌಡ ಶಾಸಕ  ಪುರಸಭೆಗೆ ವರ್ಗಾವಣೆ ಪಟ್ಟಣದ ವೈಟ್ ಗಾರ್ಡನ್ ಬಡಾವಾಣೆ ನಾಗರಿಕರು ಅರಳೇರಿ ಪಂಚಾಯಿತಿಗೆ ಪಾವತಿಸುತ್ತಿರುವ ತೆರಿಗೆಯಿಂದ ಬಡಾವಣೆ ಅಭಿವೃದ್ಧಿ ಪಡಿಸಲು ಸಾಧ್ಯವಿಲ್ಲ. ಒಂದು ವಾರದಲ್ಲಿ ಅರಳೇರಿ ಪಂಚಾಯಿತಿಯಿಂದ ಮಾಲೂರು ಪುರಸಭೆಗೆ ವರ್ಗಾಯಿಸುವಂತೆ ಶಾಸಕರು ಸೂಚಿಸಿದ್ದಾರೆ. ಅದೇ ರೀತಿ ವೈಟ್ ಗಾರ್ಡನ್ ಬಡಾವಣೆ ಪಟ್ಟಣದ ಪುರಸಭೆಗೆ ವರ್ಗಾಯಿಸಲಾಗುವುದು.ಸುಮತಿ ಅರಳೇರಿ ಗ್ರಾ.ಪಂ ಪಿಡಿಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT