ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಲ್ಲಿ ಸೃಜನಶೀಲತೆ, ನಾಯಕತ್ವ ಗುಣ ಬೆಳಸಿ

Last Updated 8 ಡಿಸೆಂಬರ್ 2019, 2:12 IST
ಅಕ್ಷರ ಗಾತ್ರ

ಕೋಲಾರ: ‘ಶಿಕ್ಷಕರು ಬೋಧನಾ ಕೌಶಲ ವೃದ್ದಿಸಿಕೊಂಡು ಮಕ್ಕಳಲ್ಲಿ ಸೃಜನಶೀಲತೆ, ನಾಯಕತ್ವ ಗುಣ ಬೆಳೆಸಬೇಕು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ರತ್ನಯ್ಯ ಸಲಹೆ ನೀಡಿದರು.

ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಅಗಸ್ತ್ಯ ಇಂಟರ್ ನ್ಯಾಷನಲ್ ಫೌಂಡೇಷನ್ ವತಿಯಿಂದ ಶನಿವಾರ ಆಯೋಜಿಸಿದ್ದ ರಸಪ್ರಶ್ನೆ ಸ್ವರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿ, ‘ತಂತ್ರಜ್ಞಾನ ಅಭಿವೃದ್ದಿಯಾಗುತ್ತಿದ್ದಂತೆ ಹೊಸಹೊಸ ಅನ್ವೇಷಣೆಗಳು ನಡೆಯುತ್ತಿದ್ದು, ಶಿಕ್ಷಕರು ನಿರಂತರ ಅಧ್ಯಯನದಿಂದ ತಮ್ಮ ಬೋಧನಾ ಸಾಮರ್ಥ್ಯ ವೃದ್ದಿಸಿಕೊಂಡು ಮಕ್ಕಳನ್ನು ಸಿದ್ದಗೊಳಿಸಬೇಕು’ ಎಂದರು.

‘ವಿಜ್ಞಾನ ಕಷ್ಟವಲ್ಲ ಆದರೆ ಅದನ್ನು ಮಕ್ಕಳು ಆಸಕ್ತಿಯಿಂದ ಕಲಿಯುವ ವಾತಾವರಣ ಸೃಷ್ಟಿ ಶಿಕ್ಷಕರ ಜವಾಬ್ದಾರಿ. ಪ್ರಯೋಗಗಳ ಮೂಲಕ ನೀಡುವ ವಿಜ್ಞಾನ ಶಿಕ್ಷಣ ಮಕ್ಕಳ ಮನದಲ್ಲಿ ಶಾಶ್ವತವಾಗಿ ನೆಲೆಯೂರುತ್ತದೆ’ ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ ಮಾತನಾಡಿ, ‘ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ. ಅನೇಕ ಶಾಲೆಗಳಲ್ಲಿ ಉತ್ತಮ ವಿಜ್ಞಾನ ಉಪಕರಣಗಳು ಇದ್ದು, ಅವುಗಳನ್ನು ಶಾಲಾ ಕೊಠಡಿಯಲ್ಲಿ ಮಕ್ಕಳಿಗೆ ಪ್ರದರ್ಶಿಸಬೇಕು’ ಎಂದು ಸೂಚಿಸಿದರು.

‘ಪೋಷಕರು ಮಕ್ಕಳ ಬಗ್ಗೆ ಅಪಾರ ನಂಬಿಕೆಯಿಂದ ಶಾಲೆಗೆ ಕಳುಹಿಸುತ್ತಾರೆ. ಅವರ ನಂಬಿಕೆ, ಆಶಯಗಳಿಗೆ ಚ್ಯುತಿ ಬಾರದಂತೆ ನಡೆದುಕೊಳ್ಳಬೇಕು. ನಿರಂತರ ಅಧ್ಯಯನ ನಡೆಸಿ, ಫಲಿತಾಂಶ ಹೆಚ್ಚಿಸಿಕೊಳ್ಳಬೇಕು’ ಎಂದು ಕವಿ ಮಾತು ಹೇಳಿದರು.

ಅಗಸ್ತ್ಯ ಇಂಟರ್ ನ್ಯಾಷನಲ್‌ನ ಪ್ರಾದೇಶಿಕ ಅಧಿಕಾರಿ ದಿಲೀಪ್ ಮಾತನಾಡಿ, ‘ರಸಪ್ರಶ್ನೆ ಸ್ವರ್ಧೆಗಳಲ್ಲಿ ತಾಲ್ಲೂಕಿನ ೫೦ ಹಿರಿಯ ಪ್ರಾಥಮಿಕ ಶಾಲೆಗಳಿಂದ ೧೦೦ ತಂಡಗಳು ಪಾಲ್ಗೊಂಡಿದ್ದು, ಮಕ್ಕಳು ಧೈರ್ಯದಿಂದ ಪ್ರಶ್ನೆಗಳಿಗೆ ಉತ್ತರ ನೀಡಿ’ ಎಂದರು.

‘ಮಕ್ಕಳ ವ್ಯಕ್ತಿತ್ವ ವಿಕಸನದ ಜತೆಗೆ ಅವರಲ್ಲಿ ತಂತ್ರಜ್ಞಾನದ ಮಾಹಿತಿ ಹೆಚ್ಚಿಸಿ ನಾಯಕತ್ವ ಗುಣ, ಸೃಜನಶೀಲತೆ ಹೆಚ್ಚಿಸುವುದೇ ನಮ್ಮ ಸಂಸ್ಥೆಯ ಉದ್ದೇಶವಾಗಿದೆ’ ಎಂದು ಹೇಳಿದರು.

ರಸಪ್ರಶ್ನೆ ಸ್ವರ್ಧೆಯಲ್ಲಿ ತಾಲ್ಲೂಕಿನ ಕಾಕಿನೆತ್ತ ಶಾಲೆಯ ಕೆ.ವಿ.ಗುಣಶ್ರೀ ಹಾಗೂ ಕೆ.ಮುನೇಶ್ ಪ್ರಥಮ ಸ್ಥಾನ, ರಾಜಕಲ್ಲಹಳ್ಳಿ ಶಾಲೆಯ ವಿ.ಪ್ರಜ್ವಲ್, ಕೆ.ಸಿ.ಹರ್ಷ ದ್ವಿತೀಯ ಸ್ಥಾನ ಹಾಗೂ ವೇಮಗಲ್ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿ.ಎಂ.ಸಹನ ಹಾಗೂ ಕೆ.ಎಂ.ಜಯಶ್ರೀ ತೃತೀಯ ಸ್ಥಾನ ಪಡೆದುಕೊಂಡರು.

ಅಗಸ್ತ್ಯ ಇಂಟರ್ ನ್ಯಾಷನಲ್ ಫೌಂಡೇಷನ್‌ನ ಮುಖ್ಯಸ್ಥರಾದ ನಾಗಪ್ಪ, ಆನಂದ್, ಹರೀಶ್‌ಕುಮಾರ್, ರಾಘವೇಂದ್ರ, ಮಹೇಶ್, ಪ್ರಿಯಾಂಕಾ, ಗಾಯಿತ್ರಿ, ವಸಂತಕುಮಾರ್, ಕ್ಷೇತ್ರ ಸಮನ್ವಯಾಧಿಕಾರಿ ರಾಮಕೃಷ್ಣಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT