ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ | ತೊಟ್ಲಿ ಗೇಟ್‌: ರಸ್ತೆ ಒತ್ತುವರಿ ತೆರವು

Last Updated 3 ಫೆಬ್ರುವರಿ 2022, 14:00 IST
ಅಕ್ಷರ ಗಾತ್ರ

ಕೋಲಾರ: ತಾಲ್ಲೂಕಿನ ತೊಟ್ಲಿ ಮತ್ತು ಚಿಟ್ನಹಳ್ಳಿ ಗೇಟ್‌ನ ಚಿಂತಾಮಣಿ ಮುಖ್ಯರಸ್ತೆಯ ಇಕ್ಕೆಲಗಳಲ್ಲಿ ರಸ್ತೆ ಒತ್ತುವರಿ ಮಾಡಿಕೊಂಡು ಇಟ್ಟಿದ್ದ ಅಂಗಡಿಗಳನ್ನು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗುರುವಾರ ತೆರವುಗೊಳಿಸಿದರು.

ಲೋಕೋಪಯೋಗಿ ಇಲಾಖೆಗೆ ಸೇರಿದ ಚಿಂತಾಮಣಿ ರಸ್ತೆಯು ಸುಮಾರು 45 ಅಡಿ ಅಗಲವಿದ್ದು, ರಸ್ತೆಯ ಎರಡೂ ಬದಿಯಲ್ಲಿ ಅನಧಿಕೃತವಾಗಿ ಹೋಟೆಲ್‌, ಬೇಕರಿ ಹಾಗೂ ಮಾಂಸದ ಅಂಗಡಿಗಳು ತಲೆಎತ್ತಿದ್ದವು. ರಸ್ತೆ ಒತ್ತುವರಿ ಮಾಡಿಕೊಂಡಿದ್ದ ಅಂಗಡಿಗಳ ಮಾಲೀಕರು ಮಳಿಗೆಗಳ ಮುಂದೆ ನೆರಳಿಗೆ ಶೀಟ್‌ಗಳನ್ನು ಹಾಕಿದ್ದರು.

ರಸ್ತೆ ಒತ್ತುವರಿಯಿಂದ ವಾಹನ ಸಂಚಾರಕ್ಕೆ ಹಾಗೂ ಜನರ ಓಡಾಟಕ್ಕೆ ಸಮಸ್ಯೆಯಾಗುತ್ತಿತ್ತು. ಅಲ್ಲದೇ, ಆಗಾಗ್ಗೆ ಸಣ್ಣಪುಟ್ಟ ಅಪಘಾತ ಸಂಭವಿಸುತ್ತಿದ್ದವು.

ಮಾಂಸದ ಅಂಗಡಿಗಳು ಹೆಚ್ಚಾಗಿದ್ದ ಕಾರಣ ಬೀದಿ ನಾಯಿ ಹಾವಳಿ ಹೆಚ್ಚಿತ್ತು. ಮಾಂಸದಂಗಡಿಗಳ ಮುಂದೆ ಜಮಾಯಿಸುತ್ತಿದ್ದ ಬೀದಿ ನಾಯಿಗಳು ರಸ್ತೆಯಲ್ಲಿ ಸಂಚರಿಸುವ ಬೈಕ್‌ ಸವಾರರನ್ನು ಹಿಂಬಾಲಿಸಿ ಹೋಗಿ ಕಚ್ಚಿ ಗಾಯಗೊಳಿಸುತ್ತಿದ್ದವು. ರಸ್ತೆ ಒತ್ತುವರಿಯಿಂದ ರೋಸಿ ಹೋಗಿದ್ದ ಸ್ಥಳೀಯರು ಅನಧಿಕೃತ ಮಳಿಗೆಗಳನ್ನು ತೆರವುಗೊಳಿಸುವಂತೆ ಲೋಕೋಪಯೋಗಿ ಇಲಾಖೆಗೆ ಹಲವು ಬಾರಿ ದೂರು ಕೊಟ್ಟಿದ್ದರು.

ಈ ದೂರಿನ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಅಂಗಡಿಗಳನ್ನು ತೆರವು ಮಾಡುವಂತೆ ಮಾಲೀಕರಿಗೆ ನೋಟಿಸ್‌ ಜಾರಿ ಮಾಡಿದ್ದರು. ಆದರೂ ಮಾಲೀಕರು ಸ್ವಪ್ರೇರಣೆಯಿಂದ ಅಂಗಡಿ ತೆರವು ಮಾಡಿರಲಿಲ್ಲ. ಹೀಗಾಗಿ ಗುರುವಾರ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ ನಡೆಸಿದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಅಂಗಡಿಗಳನ್ನು ತೆರವುಗೊಳಿಸಿದರು.

‘ಮತ್ತೆ ರಸ್ತೆ ಒತ್ತುವರಿ ಮಾಡಿ ಅಂಗಡಿ ಇಡಬಾರದು. ಸಾರ್ವಜನಿಕರಿಗೆ ಸಮಸ್ಯೆಯಾದರೆ ಶಿಸ್ತುಕ್ರಮ ಜರುಗಿಸುತ್ತೇವೆ’ ಎಂದು ಅಧಿಕಾರಿಗಳು ಅಂಗಡಿಗಳ ಮಾಲೀಕರಿಗೆ ಎಚ್ಚರಿಕೆ ನೀಡಿದರು.

ಲೋಕೋಪಯೋಗಿ ಇಲಾಖೆ ಕಾರ್ಯ ನಿರ್ವಾಹಕ ಎಂಜಿನಿಯರ್‌ ‌ಚಂದ್ರಶೇಖರ್, ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ ನಾರಾಯಣಸ್ವಾಮಿ, ಡಿವೈಎಸ್ಪಿ ರಮೇಶ್, ಕೋಲಾರ ಗ್ರಾಮಾಂತರ ಠಾಣೆ ಹಾಗೂ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್‌ ಪಡೆ ಸಿಬ್ಬಂದಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT