ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಠಿಣ ಪರಿಶ್ರಮ– ಏಕಾಗ್ರತೆಯಿಂದ ಸಾಧನೆ

ಸಂವಾದದಲ್ಲಿ ವಿದ್ಯಾರ್ಥಿಗಳಿಗೆ ಡಿಡಿಪಿಐ ರತ್ನಯ್ಯ ಕಿವಿಮಾತು
Last Updated 9 ಫೆಬ್ರುವರಿ 2019, 14:34 IST
ಅಕ್ಷರ ಗಾತ್ರ

ಕೋಲಾರ: ‘ಕಠಿಣ ಪರಿಶ್ರಮ ಮತ್ತು ಏಕಾಗ್ರತೆಯಿದ್ದರೆ ಎಂತಹ ಸಾಧನೆಯನ್ನಾದರೂ ಮಾಡಬಹುದು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ರತ್ನಯ್ಯ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಇಲ್ಲಿ ಶನಿವಾರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ‘ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸುವುದು ಹೇಗೆ’ ವಿಷಯ ಕುರಿತ ಸಂವಾದದಲ್ಲಿ ಮಾತನಾಡಿ, ‘ವಿದ್ಯಾರ್ಥಿಗಳು ಪೋಷಕರ ಆಶಯ, ಕಷ್ಟದ ಬಗ್ಗೆ ಯೋಚಿಸಿ ಛಲದಿಂದ ಗುರಿ ಸಾಧನೆಗೆ ಸಂಕಲ್ಪ ಮಾಡಬೇಕು. ಆತ್ಮವಿಶ್ವಾಸವಿದ್ದರೆ ಯಾವುದೇ ಸವಾಲು ಜಯಿಸಬಹುದು’ ಎಂದರು.

‘ಎಸ್ಸೆಸ್ಸೆಲ್ಸಿ ಪರೀಕ್ಷೆ ಕುರಿತು ಉದಾಸೀನತೆ ಬೇಡ. ಇಷ್ಟಪಟ್ಟು ಕಲಿಯುವವರಿಗೆ ಪರೀಕ್ಷೆ ಎಂದಿಗೂ ಕಷ್ಟವಲ್ಲ. ಭವಿಷ್ಯ ರೂಪಿಸಿಕೊಳ್ಳಲು ಇರುವ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಮಿದುಳು ಅಕ್ಷಯಪಾತ್ರೆ ಇದ್ದಂತೆ. ಯಾರೂ ದಡ್ಡರಲ್ಲ. ಏಕಾಗ್ರತೆಯಿಂದ ಕಲಿಕೆಗೆ ಮುಂದಾದವರು ಸಾಧಕರಾಗುತ್ತಾರೆ. ವಿದ್ಯಾರ್ಥಿಗಳ ಆಲೋಚನೆ ಕಲಿಕೆಗಷ್ಟೇ ಸೀಮಿತವಾಗಿರಬೇಕು’ ಎಂದು ಸಲಹೆ ನೀಡಿದರು.

40 ದಿನ ಬಾಕಿ: ‘ಮಾ.21ರಿಂದ ಪರೀಕ್ಷೆ ಆರಂಭವಾಗುತ್ತದೆ. ಪರೀಕ್ಷೆಗೆ ಕೇವಲ 40 ದಿನ ಮಾತ್ರ ಬಾಕಿಯಿದೆ. ಈ ಅವಧಿಯಲ್ಲಿ ಕಲಿಕೆಯನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಭವಿಷ್ಯದಲ್ಲಿ ಕಷ್ಟಕ್ಕೆ ಗುರಿಯಾಗುತ್ತೀರಿ’ ಎಂದು ಎಸ್ಸೆಸ್ಸೆಲ್ಸಿ ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ಹೇಳಿದರು.

‘ಪರೀಕ್ಷೆಗೆ ಭಯಪಡುವ ಅಗತ್ಯವಿಲ್ಲ. ಇಂದಿನಿಂದಲೇ ಅಭ್ಯಾಸ ಮಾಡಿದರೆ ಆತ್ಮವಿಶ್ವಾಸ ಮೂಡುತ್ತದೆ. ಇಲಾಖೆಯು ಶಾಲೆಗಳಿಗೆ ನೀಡಿರುವ ವರ್ಕ್ ಬುಕ್‌ಗಳ ಸದುಪಯೋಗ ಪಡೆಯಿರಿ. ಉತ್ತರ ಬರೆದು ಅಭ್ಯಾಸ ಮಾಡಿ’ ಕಿವಿಮಾತು ಹೇಳಿದರು.

ಇಲಾಖೆಯಿಂದ ಮುಂದಿನ ವಾರ ಮತ್ತೆ 6 ಸೆಟ್ ಪ್ರಶ್ನೆಪತ್ರಿಕೆ ನೀಡುತ್ತಿದ್ದು, ಇದಕ್ಕೆ ಪುಸ್ತಕ ನೋಡಿಯೇ ಉತ್ತರ ಬರೆದು ಅಭ್ಯಾಸ ಮಾಡಿ. ರೂಪಣಾತ್ಮಕ, ಸಂಕಲನಾತ್ಮಕ ಪರೀಕ್ಷೆಗಳ ಮೂಲಕ ಆಂತರಿಕ ಅಂಕಗಳನ್ನು ಶಿಕ್ಷಕರೇ ನೀಡುತ್ತಾರೆ. ಆಂತರಿಕ ಅಂಕಗಳು ಬರಲು ಶಾಲಾ ಹಾಜರಾತಿ ಉತ್ತಮವಾಗಿರಬೇಕು. ಯಾವುದೇ ಕಾರಣಕ್ಕೂ ತರಗತಿಗೆ ಗೈರಾಗಬೇಡಿ’ ಎಂದು ಸಲಹೆ ನೀಡಿದರು.

ಹೆಚ್ಚು ಒತ್ತು ನೀಡಿ: ‘ಹೆಚ್ಚಾಗಿ ಪಠ್ಯಪುಸ್ತಕ ಓದಿ. ಕಠಿಣ ವಿಷಯಗಳಾದ ಇಂಗ್ಲಿಷ್‌, ಗಣಿತ ಹಾಗೂ ವಿಜ್ಞಾನ ವಿಷಯಕ್ಕೆ ಹೆಚ್ಚು ಒತ್ತು ನೀಡಿ. ನಿರಂತರ ಅಭ್ಯಾಸದಿಂದ ಈ ವಿಷಯಗಳು ಸುಲಭವಾಗುತ್ತವೆ. ಗಣಿತ ವಿಷಯಕ್ಕೆ ಅಭ್ಯಾಸ ಬಹಳ ಮುಖ್ಯ. ಸೂತ್ರಗಳನ್ನು ನೆನಪಿಸಿಕೊಂಡು ತಪ್ಪಿಲ್ಲದೆ ಬರೆಯುವುದನ್ನು ಅಭ್ಯಾಸ ಮಾಡಿ. ಪ್ರತಿ ಅಧ್ಯಾಯದ ಸಮಸ್ಯೆಗಳನ್ನು ಬರೆದುಕೊಂಡು ಸ್ವತಃ ಬಿಡಿಸುವ ಸಾಮರ್ಥ್ಯ ಬೆಳೆಸಿಕೊಳ್ಳಿ’ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮಾಧವರೆಡ್ಡಿ, ವಿಷಯ ಪರಿವೀಕ್ಷಕರಾದ ಕೃಷ್ಣಪ್ಪ, ಗಾಯಿತ್ರಿ, ಶಶಿವಧನ, ತಾಲ್ಲೂಕು ಸಹ ಶಿಕ್ಷಕರ ಸಂಘದ ಅಧ್ಯಕ್ಷ ಕೆಂಪಣ್ಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT