ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಗಾದಿ ಉತ್ಸವ: ಮನರಂಜನೆಯ ರಸದೌತಣ

ಹಬ್ಬದ ಮೆರುಗು ಹೆಚ್ಚಿಸಿದ ಕಾರ್ಯಕ್ರಮ: ಮೈದಾನಕ್ಕೆ ಹರಿದುಬಂದ ಜನಸಾಗರ
Last Updated 3 ಏಪ್ರಿಲ್ 2022, 15:08 IST
ಅಕ್ಷರ ಗಾತ್ರ

ಕೋಲಾರ: ಯುಗಾದಿ ಪ್ರಯುಕ್ತ ಜಿಲ್ಲಾಡಳಿತವು ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಯುಗಾದಿ ಉತ್ಸವ’ ಸಾಂಸ್ಕೃತಿಕ ಕಾರ್ಯಕ್ರಮವು ಹಬ್ಬದ ಮೆರುಗು ಹೆಚ್ಚಿಸಿತು.

ಸಂಜೆ 7ರಿಂದ ಮಧ್ಯ ರಾತ್ರಿ 12ರವರೆಗೆ ನಡೆದ ಯುಗಾದಿ ಉತ್ಸವವು ಜನರಿಗೆ ಮನರಂಜನೆಯ ರಸದೌತಣ ಉಣಬಡಿಸಿತು. ಕೋವಿಡ್‌ ಹಾಗೂ ಲಾಕ್‌ಡೌನ್‌ ಕಾರಣಕ್ಕೆ ಕಳೆದ ಎರಡು ವರ್ಷಗಳಲ್ಲಿ ಯುಗಾದಿ ಆಚರಣೆ ಕಳೆಗುಂದಿತ್ತು. ಮತ್ತೊಂದೆಡೆ ಸಾಂಸ್ಕೃತಿಕ ಕಾರ್ಯಕ್ರಮಗಳೆಲ್ಲಾ ಸ್ಥಗಿತಗೊಂಡು ಜನರಿಗೆ ಮನರಂಜನೆಯೇ ಇಲ್ಲವಾಗಿತ್ತು.

ಹೀಗಾಗಿ ಜಿಲ್ಲಾಡಳಿತವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜನರ ಮನರಂಜನೆಗಾಗಿ ಏರ್ಪಡಿಸಿದ್ದ ಯುಗಾದಿ ಉತ್ಸವಕ್ಕೆ ಜನರಿಂದ ನಿರೀಕ್ಷೆಗೂ ಮೀರಿ ಮೆಚ್ಚುಗೆ ವ್ಯಕ್ತವಾಯಿತು. ಕಾರ್ಯಕ್ರಮ ನಡೆದ ಜ್ಯೂನಿಯರ್‌ ಕಾಲೇಜು ಮೈದಾನಕ್ಕೆ ಜನಸಾಗರವೇ ಹರಿದು ಬಂದಿತು. ಸ್ಥಳೀಯ ಜನಪದ ಕಲಾ ತಂಡಗಳು, ಕಲಾವಿದರ ಜತೆಗೆ ಹೊರ ಜಿಲ್ಲೆ ಮತ್ತು ರಾಜ್ಯಗಳ ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಕೇರಳ ಕಲಾವಿದರು ವಿಶಿಷ್ಟ ರೀತಿಯಲ್ಲಿ ಚಂಡೆ ವಾದ್ಯ ನುಡಿಸಿ ಪ್ರೇಕ್ಷಕರ ಮನಸೂರೆಗೊಂಡರು. ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ನಟನೆಯ ರಾಜಕುಮಾರ ಚಲನಚಿತ್ರದ ಗೀತೆಯನ್ನು ಚಂಡೆ ವಾದ್ಯ ಮತ್ತು ಕೊಳಲು ವಾದನದ ಮೂಲಕ ಪ್ರಸ್ತುತಪಡಿಸಿದರು. ಪ್ರೇಕ್ಷಕರು ತಮ್ಮ ಮೊಬೈಲ್‌ನಲ್ಲಿ ಟಾರ್ಚ್‌ ಬೆಳಗಿಸಿ ಅಭಿಮಾನ ಮೆರೆದರು. ಅಭಿಮಾನಿಗಳು ಪುನೀತ್‌ರ ಭಾವಚಿತ್ರವುಳ್ಳ ಬಾವುಟ ಹಾರಿಸಿ ನೆಚ್ಚಿನ ನಟನಿಗೆ ಗೌರವ ಸಮರ್ಪಿಸಿದರು.

ಪ್ರೇಕ್ಷಕರ ಹರ್ಷೋದ್ಗಾರ: ನಟ ಗಣೇಶ್, ನಿರೂಪಕಿ ಅನುಶ್ರೀ, ಖ್ಯಾತ ಹಿನ್ನೆಲೆ ಗಾಯಕರಾದ ವಿಜಯ್‍ಪ್ರಕಾಶ್, ಶಮಿತಾ ಮಲ್ನಾಡ್‌ ಅವರು ವೇದಿಕೆಗೆ ಆಗಮಿಸುತ್ತಿದ್ದಂತೆ ಪ್ರೇಕ್ಷಕರ ಹರ್ಷೋದ್ಗಾರ ಮುಗಿಲು ಮುಟ್ಟಿತು. ವಿಜಯ್‍ಪ್ರಕಾಶ್‌ ಗಾಯನಕ್ಕೆ ಯುವಕ, ಯುವತಿಯರು, ಮಕ್ಕಳು ಕುಣಿದು ಕುಪ್ಪಳಿಸಿದರು.

ನಟ ಗಣೇಶ್ ಮುಂಗಾರು ಮಳೆ ಚಿತ್ರದ ಡೈಲಾಗ್‌ ಹೇಳಿ ಪ್ರೇಕ್ಷಕರನ್ನು ರಂಜಿಸಿದರು. ನಿರೂಪಕಿ ಅನುಶ್ರೀ ತಮ್ಮ ಚಿನುಕುರುಳಿ ಮಾತಿನಿಂದ ಹಾಸ್ಯ ಚಟಾಕಿ ಹಾರಿಸಿ ಗಮನ ಸೆಳೆದರು. ಸರಿಗಮಪ ಕಾರ್ಯಕ್ರಮದ ಗಾಯಕರು, ಮಜಾ ಟಾಕೀಸ್ ಕಲಾವಿದರು ಪ್ರೇಕ್ಷಕರಿಗೆ ಮನರಂಜನೆ ನೀಡಿದರು. ಕಾರ್ಯಕ್ರಮದ ಅಂತ್ಯದಲ್ಲಿ ಪಟಾಕಿ ಸಿಡಿಸಲಾಯಿತು. ಬಾಣ ಬಿರುಸುಗಳು ಬಾನಂಗಳದಲ್ಲಿ ಬಣ್ಣದ ಚಿತ್ತಾರ ಬಿಡಿಸಿದವು.

ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಮುನಿರತ್ನ, ಸಂಸದ ಎಸ್.ಮುನಿಸ್ವಾಮಿ, ಶಾಸಕ ಕೆ.ಶ್ರೀನಿವಾಸಗೌಡ. ವಿಧಾನ ಪರಿಷತ್‌ ಸದಸ್ಯ ಗೋವಿಂದರಾಜು, ನಗರಸಭೆ ಅಧ್ಯಕ್ಷೆ ಶ್ವೇತಾ, ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಓಂಶಕ್ತಿ ಚಲಪತಿ, ಮಾಜಿ ಶಾಸಕ ವರ್ತೂರು ಪ್ರಕಾಶ್‌, ಜಿಲ್ಲಾಧಿಕಾರಿ ವೆಂಕಟ್‌ರಾಜಾ, ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಯುಕೇಶ್‌ಕುಮಾರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ದೇವರಾಜ್‌ ಕಾರ್ಯಕ್ರಮ ವೀಕ್ಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT