ಶುಕ್ರವಾರ, ಫೆಬ್ರವರಿ 21, 2020
26 °C
ಸ್ಥಳೀಯ ಪ್ರತಿಭೆ ಗುರುತಿಸಲು ಅವಕಾಶ: ಜಿ.ಪಂ ಸದಸ್ಯ ಅರುಣ್‌ಪ್ರಸಾದ್‌ ಹೇಳಿಕೆ

ವಕ್ಕಲೇರಿ: 9ಕ್ಕೆ ಜನಪದ ಜಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಸರ್ಕಾರವು ಹೋಬಳಿ ಮಟ್ಟದಲ್ಲಿ ಜನಪದ ಜಾತ್ರೆ ನಡೆಸುತ್ತಿರುವುದರಿಂದ ಸ್ಥಳೀಯ ಪ್ರತಿಭೆಗಳನ್ನು ಗುರುತಿಸಲು ಅವಕಾಶವಾಗುತ್ತದೆ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಎನ್.ಅರುಣ್‌ಪ್ರಸಾದ್‌ ಅಭಿಪ್ರಾಯಪಟ್ಟರು.

ಜನಪದ ಜಾತ್ರೆ ಆಚರಣೆ ಕುರಿತು ತಾಲ್ಲೂಕಿನ ವಕ್ಕಲೇರಿ ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ‘ಸ್ಥಳೀಯವಾಗಿ ಸಾಕಷ್ಟು ಪ್ರತಿಭಾವಂತ ಕಲಾವಿದರಿದ್ದಾರೆ. ಸರ್ಕಾರ ಅಂತಹ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಬೇಕು’ ಎಂದು ಹೇಳಿದರು.

‘ವಕ್ಕಲೇರಿಯಲ್ಲಿ ಫೆ.9ರಂದು ಜನಪದ ಜಾತ್ರೆ ನಡೆಯುತ್ತದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ವಕ್ಕಲೇರಿಯ ಧರ್ಮರಾಯಸ್ವಾಮಿ ದೇವಸ್ಥಾನ ಆವರಣದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದೆ’ ಎಂದು ಮಾಹಿತಿ ನೀಡಿದರು.

‘ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಕಾರ್ಯಕ್ರಮ ಉದ್ಘಾಟಿಸುತ್ತಾರೆ. ಸಂಸದ ಎಸ್.ಮುನಿಸ್ವಾಮಿ, ಶಾಸಕ ಕೆ.ಶ್ರೀನಿವಾಸಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ವಿಧಾನ ಪರಿಷತ್ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ, ನಸೀರ್‍ ಅಹಮ್ಮದ್, ಶಾಸಕರಾದ ಕೆ.ಆರ್‌.ರಮೇಶ್‌ಕುಮಾರ್‌, ಎಸ್.ಎನ್.ನಾರಾಯಣಸ್ವಾಮಿ, ಕೆ.ವೈ.ನಂಜೇಗೌಡ ಹಾಗೂ ಎಂ.ರೂಪಕಲಾ ಭಾಗವಹಿಸುತ್ತಾರೆ’ ಎಂದರು.

ಹಬ್ಬದಂತೆ ಆಚರಿಸಿ: ‘ಜನಪದ ಜಾತ್ರೆಯನ್ನು ಹಬ್ಬದಂತೆ ಆಚರಿಸಬೇಕು. ಗ್ರಾಮದೆಲ್ಲೆಡೆ ಸ್ವಚ್ಛತೆ ಮಾಡಿ ಬಾಳೆ ದಿಂಡು ಕಟ್ಟಬೇಕು. ಜನರಿಗೆ ಕುಡಿಯುವ ನೀರು ಹಾಗೂ ಶೌಚಾಲಯ ವ್ಯವಸ್ಥೆ ಸರಿಯಿರಬೇಕು. ಫೆ.11 ಮತ್ತು 12ರಂದು ನಡೆಯುವ ಉದ್ಯೋಗ ಮೇಳದ ಬಗ್ಗೆ ವ್ಯಾಪಕ ಪ್ರಚಾರ ನಡೆಸಬೇಕು’ ಎಂದು ಹೇಳಿದರು.

‘ಕಾರ್ಯಕ್ರಮ ರಾಜಕೀಯರಹಿತ ಕಾರ್ಯಕ್ರಮವಾಗಬೇಕು. ಸಮಯಾವಕಾಶ ಕಡಿಮೆಯಿದ್ದು, ಹೋಬಳಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳಲ್ಲೂ ಹೆಚ್ಚಿನ ಪ್ರಚಾರ ನಡೆಸಬೇಕು. ಜತೆಗೆ ಕಾರ್ಯಕ್ರಮದ ಮಾಹಿತಿಯುಳ್ಳ ಕರಪತ್ರ ಹಂಚಬೇಕು. ಜನರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಬರುವಂತೆ ಮಾಡಬೇಕು’ ಎಂದು ಸೂಚಿಸಿದರು.

20 ಕಲಾ ತಂಡ: ‘ಸರ್ಕಾರದ ಆದೇಶದಂತೆ ಇಲಾಖೆಯಿಂದ ಜಿಲ್ಲೆಯಾದ್ಯಂತ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗುತ್ತಿದೆ. ಈ ವರ್ಷ ವಕ್ಕಲೇರಿ ಹೋಬಳಿಯಲ್ಲಿ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್ ಮಾಹಿತಿ ನೀಡಿದರು.

‘ಫೆ.9ರಂದು ವಕ್ಕಲೇರಿಯಲ್ಲಿ ಜಾತ್ರೆ ಇರುವುದರಿಂದ ಜನಪದ ಜಾತ್ರೆ ಆಚರಿಸಲಾಗುತ್ತಿದೆ. ಬೇರೆ ತಾಲ್ಲೂಕುಗಳಿಂದ 20ಕ್ಕೂ ಹೆಚ್ಚು ಕಲಾ ತಂಡಗಳು ಕಾರ್ಯಕ್ರಮಕ್ಕೆ ಬರುತ್ತವೆ. ಸುಗಮ ಸಂಗೀತ, ಶಾಸ್ತ್ರೀಯ ಸಂಗೀತ, ಜನಪದ ಗೀತಾ ಗಾಯನ, ರಂಗಗೀತೆ, ಜನಪದ ನೃತ್ಯ ಹಾಗೂ ಭರತನಾಟ್ಯ ನಡೆಯುತ್ತದೆ’ ಎಂದು ತಿಳಿಸಿದರು.

ವಕ್ಕಲೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಮ್ಮ, ಸದಸ್ಯರು ಹಾಗೂ ಪಿಡಿಒ ಆರ್.ಮಂಜುನಾಥ್‌ಪ್ರಸಾದ್‌ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)