ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಮದ್ಯದಂಗಡಿ ತೆರವಿಗೆ ಗ್ರಾಮಸ್ಥರ ಆಗ್ರಹ

Published 10 ಜೂನ್ 2023, 14:53 IST
Last Updated 10 ಜೂನ್ 2023, 14:53 IST
ಅಕ್ಷರ ಗಾತ್ರ

ಕೋಲಾರ: ತಾಲ್ಲೂಕಿನ ಬೆಗ್ಲಿ ಬೆಣಜೇನಹಳ್ಳಿಯಲ್ಲಿ ತೆರೆದಿರುವ ಎಂಎಸ್‌ಐಎಲ್‌ ಮದ್ಯದಂಗಡಿಯನ್ನು ಕೂಡಲೇ ತೆರವುಗೊಳಿಸುವಂತೆ ಆಗ್ರಹಿಸಿ ಗ್ರಾಮದ ಮಹಿಳೆಯರು ಹಾಗೂ ಯುವಕರು ಶನಿವಾರ ಪ್ರತಿಭಟನೆ ನಡೆಸಿದರು.

ಘೋಷಣೆ ಕೂಗುತ್ತಾ ಮೆರವಣಿಗೆಯಲ್ಲಿ ಬಂದ ಗ್ರಾಮಸ್ಥರು ಟೇಕಲ್‌ ರಸ್ತೆ ತಡೆ ಹಿಡಿದರು. ತಮ್ಮನ್ನು ತಡೆಯಲು ಮುಂದಾದ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದರು. ಸುತ್ತಲಿನ ಗ್ರಾಮಗಳಿಂದ ಬಂದ ಜನರೂ ಪ್ರತಿಭಟನೆಯಲ್ಲಿ ಭಾಗವಹಿಸಿದರು. ಮದ್ಯದಂಗಡಿ ಮುಂದೆ ಕುಳಿತ ಪ್ರತಿಭಟನಕಾರರು ನ್ಯಾಯ ಬೇಕೆಂದು ಪಟ್ಟು ಹಿಡಿದರು. ಮದ್ಯದಂಗಡಿ ಬಾಗಿಲು ತೆರೆಯಲು ಬಿಡಲಿಲ್ಲ.

‘ಮದ್ಯದಂಗಡಿ ತೆರೆಯಲು ಅವಕಾಶ ನೀಡದಂತೆ ಹಲವಾರು ಬಾರಿ ಗ್ರಾಮ ಪಂಚಾಯಿತಿ, ಜಿಲ್ಲಾಧಿಕಾರಿ ಕಚೇರಿ ಹಾಗೂ ಅಬಕಾರಿ ಇಲಾಖೆಗೆ ತಕರಾರು ಅರ್ಜಿ ಸಲ್ಲಿಸಿದ್ದೇವೆ. ಫೆಬ್ರುವರಿ 9ರಂದು ಅರ್ಜಿ ನೀಡಿದ್ದರೂ ಜೂನ್‌ 9ರಂದು ಎಂಎಸ್‌ಐಎಲ್‌ ಮದ್ಯದಂಗಡಿ ತೆರೆಯಲಾಗಿದೆ. ಈ ಮದ್ಯದಂಗಡಿ ಗ್ರಾಮದಿಂದ 100 ಮೀಟರ್‌ ಅಂತರದಲ್ಲೇ ಇದೆ. ಈ ಪ್ರದೇಶದಲ್ಲಿ ಶಾಲೆ ಇದೆ. ಸುತ್ತಲಿನ ಹಳ್ಳಿಗಳಿಂದ ಮಕ್ಕಳು ಬರುತ್ತಾರೆ. ಪಕ್ಕದಲ್ಲಿ ಮದ್ಯದಂಗಡಿಯಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗಿದೆ’ ಎಂದರು.

‘ಸುತ್ತಲಿನ ಗ್ರಾಮಸ್ಥರು ಈ ರಸ್ತೆಯ ಮೂಲಕವೇ ಕೋಲಾರ ನಗರಕ್ಕೆ ಹೋಗಬೇಕು. ಜೊತೆಗೆ ಬಸ್ಸಿನ ಸಮಸ್ಯೆಯೂ ಇದೆ. ಹೀಗಾಗಿ, ರಸ್ತೆಯಲ್ಲಿ ನಡೆದು ಹೋಗಬೇಕಿದೆ. ಮಹಿಳೆಯರು, ಯುವತಿಯರು, ಮಕ್ಕಳಿಗೆ ಮದ್ಯದಂಗಡಿ ಮುಂದೆ ಹೋಗುವಾಗ ಕಿರಿಕಿರಿಯಾಗುತ್ತಿದೆ. ಕೆಲವರು ರೇಗಿಸಿದ್ದುಂಟು. ತುಂಬಾ ತೊಂದರೆ ಆಗುತ್ತಿದ್ದು, ಕೂಡಲೇ ಮದ್ಯದಂಗಡಿಯನ್ನು ತೆರವುಗೊಳಿಸಬೇಕು, ಪರವಾನಗಿಯನ್ನು ರದ್ದುಗೊಳಿಸಬೇಕು’ ಎಂದು ಒತ್ತಾಯಿಸಿದರು.

ತೆರವುಗೊಳಿಸುವವರೆಗೆ ಧರಣಿ ಮುಂದುವರಿಯಲಿದೆ ಎಂದ ಗ್ರಾಮಸ್ಥರು ಅಬಕಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಕೋಲಾರ ಗ್ರಾಮಾಂತರ ಪೊಲೀಸ್‌ ಠಾಣೆಯ ಸರ್ಕಲ್‌ ಇನ್‌ಸ್ಪೆಕ್ಟರ್‌ ಲೋಕೇಶ್‌ ಹಾಗೂ ಇತರ ಪೊಲೀಸರು ಸ್ಥಳದಲ್ಲಿದ್ದರು.

ಗ್ರಾಮಸ್ಥರಾದ ಮುನಿಯಪ್ಪ, ಮಂಜುನಾಥ್‌, ಚಂದ್ರೇಗೌಡ, ನಟರಾಜ್‌, ಸುಬ್ಬು, ಶೈಲಾ, ವರಲಕ್ಷ್ಮಿ, ಪ್ರೇಮಾ, ಕಾಶಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT