ಶನಿವಾರ, ನವೆಂಬರ್ 23, 2019
18 °C

ಕಸ ವಿಲೇವಾರಿಗೆ ಗ್ರಾಮಸ್ಥರ ಆಕ್ರೋಶ

Published:
Updated:

ಕೋಲಾರ: ತಾಲ್ಲೂಕಿನ ಚಿಕ್ಕನಹಳ್ಳಿ, ಮಜರಾ ಹಾಗೂ ಲಕ್ಷೀಪುರ ಸಮೀಪದ ಬೆಟ್ಟಹಳ್ಳಿ ಗ್ರಾಮದ ಸರ್ವೆ ನಂಬರ್‌ 2ರ ಗೋಮಾಳದ ಜಮೀನಿನಲ್ಲಿ ಎಪಿಎಂಸಿಯ ಕಸ ವಿಲೇವಾರಿ ಮಾಡದಂತೆ ಒತ್ತಾಯಿಸಿ ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು ಹೆಚ್ಚುವರಿ ಜಿಲ್ಲಾಧಿಕಾರಿಗೆ ಇಲ್ಲಿ ಸೋಮವಾರ ಮನವಿ ಸಲ್ಲಿಸಿದರು.

‘ಗ್ರಾಮದ ಬಳಿಯ ಗೋಮಾಳದ ಜಮೀನಿನಲ್ಲಿ ಕೋಲಾರ ಎಪಿಎಂಸಿಯ ಕಸ ಸುರಿಯಲಾಗುತ್ತಿದೆ. ಇದರಿಂದ ಸುತ್ತಮುತ್ತಲಿನ ಪರಿಸರ ಮಾಲಿನ್ಯವಾಗುತ್ತಿದೆ. ಕಸದಿಂದ ಸೊಳ್ಳೆ, ನಾಯಿ ಹಾಗೂ ಹಂದಿ ಕಾಟ ಹೆಚ್ಚಿದ್ದು, ಜಾನುವಾರುಗಳಿಗೆ ಮತ್ತು ಜನರಿಗೆ ರೋಗ ಬರುತ್ತಿವೆ’ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.

‘ಎಪಿಎಂಸಿ ಕಸ ವಿಲೇವಾರಿಯ ಟೆಂಡರ್‌ ಪಡೆದಿರುವ ಗುತ್ತಿಗೆದಾರರಿಗೆ ಗೋಮಾಳದಲ್ಲಿ ಕಸ ಸುರಿಯದಂತೆ ಸಾಕಷ್ಟು ಬಾರಿ ಮನವಿ ಮಾಡಿದ್ದೇವೆ. ಆದರೆ, ಗುತ್ತಿಗೆದಾರರು ಮನವಿಗೆ ಸ್ಪಂದಿಸುತ್ತಿಲ್ಲ. ಅವರ ನಿರ್ಲಕ್ಷ್ಯದಿಂದ ಸ್ಥಳೀಯರು ತೊಂದರೆ ಅನುಭವಿಸುವಂತಾಗಿದೆ. ಕಸದಿಂದ ನೊಣಗಳು ಹೆಚ್ಚು ರೇಷ್ಮೆ ಹುಳು ಸಾಕಣೆಗೆ ಸಮಸ್ಯೆಯಾಗಿದೆ. ಬೆಳೆಗಳ ಮೇಲೆ ಪ್ರತಿಕೂಲ ಪರಿಣಾಮವಾಗುತ್ತಿದೆ’ ಎಂದು ಅಳಲು ತೋಡಿಕೊಂಡರು.

‘ಗೋಮಾಳದಲ್ಲಿ ರಾಶಿಯಾಗಿ ಬಿದ್ದಿರುವ ಕಸವು ಸ್ಥಳದಲ್ಲೇ ಕೊಳೆತು ದುರ್ನಾತ ಬೀರುತ್ತಿದೆ. ಇದರಿಂದ ಗ್ರಾಮಸ್ಥರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನೈರ್ಮಲ್ಯ ಸಮಸ್ಯೆ ಎದುರಾಗಿದ್ದು, ಈಗಾಗಲೇ ಸಾಕಷ್ಟು ಮಂದಿ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೂ ಗುತ್ತಿಗೆದಾರರು ಕಸ ತಂದು ಗೋಮಾಳದಲ್ಲಿ ಸುರಿಯುತ್ತಿದ್ದಾರೆ’ ಎಂದು ಗ್ರಾಮದ ಶ್ರೀರಾಮ್‌ ದೂರಿದರು.

‘ಗೋಮಾಳದ ಬದಲು ಬೇರೆಡೆ ಕಸ ವಿಲೇವಾರಿ ಮಾಡಬೇಕು. ಈ ಸಂಬಂಧ ಜಿಲ್ಲಾಡಳಿತವು ಗುತ್ತಿಗೆದಾರರಿಗೆ ಸ್ಪಷ್ಟ ನಿರ್ದೇಶನ ನೀಡಬೇಕು. ಗೋಮಾಳದಲ್ಲಿನ ಕಸವನ್ನು ಶೀಘ್ರವೇ ತೆರವುಗೊಳಿಸಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಗ್ರಾಮಸ್ಥರಾದ ನಾರಾಯಣಸ್ವಾಮಿ, ಲೋಕೇಶ್, ಪ್ರಕಾಶ್, ಗೋಪಾಲಪ್ಪ, ವಿಜಿಕುಮಾರ್, ವೆಂಕಟಮುನಿ ಹಾಜರಿದ್ದರು.

ಪ್ರತಿಕ್ರಿಯಿಸಿ (+)