ಭಾನುವಾರ, ಸೆಪ್ಟೆಂಬರ್ 19, 2021
27 °C
ಚಿಕಾಗೊ ಭಾಷಣದ 125ನೇ ವರ್ಷಾಚರಣೆ ಉಪನ್ಯಾಸ

ವಿವೇಕಾನಂದರ ಪ್ರೇರಣಾದಾಯಕ ನುಡಿ ದಾರಿದೀಪ: ಶಾಸಕ ಶ್ರೀನಿವಾಸಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಕೋಲಾರ: ‘ದೇಶದ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ. ಅವರ ಪ್ರೇರಣಾದಾಯಕ ನುಡಿಗಳು ಯುವಕರಿಗೆ ದಾರಿದೀಪ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಅಭಿಪ್ರಾಯಪಟ್ಟರು.

ಸ್ವಾಮಿ ವಿವೇಕಾನಂದರ ಚಿಕಾಗೊ ಭಾಷಣದ 125ನೇ ವರ್ಷಾಚರಣೆ ಅಂಗವಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಇಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಉಪನ್ಯಾಸ ಉದ್ಘಾಟಿಸಿ ಮಾತನಾಡಿ, ‘ಯುವಕ ಯುವತಿಯರು ವಿವೇಕಾನಂದರ ತತ್ವಾದರ್ಶ ಮೈಗೂಡಿಸಿಕೊಂಡರೆ ಸಮಾಜದಲ್ಲಿ ಸತ್ಪ್ರಜೆಗಳಾಗಿ ರೂಪುಗೊಳ್ಳಬಹುದು’ ಎಂದು ಕಿವಿಮಾತು ಹೇಳಿದರು.

‘ವಿವೇಕಾನಂದರು 5 ವರ್ಷಗಳ ಕಾಲ ದೇಶದೆಲ್ಲೆಡೆ ಸಂಚರಿಸಿ ತತ್ವಜ್ಞಾನ, ಯೋಗ, ವೇದಾಂತದ ಬಗ್ಗೆ ಪ್ರಚಾರ ನಡೆಸಿದರು. ಅಲ್ಲದೇ, ವಿದೇಶದಲ್ಲೂ ದೇಸಿ ಸಂಸ್ಕೃತಿ ಪಸರಿಸಿದರು. ಅವರು 1893ರಲ್ಲಿ ಚಿಕಾಗೊ ವಿಶ್ವಧರ್ಮ ಸಮ್ಮೇಳನದಲ್ಲಿ ಭಾರತದ ತತ್ವಾದರ್ಶವನ್ನು ಹೃದಯ ಸ್ಪರ್ಶಿಯಾಗಿ ತಿಳಿಸಿದ್ದರು. ಸೆ.11ರ ಆ ದಿನವು ಮಹತ್ವದ್ದು. ಅವರ ಭಾಷಣದ ಸಂದೇಶ ಮತ್ತು ಆಲೋಚನೆಗಳು ಪ್ರತಿಯೊಬ್ಬರಿಗೂ ತಿಳಿಯಬೇಕು’ ಎಂದರು.

ಯುವಕರಿಗೆ ಸ್ಫೂರ್ತಿ: ‘ವಿವೇಕಾನಂದರು ಎಲ್ಲಾ ಕಾಲಕ್ಕೂ ಪ್ರಸ್ತುತ. ಅವರು ಚಿಕಾಗೊದಲ್ಲಿ ಮಾಡಿದ ಭಾಷಣದಿಂದ ವಿಶ್ವ ವಿಖ್ಯಾತಿ ಪಡೆದರು. ಅವರು ಬೇರೆ ದೇಶಗಳ ಯುವಕ ಯುವತಿಯರಿಗೂ ಸ್ಫೂರ್ತಿಯಾಗಿದ್ದಾರೆ’ ಎಂದು ಸರ್ಕಾರಿ ಮಹಿಳಾ ಕಾಲೇಜಿನ ಉಪನ್ಯಾಸಕ ಜಿ.ಶಿವಪ್ಪ ಅರಿವು ಹೇಳಿದರು.

‘ಸರ್ವ ಧರ್ಮ ಸಮನ್ವಯತೆ ಸಾರುವುದು ಮತ್ತು ಅರ್ಥಹೀನ ಆಚರಣೆ ಖಂಡಿಸಿ ಸಮಾಜ ತಿದ್ದುವುದು ಶ್ರೀರಾಮಕೃಷ್ಣ ಆಶ್ರಮ ಸ್ಥಾಪನೆಯ ಮೂಲ ಉದ್ದೇಶ. ದಕ್ಷಿಣೇಶ್ವರ ದೇವಾಲಯದ ಪೂಜಾರಿಯಾಗಿದ್ದ ರಾಮಕೃಷ್ಣ ಪರಮಹಂಸರಿಂದಲೂ ತಿಳಿಯುವುದಿದೆ ಎಂದು ಅರಿತ ವಿವೇಕಾನಂದರು ಅವರನ್ನು ಗುರುಗಳಾಗಿ ಸ್ವೀಕರಿಸಿದ್ದರು’ ಎಂದು ವಿವರಿಸಿದರು.

‘ಚಿಕಾಗೊ ಸಮ್ಮೇಳನದಲ್ಲಿ ವಿವಿಧ ಧರ್ಮ ಗುರುಗಳ ಮಧ್ಯೆ ವಿವೇಕಾನಂದರು ಸಹೋದರ, ಸಹೋದರಿಯರೇ ಎಂದು ಕರೆದದ್ದು ಅವರು ಸರ್ವ ಧರ್ಮ ಸಹಿಷ್ಣುಗಳಾಗಿದ್ದರು ಎಂಬುದಕ್ಕೆ ಸಾಕ್ಷಿ. ಆದರೆ, ದೇಶದಲ್ಲಿ ಇಂದು ಸಹಿಷ್ಣುತೆ ಇಲ್ಲವಾಗಿದೆ. ವಿವೇಕಾನಂದರ ತತ್ವಾದರ್ಶವನ್ನು ಸರಿಯಾದ ರೀತಿಯಲ್ಲಿ ಜನರಿಗೆ ತಲುಪಿಸಿಲ್ಲ’ ಎಂದು ವಿಷಾದಿಸಿದರು.

ಅಂಬೇಡ್ಕರ್‌ ದೃಷ್ಟಿಕೋನ: ‘ವಿವೇಕಾನಂದ ಅವರು ಅಂಬೇಡ್ಕರ್‌ರ ದೃಷ್ಟಿಕೋನ ಹೊಂದಿದ್ದರು. ದೀನ ದಲಿತರ ಉದ್ಧಾರದ ಬಗ್ಗೆ ಅವರು ಮೈಸೂರು ಮಹಾರಾಜರಿಗೆ ಬರೆದ ಪತ್ರದಿಂದ ಈ ಸಂಗತಿ ತಿಳಿಯಬಹುದು. ಅಮೆರಿಕಕ್ಕೆ ಹಡಗಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಭೇಟಿಯಾದ ಟಾಟಾ ಅವರಿಗೆ ವೈಜ್ಞಾನಿಕ ಕೇಂದ್ರ ಸ್ಥಾಪನೆ ಮತ್ತು ಔದ್ಯೋಗೀಕರಣಕ್ಕೆ ಒತ್ತು ನೀಡುವಂತೆ ವಿವೇಕಾನಂದರು ಸಲಹೆ ಕೊಟ್ಟಿದ್ದರು ಎಂಬುದಕ್ಕೆ ದಾಖಲೆಪತ್ರಗಳು ಲಭ್ಯವಿವೆ’ ಎಂದು ಉಪನ್ಯಾಸಕ ಆರ್.ಶಂಕರಪ್ಪ ತಿಳಿಸಿದರು.

‘ಉತ್ತಮನಾಗು ಎಂದರೆ ಪೋಷಕರ ಕಷ್ಟದಲ್ಲಿ ಭಾಗಿಯಾಗಿ ನಂತರ ಸಮಾಜಕ್ಕೆ ಉಪಯೋಗವಾಗುವಂತಹ ಕೆಲಸ ಮಾಡು ಎಂದರ್ಥ. ವಿದ್ಯಾರ್ಥಿಗಳು ತಮ್ಮ ಮನೆಯಿಂದ ಈ ಕಾರ್ಯ ಆರಂಭಿಸಿದರೆ ನಾಗರಿಕ ಸಮಾಜ ಕಟ್ಟಬಹುದು. ಸತ್ತು ಬದುಕಿದವರು ಮತ್ತು ಬದುಕಿ ಸತ್ತವರು ಎಂಬ ಎರಡು ವರ್ಗಗಳ ಪೈಕಿ ಮೊದಲನೆಯವರಾಗೋಣ’ ಎಂದು ಸಲಹೆ ನೀಡಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಆರ್.ಗೀತಾ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಅಸಾದುಲ್ಲಾ ಖಾನ್, ವೇಮಗಲ್ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಟಿ.ಕೆ.ನಟರಾಜ್, ಶಿಕ್ಷಣಾಧಿಕಾರಿ ಆರ್.ಅಶೋಕ್, ಗ್ರೇಡ್2 ತಹಶೀಲ್ದಾರ್ ಚಂದ್ರಕಾಂತ, ಕಲಾವಿದ ಬಿ.ವಿ.ವಿ.ಗಿರಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು