ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವೇಕಾನಂದರ ಆಶಯ ಈಡೇರಿಸಿ

ಪಿಯು ಉಪನ್ಯಾಸಕರ ವೇದಿಕೆ ಅಧ್ಯಕ್ಷ ನಾಗರಾಜ್ ಸಲಹೆ
Last Updated 19 ಜನವರಿ 2020, 14:19 IST
ಅಕ್ಷರ ಗಾತ್ರ

ಕೋಲಾರ: ‘ಶಿಕ್ಷಣ, ಆರೋಗ್ಯದಿಂದ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂಬುದನ್ನು ಸ್ವಾಮಿ ವಿವೇಕಾನಂದರು ತಿಳಿಸಿದ್ದು, ಅವರ ಆಶಯಗಳನ್ನು ಈಡೇರಿಸುವ ಜವಾಬ್ದಾರಿ ಯುವಕರ ಮೇಲಿದೆ’ ಎಂದು ಪಿಯು ಉಪನ್ಯಾಸಕರ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಜೆ.ಜಿ.ನಾಗರಾಜ್ ತಿಳಿಸಿದರು.

ನಗರದ ಬಯಲು ಬಸವೇಶ್ವರ ದೇವಾಲಯದ ಆವರಣದಲ್ಲಿ ವಿವೇಕಾನಂದ ಯುವ ವೇದಿಕೆ ಭಾನುವಾರ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ ಜಯಂತಿ ಉದ್ಘಾಟಿಸಿ ಮಾತನಾಡಿ, ‘ಈಗಿನ ಸಮಾಜಕ್ಕೆ ವಿವೇಕಾನಂದರ ತತ್ವಾದರ್ಶ ಪ್ರಸ್ತುತವಾಗಿದೆ’ ಎಂದರು.

‘ದೇಶದಲ್ಲಿ 70 ಕೋಟಿಗಿಂತ ಹೆಚ್ಚು ಯುವಕರಿದ್ದು ಪ್ರತಿಯೊಬ್ಬರಿಗೂ ಶಿಕ್ಷಣ ಮತ್ತು ಉದ್ಯೋಗವನ್ನು ಒದಗಿಸುವುದಲ್ಲಿ ಸರ್ಕಾರಗಳು ವಿಫಲವಾಗಿವೆ. ಸಂಪನ್ಮೂಲ ಕೊರತೆಯಿಂದ ದೇಶದ ಅಭಿವೃದ್ಧಿ ಕುಂಠಿತಗೊಳ್ಳುತ್ತಿದೆ’ ಎಂದು ಅತಂಕವ್ಯಕ್ತಪಡಿಸಿದರು.

‘ವಿವೇಕಾನಂದರು ಪೋಷಕರ ಮಾರ್ಗದಲ್ಲಿ ಶಾಲಾ ದಿನಗಳನ್ನು ಕಳೆದರು. ಆನಂತರ ರಾಮಾಯಣ ಮಹಾಭಾರತ ಪುರಾಣಗಳನ್ನು ಅಧ್ಯಯನ ಮಾಡುವ ಮೂಲಕ ಭಾರತವನ್ನು ಬಲಿಷ್ಠ ರಾಷ್ಟ್ರವನ್ನಾಗಿ ನಿರ್ಮಾಣ ಮಾಡುವ ಪ್ರಯತ್ನಕ್ಕೆ ಮುಂದಾದರು. ಅವರ ಹಾದಿಯಲ್ಲಿ ಯುವಕರು ಸಾಗಿದರೆ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲು ಸಹಕಾರಿಯಾಗುತ್ತದೆ’ ಎಂದು ಹೇಳಿದರು.

‘ರಾಮಕೃಷ್ಣ ಪರಮಹಂಸರ ಮಾರ್ಗದರ್ಶನದಲ್ಲಿ ಆಧ್ಯಾತ್ಮಿಕತೆಯ ಜ್ಞಾನ ಪಡೆದುಕೊಂಡರು. ದೇಶದ ಜನಸಂಖ್ಯೆಗೆ ಅನುಗುಣವಾಗಿ ಆಹಾರ ಮತ್ತು ಶಿಕ್ಷಣವನ್ನು ನೀಡಬೇಕೆಂದು ಒತ್ತಾಯಿಸಿದ್ದರು. ದಾರಿ ತಪ್ಪುತ್ತಿದ್ದ ಯುವಕರನ್ನು ಸರಿದಾರಿಯಲ್ಲಿ ಹೋಗುವಂತೆ ಎಚ್ಚರಿಸಿದರು’ ಎಂದರು.

ಸಾಹಿತಿ ರವೀಂದ್ರ ಸಿಂಗ್ ಮಾತನಾಡಿ, ‘ವಿವೇಕಾನಂದರು ಎಲ್ಲಾ ಕಾಲಕ್ಕೂ ಪ್ರಸ್ತುತ. ಅವರು ಷಿಕಾಗೊದಲ್ಲಿ ಮಾಡಿದ ಭಾಷಣದಿಂದ ವಿಶ್ವ ವಿಖ್ಯಾತಿ ಪಡೆದರು. ಅವರು ಯುವಕ ಯುವತಿಯರಿಗೆ ಸ್ಫೂರ್ತಿಯಾಗಿದ್ದಾರೆ. ವಿವೇಕಾನಂದರ ಕನಸು ನನಸಾಗಿಸುವುದು ಯುವಕರ ಜವಾಬ್ದಾರಿ. ಅವರ ಸಂದೇಶ ಮತ್ತು ಆಲೋಚನೆಗಳು ಪ್ರತಿಯೊಬ್ಬರಿಗೂ ತಿಳಿಯಬೇಕು’ ಎಂದು ಸಲಹೆ ನೀಡಿದರು.

ಕನ್ನಡಸಿರಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುಬ್ಬರಾಮಯ್ಯ ಮಾತನಾಡಿ, ‘ವಿದೇಶಗಳಲ್ಲಿ ಭಾರತದ ಬಗ್ಗೆ ತೋರುತ್ತಿದ್ದ ತತ್ಸಾರ ಮಾನೋಭಾವ ಹೋಗಲಾಡಿಸಿದರು’ ಚಿಕಾಗೋದಲ್ಲಿ ಮಾಡಿದ ಭಾಷಣದಿಂದ ದೇಶದ ಪರಂಪರೆಯ ಬಗ್ಗೆ ಇಡೀ ವಿಶ್ವಕ್ಕೆ ಪರಿಚಯಿಸಿದರು’ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಅನಾಥಾಶ್ರಮ ಮಕ್ಕಳಿಗೆ ಕಲಿಕಾ ಸಾಮಾಗ್ರಿಗಳನ್ನು ವಿತರಿಸಲಾಯಿತು.

ಪ್ರಾಂಶುಪಾಲ ಮಹೇಶ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಪ್ರಧಾನ ಕಾರ್ಯದರ್ಶಿ ಬಿ.ಸುರೇಶ್, ವಿವೇಕಾನಂದ ಯುವ ವೇದಿಕೆಯ ಪದಾಧಿಕಾರಿಗಳಾದ ಸ್ಪಂದನ್, ಜೀವನ್, ಕುಮಾರ್, ಆದರ್ಶ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT