ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರ ಪಟ್ಟಿ: ದೋಷ ಸರಿಪಡಿಸಿಕೊಳ್ಳಿ

ಜಾಗೃತಿ ಜಾಥಾದಲ್ಲಿ ಜಿ.ಪಂ ಉಪ ಕಾರ್ಯದರ್ಶಿ ಸಂಜೀವಪ್ಪ ಹೇಳಿಕೆ
Last Updated 14 ಅಕ್ಟೋಬರ್ 2019, 16:45 IST
ಅಕ್ಷರ ಗಾತ್ರ

ಕೋಲಾರ: ‘ಮತದಾರರ ಪಟ್ಟಿಯಲ್ಲಿನ ದೋಷ ಸರಿಪಡಿಸಿಕೊಂಡು ಮತದಾನದ ಹಕ್ಕು ಚಲಾಯಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸಂಜೀವಪ್ಪ ತಿಳಿಸಿದರು.

ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ಇಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ‘ಮತದಾರರ ಗುರುತಿನ ಚೀಟಿಯಲ್ಲಿ ಲೋಪವಿದ್ದರೆ ಮತದಾನದ ಹಕ್ಕಿನಿಂದ ವಂಚಿತರಾಗಬೇಕಾಗುತ್ತದೆ’ ಎಂದರು.

‘ಜಿಲ್ಲೆಯಲ್ಲಿ ಈಗಾಗಲೇ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಆರಂಭವಾಗಿದೆ. ತರಬೇತಿ ಹೊಂದಿದ ಮತಗಟ್ಟೆ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡುತ್ತಾರೆ. ಸಾರ್ವಜನಿಕರು ಸಹಾಯವಾಣಿ ಸಂಖ್ಯೆ 1950ಕ್ಕೆ ಕರೆ ಮಾಡಬಹುದು ಅಥವಾ ಚುನಾವಣಾ ಶಾಖೆಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು. ಜಿಲ್ಲೆಯ ಎಲ್ಲಾ ಕಾಲೇಜುಗಳಿಗೆ ಮತದಾರರ ನೋಂದಣಿ ಅರ್ಜಿ ನೀಡಲಾಗುತ್ತಿದೆ. 18 ವರ್ಷ ಮೀರಿದ ವಿದ್ಯಾರ್ಥಿಗಳು ಗುರುತಿನ ಚೀಟಿ ಪಡೆಯಬಹುದು’ ಎಂದು ವಿವರಿಸಿದರು.

‘ಮತದಾರರು ಮೊಬೈಲ್‌ನಲ್ಲಿ ಆ್ಯಪ್‌ ಡೌನ್‌ಲೋಡ್ ಮಾಡಿಕೊಂಡು ಅದರ ಮೂಲಕ ಮತದಾರ ಪಟ್ಟಿಯಲ್ಲಿರುವ ತಮ್ಮ ಕುಟುಂಬದ ಎಲ್ಲಾ ಮತದಾರರ ವಿವರ ಪರಿಶೀಲಿಸಬಹುದು’ ಎಂದು ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿಯಾದ ಜವಳಿ ಮತ್ತು ಕೈಮಗ್ಗ ಇಲಾಖೆ ಉಪ ನಿರ್ದೇಶಕಿ ಎಂ.ಸೌಮ್ಯ ಮಾಹಿತಿ ನೀಡಿದರು.

ಆ್ಯಪ್‌ನಲ್ಲಿ ತಿದ್ದುಪಡಿ: ‘ಮೊಬೈಲ್ ಆ್ಯಪ್‌ ಮೂಲಕ ಮತದಾರರ ಪಟ್ಟಿಯಲ್ಲಿನ ತಪ್ಪು ತಿದ್ದುಪಡಿ ಮಾಡಬಹುದು. ಗುರುತಿನ ಚೀಟಿ ಪಡೆಯಬಹುದು. ಇದು ಮತದಾರರ ಸ್ನೇಹಿ ಆ್ಯಪ್‌ ಆಗಿದೆ. ಈ ಆ್ಯಪ್‌ ಬಳಸುವಂತೆ ವ್ಯಾಪಕ ಪ್ರಚಾರ ನಡೆಸಬೇಕು. ಮೊಬೈಲ್ ಇಲ್ಲದವರು ಗ್ರಾಮ ಪಂಚಾಯಿತಿ, ಸಿಎಸ್‌ಸಿ ಕೇಂದ್ರ ಅಥವಾ ಅಟಲ್‌ಜಿ ಕೇಂದ್ರಗಳಿಗೆ ತೆರಳಿ ಅರ್ಜಿ ಹಾಕುವಂತೆ ತಿಳಿ ಹೇಳಬೇಕು’ ಎಂದು ಸೂಚಿಸಿದರು.

‘ಮತದಾರರ ವಿವರ ಪರಿಷ್ಕರಣೆ ತುಂಬ ಪ್ರಮುಖವಾದದ್ದು. 18 ವರ್ಷ ಪೂರೈಸಿರುವ ಎಲ್ಲರೂ ಕಡ್ಡಾಯವಾಗಿ ಮತದಾರರ ಗುರುತಿನ ಚೀಟಿ ಪರಿಷ್ಕರಣೆ ಮಾಡಿಕೊಳ್ಳಬೇಕು. ಗುರುತಿನ ಚೀಟಿ ಪರಿಷ್ಕರಣೆ ಮಾಡಿಕೊಳ್ಳದಿದ್ದರೆ ಹೆಸರು ಪಟ್ಟಿಯಿಂದಲೇ ಕೈಬಿಟ್ಟು ಹೋಗುವ ಸಾಧ್ಯತೆಯಿದೆ. ಆದ್ದರಿಂದ ಶೀಘ್ರವೇ ಮತದಾರರ ಪಟ್ಟಿ ಪರಿಷ್ಕರಣೆ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಜಿ.ಪಂ ಸಹಾಯಕ ಯೋಜನಾ ಅಧಿಕಾರಿ ಗೋವಿಂದಗೌಡ, ಸ್ಕೌಟ್ಸ್ ಮತ್ತು ಗೈಡ್ಸ್‌ ಜಿಲ್ಲಾ ಸಂಘಟನಾ ಆಯುಕ್ತ ವಿ.ಬಾಬು, ಸಂಘಟಕ ವಿಶ್ವನಾಥ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT