ಸೋಮವಾರ, ಮೇ 23, 2022
30 °C
2023ಕ್ಕೆ ಉದ್ಘಾಟನೆ: ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ

ಗುರುಭವನದ ಕನಸು ನನಸಾಗಿಸಲು ಪಣ: ನಾಗೇಶ್ ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘45 ವರ್ಷಗಳ ಗುರುಭವನ ನಿರ್ಮಾಣ ಕನಸನ್ನು ನನಸಾಗಿಸಲು ಪಣ ತೊಟ್ಟಿದ್ದು, 2023ರ ಶಿಕ್ಷಕರ ಜಯಂತಿಯಂದು ಗುರುಭವನ ಉದ್ಘಾಟಿಸುವ ಗುರಿಯಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ಜಿ.ನಾಗೇಶ್ ತಿಳಿಸಿದರು.

ಇಲ್ಲಿ ಶನಿವಾರ ನಡೆದ ಗುರುಭವನ ನಿರ್ಮಾಣ ಮತ್ತು ನಿರ್ವಹಣೆಯ ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ಮಾತನಾಡಿ, ‘ಜಿಲ್ಲಾ ಕೇಂದ್ರದಲ್ಲಿ ಗುರುಭವನ ಇಲ್ಲವೆಂಬ ಕೊರಗು ಶಿಕ್ಷಕ ಸಮುದಾಯವನ್ನು 45 ವರ್ಷಗಳಿಂದ ಕಾಡುತ್ತಿದೆ. ಈ ಕೊರತೆ ಗಂಭೀರವಾಗಿ ಪರಿಗಣಿಸಿದ್ದು, ಗುರುಭವನ ಕಾಮಗಾರಿಗೆ ನ.14ರಂದು ಶಂಕುಸ್ಥಾಪನೆ ನೆರವೇರಿಸಲಾಗುತ್ತದೆ’ ಎಂದು ಹೇಳಿದರು.

‘1977–78ರಲ್ಲಿ ಜಿಲ್ಲಾ ಕೇಂದ್ರದಲ್ಲಿ ಗುರುಭವನ ನಿರ್ಮಾಣ ಮಾಡಬೇಕೆಂದು ಉದ್ದೇಶಿಸಿ ಅವಿಭಜಿತ ಕೋಲಾರ ಜಿಲ್ಲಾ ಶಿಕ್ಷಕ ಸಮೂಹದ ವೇತನದಿಂದ ಒಟ್ಟು ₹ 3,202 ಸಂಗ್ರಹಿಸಿ ಸಿಂಡಿಕೇಟ್ ಬ್ಯಾಂಕ್‌ನ ಖಾತೆಯಲ್ಲಿಡಲಾಗಿತ್ತು. ಈಗ ಅದು ₹ 4.48 ಲಕ್ಷ ಇಡುಗಂಟಾಗಿದೆ. ಗುರುಭವನಕ್ಕೆ ಮೂರ್ನಾಲ್ಕು ಬಾರಿ ಗುದ್ದಲಿ ಪೂಜೆ ಆಗಿದ್ದರೂ ಕಾರಣಾಂತರರಿಂದ ನಾಲ್ಕೂವರೆ ದಶಕದಿಂದಲೂ ಭವನ ನಿರ್ಮಾಣ ಕಾರ್ಯ ಆರಂಭವಾಗಿಲ್ಲ’ ಎಂದರು.

‘ಗುರುಭವನಕ್ಕಾಗಿ ಹಳೇ ಮಾಧ್ಯಮಿಕ ಶಾಲೆ ಆವರಣದಲ್ಲಿ ಜಾಗ ಗುರುತಿಸಲಾಗಿತ್ತು. ಆ ನಂತರ ಮಾಜಿ ಸಚಿವ ವರ್ತೂರು ಪ್ರಕಾಶ್‌ ಅವರ ಅವಧಿಯಲ್ಲಿ ಆ ಜಾಗಕ್ಕೆ ನಗರಸಭೆಯಿಂದ ಖಾತೆ ಮಾಡಿಸಲಾಗಿತ್ತು. ಇದೀಗ ಗುರುಭವನ ನಿರ್ಮಾಣಕ್ಕೆ ಸರ್ಕಾರದ ಸುತ್ತೋಲೆ ಪ್ರಕಾರ 14 ಮಂದಿ ಅಧಿಕಾರಿಗಳ ಕಾರ್ಯಕಾರಿ ಸಮಿತಿ ರಚಿಸಲಾಗಿದೆ’ ಎಂದು ವಿವರಿಸಿದರು.

‘ಜಿಲ್ಲಾಧಿಕಾರಿ ನೇತೃತ್ವದ ಜನಪ್ರತಿನಿಧಿಗಳ ಸಮಿತಿ ರಚಿಸಲಾಗಿದೆ. ಗುರುಭವನ ನಿರ್ಮಾಣ ಮತ್ತು ನಿರ್ವಹಣೆಗೆ 24 ಮಂದಿಯ ಜಿಲ್ಲಾ ಮಟ್ಟದ ಸಮಿತಿ ಸಹ ರಚಿಸಲಾಗಿದೆ. ಇದರ ಜತೆಗೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಗುರುಭವನ ನಿರ್ಮಾಣ ನಿರ್ವಹಣೆ ಸಮಿತಿ ರಚಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

₹ 10 ಕೋಟಿ ವೆಚ್ಚ: ‘ಶಿಕ್ಷಕ ಸಮುದಾಯದ ಸಲಹೆ ಅಭಿಪ್ರಾಯ ಕ್ರೂಢೀಕರಿಸಿ ದೂರದೃಷ್ಟಿ ಇಟ್ಟುಕೊಂಡು ಸುಮಾರು ₹ 10 ಕೋಟಿ ವೆಚ್ಚದಲ್ಲಿ 4 ಅಂತಸ್ತುಗಳ ಗುರುಭವನ ನಿರ್ಮಿಸಲು ಉದ್ದೇಶಿಸಲಾಗಿದೆ. ಕರ್ನಾಟಕ ಶಿಕ್ಷಕರ ಕಲ್ಯಾಣ ನಿಧಿಯಿಂದ ₹ 1 ಕೋಟಿ ಅನುದಾನ ಸಿಗಲಿದೆ. ಉಳಿಕೆ ಅನುದಾನವನ್ನು ಶಿಕ್ಷಕ ಸಂಘಟನೆಗಳು, ದಾನಿಗಳು, ಅಜೀವ ಸದಸ್ಯತ್ವ, ಜನಪ್ರತಿನಿಧಿಗಳ ಅನುದಾನ ಮತ್ತು ಕೈಗಾರಿಕೆಗಳ ಸಮುದಾಯ ಸೇವಾ ನಿಧಿ ಬಳಕೆಯಿಂದ ಹೊಂದಿಸಲಾಗುತ್ತದೆ’ ಎಂದು ತಿಳಿಸಿದರು.

‘ಶಿಕ್ಷಣ ಸೌಧದ ನೆಲ ಅಂತಸ್ತಿನಲ್ಲಿ 25ಕ್ಕೂ ಹೆಚ್ಚು ಅಂಗಡಿ ಮಳಿಗೆಗಳು, 2ನೇ ಅಂತಸ್ತಿನಲ್ಲಿ ಡೈನಿಂಗ್ ಹಾಲ್, ಅಡುಗೆ ಮನೆ, 3ನೇ ಹಂತಸ್ತಿನಲ್ಲಿ ಸಭಾಂಗಣ, 4ನೇ ಹಂತಸ್ತಿನಲ್ಲಿ 10 ಅತಿಥಿ ಕೊಠಡಿಗಳನ್ನು ನಿರ್ಮಿಸಲಾಗುತ್ತದೆ. ಶಿಕ್ಷಕರಿಗಾಗಿ ಕ್ಯಾಂಟೀನ್ ಮತ್ತು ಸಹಕಾರ ಸಂಘ ಆರಂಭಿಸುವ ಉದ್ದೇಶವಿದೆ’ ಎಂದರು.

ಗುರುಭವನ ನಿರ್ಮಾಣ ಮತ್ತು ನಿರ್ವಹಣೆಗಾಗಿ ರಚನೆಯಾಗಿರುವ ಕಾರ್ಯಕಾರಿ ಸಮಿತಿ, ಜಿಲ್ಲಾ ಮತ್ತು ತಾಲ್ಲೂಕು ಸಮಿತಿಗಳ ಸರ್ವ ಸದಸ್ಯರ ಸಭೆಯನ್ನು ಅಕ್ಟೋಬರ್ ಕೊನೆಯಲ್ಲಿ ಕರೆದು ರೂಪುರೇಷೆ ಅಂತಿಮಗೊಳಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಬಿಇಒ ರಾಮಕೃಷ್ಣಪ್ಪ, ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್, ಭಾರತ ಸೇವಾದಳ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ಗಣೇಶ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಚೌಡಪ್ಪ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಪ್ಪಿಗೌಡ, ಪ್ರಧಾನ ಕಾರ್ಯದರ್ಶಿ ಎಂ.ನಾಗರಾಜ್ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.