ಸೂಲಿಕುಂಟೆ ಭಾಗಕ್ಕೂ ನೀರು

ಬಂಗಾರಪೇಟೆ: ‘ಭಾರತೀಯ ಸಮಾಜದಲ್ಲಿ ಸ್ತ್ರೀಯರಿಗೆ ವಿಶೇಷ ಸ್ಥಾನವಿದೆ. ತಾಯಂದಿರ ಆಶೀರ್ವಾದ ಇದ್ದರೆ ಅಂದುಕೊಂಡಿದ್ದನ್ನು ಸಾಧಿಸಬಹುದು’ ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಹೇಳಿದರು.
ತಾಲ್ಲೂಕಿನ ಸೂಲಿಕುಂಟೆ ಗ್ರಾಮದಲ್ಲಿ ಕಾರಹಳ್ಳಿ (ಚಿಕ್ಕ ಅಂಕಂಡಹಳ್ಳಿ) ಜಿಲ್ಲಾ ಪಂಚಾಯಿತಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ನಂದಿನಿ ಪ್ರವೀಣ್ ಹಮ್ಮಿಕೊಂಡಿದ್ದ ಮಡಿಲು ತುಂಬುವ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಕಳೆದ ಬಾರಿ ಈ ಭಾಗದಿಂದ ಜಿಲ್ಲಾ ಪಂಚಾಯಿತಿಗೆ ಆಯ್ಕೆಯಾದವರು ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ನಾನು ಚುನಾವಣೆಗೆ ಮುನ್ನ ನೀಡಿದ್ದ ಭರವಸೆಯಂತೆ ಶೇ 90ರಷ್ಟು ಕೆಲಸ ಪೂರ್ಣಗೊಳಿಸಿದ್ದೇನೆ’ ಎಂದರು.
5.5 ಮೀಟರ್ ವಿಸ್ತೀರ್ಣವಿದ್ದ ಬಂಗಾರಪೇಟೆ-ಸೂಲಿಕುಂಟೆ ರಸ್ತೆಯನ್ನು ಈಗ 8 ಮೀಟರ್‌ನಷ್ಟು ವಿಸ್ತರಿಸಲು ಪ್ರಸ್ತಾವ ಸಲ್ಲಿಸಿದ್ದು, ರಾಜ್ಯ ಹೆದ್ದಾರಿಯಾಗಿ ಪರಿವರ್ತಿಸಲಾಗುತ್ತದೆ ಎಂದರು.
ಈ ಭಾಗಕ್ಕೆ ಕೆ.ಸಿ. ವ್ಯಾಲಿ ನೀರು ಹರಿಸುವುದಾಗಿ ಹೇಳಿದಾಗ ಅನೇಕರು ವ್ಯಂಗ್ಯವಾಡಿದ್ದರು. ಈಗ ಹಂಚಾಳ ಕೆರೆಗೆ ನೀರು ಹರಿದಿರುವುದನ್ನು ಕಂಡು ಬಾಯಿ ಮುಚ್ಚಿಕೊಂಡಿದ್ದಾರೆ. ಅಂತರ್ಜಲ ಮಟ್ಟ 200 ಅಡಿಗಳಿಗೆ ಏರಿದ್ದು ಈ ಪ್ರದೇಶ ಸಮೃದ್ಧಿಯಾಗಲಿದೆ. ಮುಂದಿನ ದಿನಗಳಲ್ಲಿ ಸೂಲಿಕುಂಟೆ ಪಂಚಾಯಿತಿ ವ್ಯಾಪ್ತಿಯಲ್ಲಿ ಜಾಕ್ವೆಲ್ ನಿರ್ಮಿಸಲಾಗುವುದು. ಅಲ್ಲಿ ಮೂರನೇ ಹಂತದ ಶುದ್ಧೀಕರಣ ಘಟಕ ನಿರ್ಮಿಸಿ ಈ ಭಾಗದ ಕೆರೆಗಳಿಗೂ ನೀರು ಹರಿಸಲಾಗುತ್ತದೆ ಎಂದು
ಹೇಳಿದರು.
ಕೆ.ಸಿ ವ್ಯಾಲಿ ನೀರು ಕೇವಲ 2-3 ವರ್ಷಗಳಲ್ಲಿ ಬತ್ತಿ ಹೋಗುವಂತಹ ನೀರಲ್ಲ. ರಾಜಧಾನಿ ಬೆಂಗಳೂರು ಇರುವವರೆಗೂ ಈ ಭಾಗದ ಕೆರೆಗಳಲ್ಲಿ ನೀರು ಬರಿದಾಗುವುದಿಲ್ಲ
ಎಂದರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ. ಚಂದ್ರಾರೆಡ್ಡಿ, ಕಾರಹಳ್ಳಿ ಜಿ.ಪಂ. ಕ್ಷೇತ್ರದ ಆಕಾಂಕ್ಷಿ ನಂದಿನಿ ಪ್ರವೀಣ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣಪ್ಪ, ಉಪಾಧ್ಯಕ್ಷೆ ರೂಪಮ್ಮ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಚ್.ಕೆ. ನಾರಾಯಣಸ್ವಾಮಿ, ಚಿಕ್ಕಅಂಕಂಡಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹರೀಶ್, ಮುಖಂಡರಾದ ಕೃಷ್ಣಪ್ಪ, ನಾಗರಾಜ್, ಕಾಂಗ್ರೆಸ್ ಪ್ರಚಾರ ಸಮಿತಿಯ ತಾಲ್ಲೂಕು ಅಧ್ಯಕ್ಷ ರಘುನಾಥ್ ಹಾಜರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.