ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಸಮಸ್ಯೆ ಶೇ 75ರಷ್ಟು ಸುಧಾರಣೆ

ಗಾಂಧಿನಗರದಲ್ಲಿ ನಗರಸಭೆ ಅಧ್ಯಕ್ಷೆ ಮಹಾಲಕ್ಷ್ಮಿ ಹೇಳಿಕೆ
Last Updated 5 ಜುಲೈ 2018, 15:55 IST
ಅಕ್ಷರ ಗಾತ್ರ

ಕೋಲಾರ: ‘ನಗರದಲ್ಲಿ ನೀರಿನ ಸಮಸ್ಯೆ ಶೇ 75ರಷ್ಟು ಸುಧಾರಣೆಯಾಗಿದ್ದು, ಒಂದೂವರೆ ತಿಂಗಳಲ್ಲಿ ಸಮಸ್ಯೆಯನ್ನು ಸಂಪೂರ್ಣ ಬಗೆಹರಿಸುತ್ತೇವೆ’ ಎಂದು ನಗರಸಭೆ ಅಧ್ಯಕ್ಷೆ ಮಹಾಲಕ್ಷ್ಮಿ ಭರವಸೆ ನೀಡಿದರು.

ನಗರದ ಗಾಂಧಿನಗರ ಬಡಾವಣೆಯ ತೊಟ್ಟಿ ಬಾವಿಯಿಂದ ನೀರು ಪೂರೈಕೆ ಸೇವೆಗೆ ಗುರುವಾರ ಚಾಲನೆ ನೀಡಿ ಮಾತನಾಡಿ, ‘ತೊಟ್ಟಿ ಬಾವಿಗೆ ಪಂಪ್‌, ಮೋಟರು ಅಳವಡಿಸಬೇಕು ಎಂಬುದು ಈ ಭಾಗದ ಸದಸ್ಯರ ಒತ್ತಾಯವಾಗಿತ್ತು. ಬಾವಿಯಲ್ಲಿ ನೀರು ಲಭ್ಯವಿದ್ದ ಕಾರಣ ಪಂಪ್‌, ಮೋಟರ್‌ ಅಳವಡಿಸಲಾಗಿದೆ’ ಎಂದರು.

‘ಬಾವಿಯ ಮೋಟರ್ ಮತ್ತು ಪಂಪ್ ಒಂದೂವರೆ ವರ್ಷದ ಹಿಂದೆ ಹಾಳಾಗಿದ್ದನ್ನು ನಗರಸಭೆಯ ಹಿಂದಿನ ಆಯುಕ್ತ ಶ್ರೀಕಾಂತ್ ಅವರ ಗಮನಕ್ಕೆ ತರಲಾಗಿತ್ತು. ಅವರು ತಕ್ಷಣವೇ ಸಮಸ್ಯೆಗೆ ಸ್ಪಂದಿಸಿ ಕೆಜಿಎಫ್‌ ನಗರಸಭೆ ಸಿಬ್ಬಂದಿಯಿಂದ ಹೊಸ ಪಂಪ್‌ ಮತ್ತು ಮೋಟರ್‌ ಅಳವಡಿಕೆ ಮಾಡಿಸಿದ್ದಾರೆ’ ಎಂದು ವಿವರಿಸಿದರು.

‘ಈ ಬಾವಿಗೆ ಎರಡು ಕೊಳವೆ ಬಾವಿಗಳಿಂದ ನೀರು ಪೂರೈಸಲಾಗುತ್ತಿತ್ತು. ಆ ಕೊಳವೆ ಬಾವಿಗಳನ್ನು ಸದ್ಯದಲ್ಲೇ ದುರಸ್ತಿ ಮಾಡಿ ನೀರು ಹರಿಸಲಾಗುವುದು. ಇದರಿಂದ ಗಾಂಧಿನಗರ ಬಡಾವಣೆಯ ನೀರಿನ ಸಮಸ್ಯೆ ಪರಿಹಾರವಾಗಲಿದೆ. ಕೆಲವೆಡೆ ನೀರು ಸೋರಿಕೆಯಾಗುತ್ತಿದ್ದು, ಪೈಪ್‌ಗಳನ್ನು ದುರಸ್ತಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ನೀರಿನ ಹೆಚ್ಚಳ: ‘ಕೋಡಿಕಣ್ಣೂರು ಕೆರೆ ಅಂಗಳದ 9 ಕೊಳವೆ ಬಾವಿಗಳ ಪೈಕಿ ಮೂರನ್ನು ದುರಸ್ತಿ ಮಾಡಲಾಗಿದೆ. ಉಳಿದ ಕೊಳವೆ ಬಾವಿಗಳನ್ನು ಹಂತ ಹಂತವಾಗಿ ದುರಸ್ತಿ ಮಾಡುತ್ತೇವೆ. ಕೆರೆಗಳಿಗೆ ನೀರು ಬಂದಿರುವುದರಿಂದ ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಹೆಚ್ಚಿದೆ. ನೀರು ಲಭ್ಯವಿರುವ ಎಲ್ಲಾ ಕೊಳವೆ ಬಾವಿಗಳಿಗೆ ಪಂಪ್‌ ಮೋಟರ್‌ ಅಳವಡಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

‘ನಗರಸಭೆ ಆಯುಕ್ತ ರಾಮ್‌ಪ್ರಕಾಶ್‌ ಅವರು ಅಭಿವೃದ್ಧಿ ಕೆಲಸಗಳಿಗೆ ಸಹಕರಿಸುತ್ತಿಲ್ಲ. ಹೀಗಾಗಿ ಜಿಲ್ಲಾಧಿಕಾರಿ ಮೇಲೆ ಒತ್ತಡ ಹೇರಿ ಅವರನ್ನು ವರ್ಗಾವಣೆ ಮಾಡಿಸಲಾಗಿತ್ತು. ನಂತರ ಅವರು ವರ್ಗಾವಣೆ ಆದೇಶಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದರು. ನಿಯಮದ ಪ್ರಕಾರ ಅವರು ಜಿಲ್ಲಾಧಿಕಾರಿಯ ಅನುಮತಿ ಪಡೆದು ಕರ್ತವ್ಯಕ್ಕೆ ಹಾಜರಾಗಬೇಕಿತ್ತು. ಆದರೆ, ಜಿಲ್ಲಾಧಿಕಾರಿಯ ಗಮನಕ್ಕೆ ತರದೆ ಕೆಲಸಕ್ಕೆ ಹಾಜರಾಗಿದ್ದಾರೆ. ಈ ಸಂಗತಿ ಸದಸ್ಯರ ಅಸಮಾಧಾನಕ್ಕೆ ಕಾರಣವಾಗಿದೆ’ ಎಂದು ಹೇಳಿದರು.

₹ 14 ಕೋಟಿ ಅನುದಾನ: ‘ನಗರೋತ್ಥಾನದಲ್ಲಿ ನೀರಿನ ಸೌಲಭ್ಯಕ್ಕಾಗಿ ₹ 14 ಕೋಟಿ ಅನುದಾನವಿದೆ. ಈಗಾಗಲೇ ನಗರಸಭೆ ವತಿಯಿಂದ ಹೊಸ ಟ್ಯಾಂಕರ್‌ಗಳನ್ನು ಖರೀದಿಸಲಾಗಿದ್ದು, ನೀರಿನ ಸಮಸ್ಯೆ ಸಾಕಷ್ಟು ನಿವಾರಣೆಯಾಗಿದೆ’ ಎಂದು ನಗರಸಭೆ ಕಿರಿಯ ಎಂಜಿನಿಯರ್‌ ಪೂಜಾರಪ್ಪ ಮಾಹಿತಿ ನೀಡಿದರು.

‘ನಗರಸಭೆ ವ್ಯಾಪ್ತಿಯಲ್ಲಿ 323 ಕೊಳವೆ ಬಾವಿಗಳಿದ್ದು, ಈ ಪೈಕಿ 251 ಸುಸ್ಥಿತಿಯಲ್ಲಿವೆ. 40 ಕೊಳವೆ ಬಾವಿಗಳನ್ನು ದುರಸ್ತಿ ಮಾಡಬೇಕಿದೆ. 32 ಕೊಳವೆ ಬಾವಿಗಳಿಗೆ ಹೊಸದಾಗಿ ಪಂಪ್‌ ಮೋಟರ್ ಅಳವಡಿಸಬೇಕಿದೆ’ ಎಂದು ವಿವರಿಸಿದರು.

ನಗರಸಭಾ ಸದಸ್ಯರಾದ ನಾರಾಯಣಸ್ವಾಮಿ, ಪ್ರಸಾದ್‌ಬಾಬು, ಮೋಹನ್ ಪ್ರಸಾದ್‌ಬಾಬು, ವೆಂಕಟೇಶ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT