ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯ ಕ್ಯಾಂಪಸ್‌ಗೆ ಮಲ್ಲಪ್ಪ ವರ್ಗಾವಣೆ

ಅಂಧ ಸಹಾಯಕ ‍ಪ್ರಾಧ್ಯಾಪಕನ ನೆರವಿಗೆ ಬಂದ ಕರ್ನಾಟಕ ವಿವಿ
Last Updated 29 ಮೇ 2018, 7:39 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಿತ್ಯ 16 ಕಿ.ಮೀ. ಪ್ರಯಾಣಿಸಬೇಕಿದ್ದ ಅಂಧ ಸಹಾಯಕ ಪ್ರಾಧ್ಯಾಪಕ ಮಲ್ಲಪ್ಪ ಬಂಡಿ ಅವರ ನೆರವಿಗೆ ಬಂದಿರುವ ಕರ್ನಾಟಕ ವಿಶ್ವವಿದ್ಯಾಲಯದ ಕೆರಿಮತ್ತಿಹಳ್ಳಿ (ಹಾವೇರಿ ಜಿಲ್ಲೆ) ಸ್ನಾತಕೋತ್ತರ ಕೇಂದ್ರದಿಂದ ಧಾರವಾಡದ ಮುಖ್ಯ ಕ್ಯಾಂಪಸ್‌ಗೆ ವರ್ಗಾವಣೆ ಮಾಡಿದೆ.

ಹುಟ್ಟುತ್ತಲೇ ಅಂಧರಾಗಿದ್ದರೂ ಛಲ ಬಿಡದ ತ್ರಿವಿಕ್ರಮನಂತೆ ಹುಬ್ಬಳ್ಳಿಯ ಅಂಧರ ಶಾಲೆಯಲ್ಲಿ ಕಲಿತು, ಬಳಿಕ ಕಾಡಸಿದ್ಧೇಶ್ವರ ಕಾಲೇಜಿನಲ್ಲಿ ಚಿನ್ನದ ಪದಕದೊಂದಿಗೆ ಪದವಿ ಹಾಗೂ ಕರ್ನಾಟಕ ವಿ.ವಿ.ಯ ಡಾ. ಆರ್‌.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದಲ್ಲಿ ಚಿನ್ನದ ಪದಕಗಳೊಂದಿಗೆ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದರು. ಇದೇ ವಿ.ವಿ.ಯ ಹಾವೇರಿ ಕೇಂದ್ರಕ್ಕೆ ಸಹಾಯಕ ಪ್ರಾಧ್ಯಾಪಕರಾಗಿ ನೇಮಕಗೊಂಡಿದ್ದರು. ಆದರೆ, ಹಾವೇರಿಯಿಂದ ಕೆರಿಮತ್ತಿಹಳ್ಳಿಗೆ ನಿತ್ಯ ಪ್ರಯಾಣಿಸಬೇಕಿದ್ದರಿಂದ ಸಾಕಷ್ಟು ಸಮಸ್ಯೆಯಾಗುತ್ತಿತ್ತು. ಮಾನವೀಯ ನೆಲೆಗಟ್ಟಿನಲ್ಲಿ ಮುಖ್ಯ ಕ್ಯಾಂಪಸ್‌ಗೆ ವರ್ಗಾವಣೆ ಮಾಡುವಂತೆ ಹಲವು ಬಾರಿ ಮನವಿ ಮಾಡಿದ್ದರು. ಈ ಕುರಿತು ‘ಪ್ರಜಾವಾಣಿ’ ಕಳೆದ ಡಿಸೆಂಬರ್‌ನಲ್ಲಿ ವಿಶೇಷ ವರದಿ ಪ್ರಕಟಿಸಿತ್ತು. ವರದಿ ಗಮನಿಸಿದ ವಿಧಾನಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಅವರು ಕುಲಪತಿ ಡಾ. ಪ್ರಮೋದ ಭೀ. ಗಾಯಿ ಅವರಿಗೆ ಸುದೀರ್ಘ ಪತ್ರವೊಂದನ್ನು ಬರೆದು, ‘ಮಲ್ಲಪ್ಪ ಅವರನ್ನು ವರ್ಗಾವಣೆ ಮಾಡಬೇಕು. ಅಂಗವಿಕಲ ಸಹಾಯಕ ಪ್ರಾಧ್ಯಾಪಕನಿಗೆ ಸಹಾಯ ಮಾಡುವ ಮೂಲಕ ವಿ.ವಿ. ಮೇಲ್ಪಂಕ್ತಿ ಹಾಕಬೇಕು’ ಎಂದು ಒತ್ತಾಯಿಸಿದ್ದರು. ಇದಕ್ಕೆ ಸ್ಪಂದಿಸಿದ ಕುಲಪತಿಗಳು ಸಿಂಡಿಕೇಟ್‌ ಸದಸ್ಯರ ಗಮನಕ್ಕೆ ತಂದು ಮಲ್ಲಪ್ಪ ಅವರ ವರ್ಗಾವಣೆ ನಿರ್ಧಾರವನ್ನು ಕೈಗೊಂಡಿದ್ದರು.

ಮಾರ್ಚ್‌ 26ರಂದು ಕುಲಸಚಿವರು ವರ್ಗಾವಣೆ ಆದೇಶ ಹೊರಡಿಸಿದ್ದು, ಬರುವ ಶೈಕ್ಷಣಿಕ ವರ್ಷದಿಂದ ಡಾ. ಆರ್‌.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಳ್ಳಲಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಲ್ಲಪ್ಪ ಬಂಡಿ, ‘ಕರ್ನಾಟಕ ವಿ.ವಿ.ಯ ಧಾರವಾಡ ಕ್ಯಾಂಪಸ್‌ನಲ್ಲೇ ವಸತಿ
ಗೃಹಗಳು ಇವೆ. ಹೀಗಾಗಿ, ಹೆಚ್ಚು ಪ್ರಯಾಣಿಸುವ ಅವಶ್ಯಕತೆ ಇರುವುದಿಲ್ಲ. ನನಗಾಗುತ್ತಿರುವ ತೊಂದರೆ ಕುರಿತು ವರದಿ ಪ್ರಕಟಿಸಿದ ‘ಪ್ರಜಾವಾಣಿ’ಗೂ, ಶಿಫಾರಸು ಮಾಡಿದ ಬಸವರಾಜ ಹೊರಟ್ಟಿ ಅವರಿಗೂ, ವರ್ಗಾವಣೆ ಮಾಡಿದ ಕುಲಪತಿಗಳಿಗೂ ಋಣಿಯಾಗಿದ್ದೇನೆ. ಮುಖ್ಯ ಕ್ಯಾಂಪಸ್‌ಗೆ ಬರುವುದರಿಂದ ಹೆಚ್ಚಿನ ಅಧ್ಯಯನಕ್ಕೆ ಅವಕಾಶ ದೊರೆಯಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT