ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆಂಕಟೇಶ್‌ಗೆ ಒಲಿದ ಜಿ.ಪಂ ಅಧ್ಯಕ್ಷಗಾದಿ

ರಾಜಕೀಯ ಜಿದ್ದಾಜಿದ್ದಿಯಲ್ಲಿ ಮುನಿಯಪ್ಪ ಬಣದ ಮೇಲುಗೈ: ಫಲಿಸಿದ ವರ್ತೂರು ತಂತ್ರಗಾರಿಕೆ
Last Updated 28 ನವೆಂಬರ್ 2019, 14:59 IST
ಅಕ್ಷರ ಗಾತ್ರ

ಕೋಲಾರ: ರಾಜಕೀಯ ಜಿದ್ದಾಜಿದ್ದಿಯ ಕಣವಾಗಿದ್ದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕಾಂಗ್ರೆಸ್‌ ಸದಸ್ಯ ಸಿ.ಎಸ್‌.ವೆಂಕಟೇಶ್‌ ಗೆಲುವು ಸಾಧಿಸಿದ್ದು, ಇದರೊಂದಿಗೆ ‘ಕೈ’ ಪಾಳಯದಲ್ಲಿ ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪ ಬಣ ಮೇಲುಗೈ ಸಾಧಿಸಿದೆ.

ಜಿ.ಪಂ ನಿಕಟಪೂರ್ವ ಅಧ್ಯಕ್ಷೆ ಗೀತಮ್ಮ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷಗಾದಿಯ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಾಳಯದಲ್ಲಿ ತೀವ್ರ ಪೈಪೋಟಿ ನಡೆದಿತ್ತು.

ಕಾಂಗ್ರೆಸ್‌ನಲ್ಲಿ ಮುನಿಯಪ್ಪ ಮತ್ತು ಶ್ರೀನಿವಾಸಪುರ ಶಾಸಕ ಕೆ.ಆರ್‌.ರಮೇಶ್‌ಕುಮಾರ್‌ ಬಣದ ನಡುವೆ ನೇರ ಹಣಾಹಣಿಯಿತ್ತು. ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದ ಉಭಯ ಬಣಗಳು ಗೆಲುವಿಗಾಗಿ ತಂತ್ರ– ಪ್ರತಿತಂತ್ರ ರೂಪಿಸಿದ್ದವು. ಈ ನಡುವೆ ತಮ್ಮ ಬೆಂಬಲಿಗ ಸಿ.ಎಸ್‌.ವೆಂಕಟೇಶ್‌ ಅವರಿಗೆ ಅಧ್ಯಕ್ಷಗಾದಿಯ ಪಟ್ಟ ಕಟ್ಟಲು ತೆರೆಮರೆಯಲ್ಲೇ ಪ್ರಯತ್ನ ನಡೆಸಿದ್ದ ಮಾಜಿ ಶಾಸಕ ವರ್ತೂರು ಪ್ರಕಾಶ್‌ ಅವರ ತಂತ್ರಗಾರಿಕೆ ಕೊನೆಗೂ ಫಲಿಸಿತು.

ವರ್ತೂರು ಪ್ರಕಾಶ್‌ ಅವರು ಮುನಿಯಪ್ಪ, ಬಿಜೆಪಿ ಹಾಲಿ ಸಂಸದ ಎಸ್‌.ಮುನಿಸ್ವಾಮಿ, ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ, ಮಾಲೂರಿನ ಮಾಜಿ ಶಾಸಕ ಕೆ.ಎಸ್‌.ಮಂಜುನಾಥ್‌ಗೌಡ ಹಾಗೂ ಮುಳಬಾಗಿಲಿನ ಮಾಜಿ ಶಾಸಕ ಕೊತ್ತೂರು ಮಂಜುನಾಥ್‌ರ ವಿಶ್ವಾಸ ಗಳಿಸಿ ಒಮ್ಮತದ ಅಭ್ಯರ್ಥಿಯಾಗಿ ವೆಂಕಟೇಶ್‌ ಅವರನ್ನು ಕಣಕ್ಕಿಳಿಸಿದ್ದರಿಂದ ಗೆಲುವಿನ ಹಾದಿ ಸುಗಮವಾಯಿತು.

ಮುನಿಯಪ್ಪ ಬಣದ ಅಭ್ಯರ್ಥಿ ಎಂದೇ ಬಿಂಬಿತರಾದ ವೆಂಕಟೇಶ್‌ ವಿರುದ್ಧ ರಮೇಶ್‌ಕುಮಾರ್‌ ಬಣದಿಂದ ಅದೃಷ್ಟ ಪರೀಕ್ಷೆಗಿಳಿದ ಸದಸ್ಯ ಮ್ಯಾಕಲ ನಾರಾಯಣಸ್ವಾಮಿ ಪರಾಭವಗೊಂಡರು. ಚುನಾವಣೆಯಲ್ಲಿ ನಿರ್ಣಾಯಕವಾಗಿದ್ದ ಮಂಜುನಾಥ್‌ಗೌಡ ಬಣದ ಸದಸ್ಯರು ಹಾಗೂ ಬಿಜೆಪಿಯ 5 ಸದಸ್ಯರ ಪೈಕಿ 4 ಮಂದಿ ವೆಂಕಟೇಶ್‌ರ ಪರ ಮತ ಚಲಾಯಿಸುವ ಮೂಲಕ ಗೆಲುವಿಗೆ ಮುನ್ನುಡಿ ಬರೆದರು.

ಬೆಳಿಗ್ಗೆ ಚುನಾವಣಾ ಪ್ರಕ್ರಿಯೆ ಆರಂಭವಾದಾಗ ಕಾಂಗ್ರೆಸ್‌ನ ಮುನಿಯಪ್ಪ ಬಣದಿಂದ ವೇಮಗಲ್‌ ಕ್ಷೇತ್ರದ ಸದಸ್ಯ ವೆಂಕಟೇಶ್ ಮತ್ತು ದುಗ್ಗಸಂದ್ರ ಕ್ಷೇತ್ರದ ವಿ.ಎಸ್‌.ಅರವಿಂದ್‌ಕುಮಾರ್‌, ರಮೇಶ್‌ಕುಮಾರ್‌ ಬಣದಿಂದ ರಾಯಲ್ಪಾಡು ಕ್ಷೇತ್ರದ ಮ್ಯಾಕಲ ನಾರಾಯಣಸ್ವಾಮಿ, ಎಚ್‌.ಎನ್‌.ಪ್ರಕಾಶ್‌ ರಾಮಚಂದ್ರ ಮತ್ತು ಕಾಮಸಮುದ್ರ ಕ್ಷೇತ್ರದ ಶಾಹಿದ್‌ ಶಹಜಾದ್‌ ಉಮೇದುವಾರಿಕೆ ಸಲ್ಲಿಸಿದರು.

ಜೆಡಿಎಸ್‌ ಪಾಳಯದಿಂದ ತೊರ್ನಹಳ್ಳಿ ಕ್ಷೇತ್ರದ ಗೀತಮ್ಮ ಮತ್ತು ಸುಗಟೂರು ಕ್ಷೇತ್ರದ ಕೆ.ಎಸ್‌.ನಂಜುಂಡಪ್ಪ ನಾಮಪತ್ರ ಸಲ್ಲಿಸಿದರು. ಜಿ.ಪಂನಲ್ಲಿ ಕಡಿಮೆ ಸದಸ್ಯ ಬಲ ಹೊಂದಿರುವ ಕಮಲ ಪಾಳಯ ಉಮೇದುವಾರಿಕೆ ಸಲ್ಲಿಸುವ ಪ್ರಯತ್ನ ಮಾಡಲಿಲ್ಲ.

ನಾಮಪತ್ರ ಸಲ್ಲಿಕೆ ಬಳಿಕ ನಡೆದ ಸಂಧಾನಕ್ಕೆ ಮಣಿದ ಮುನಿಯಪ್ಪ ಬಣದ ಅರವಿಂದ್‌ಕುಮಾರ್‌, ಗೀತಮ್ಮ ಮತ್ತು ನಂಜುಂಡಪ್ಪ ಉಮೇದುವಾರಿಕೆ ವಾಪಸ್‌ ಪಡೆದು ಸ್ಪರ್ಧಾ ಕಣದಿಂದ ಹಿಂದೆ ಸರಿದರು. ರಮೇಶ್‌ಕುಮಾರ್‌ ಬಣದ ಪ್ರಕಾಶ್‌ ರಾಮಚಂದ್ರ ಮತ್ತು ಶಾಹಿದ್‌ ಶಾಹಜಾದ್‌ ನಾಮಪತ್ರ ಹಿಂಪಡೆದು ಮ್ಯಾಕಲ ನಾರಾಯಣಸ್ವಾಮಿಯವರ ಬೆನ್ನಿಗೆ ನಿಂತರು.

ಅಂತಿಮವಾಗಿ ನಡೆದ ಚುನಾವಣೆಯಲ್ಲಿ ವೆಂಕಟೇಶ್‌ ಪರ 23 ಸದಸ್ಯರು ಮತ ಚಲಾಯಿಸಿದರು. ನಾರಾಯಣಸ್ವಾಮಿ 7 ಮತ ಗಳಿಸಿ ಸೋಲೋಪ್ಪಿಕೊಂಡರು. 16 ಮತಗಳ ಅಂತರದಲ್ಲಿ ಜಯ ಗಳಿಸಿದ ವೆಂಕಟೇಶ್‌ ಗೆಲುವಿನ ನಗೆ ಬೀರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT