ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಕ್ಯಾಸಂಬಳ್ಳಿ, ಮೊದಲ ಮುಖ್ಯಮಂತ್ರಿಯ ಗ್ರಾಮ

Last Updated 14 ಏಪ್ರಿಲ್ 2013, 8:55 IST
ಅಕ್ಷರ ಗಾತ್ರ

ಬಂಗಾರಪೇಟೆ ತಾಲ್ಲೂಕಿನಲ್ಲಿ ರಾಜಕೀಯವಾಗಿ ಪ್ರಸಿದ್ಧವಾಗಿದ್ದ ಗ್ರಾಮ ಕ್ಯಾಸಂಬಳ್ಳಿ. ಸ್ವಾತಂತ್ರ್ಯ ಚಳವಳಿಯಿಂದ ಮೊದಲ್ಗೊಂಡು ಹಲವು ಸಜ್ಜನ ಮತ್ತು ಪ್ರಸಿದ್ಧ ರಾಜಕಾರಣಿಗಳನ್ನು ನೀಡಿದ ಪ್ರದೇಶ. ಕ್ಯಾಸಂಬಳ್ಳಿ ಸುತ್ತಮುತ್ತಲಿನ ಜನ ಕೃಷಿಯನ್ನೇ ನಂಬಿ ಬದುಕುತ್ತಿದ್ದರೂ, ಅವರಲ್ಲಿನ ದೇಶಭಕ್ತಿ, ಸ್ವಾಭಿಮಾನ, ರಾಜಕೀಯ ಮುತ್ಸದ್ದಿತನ ಎಂದೂ ಕುಂದಿರಲಿಲ್ಲ.

ಕ್ಯಾಸಂಬಳ್ಳಿ ಚೆಂಗಲರಾಯರೆಡ್ಡಿ ಹೆಸರು ಎಲ್ಲರಿಗೂ ಚಿರಪರಿಚಿತ. ಮೈಸೂರು ಸಂಸ್ಥಾನದ ಮೊದಲ ಮುಖ್ಯಮಂತ್ರಿಗಳಾಗಿದ್ದವರು. ಕ್ಯಾಸಂಬಳ್ಳಿ ಸಮೀಪದ ಎಂ.ವಿ.ಕೃಷ್ಣಪ್ಪ ಕೇಂದ್ರದ ಮಂತ್ರಿಗಳಾಗಿದ್ದವರು. ಹಾಲಿನ ಉದ್ಯಮವನ್ನು ಜಿಲ್ಲೆಗೆ ಪರಿಚಯಿಸಿದ ಹರಿಕಾರ.

ಕೆ.ಸಿ.ರೆಡ್ಡಿ ಎಂದೇ ಚಿರಪರಿಚಿತರಾಗಿರುವ ಚೆಂಗಲರಾಯರೆಡ್ಡಿ ಸ್ವಾತಂತ್ರ್ಯ ಚಳವಳಿ ವೇಳೆ ಬೆಂಗಳೂರನ್ನು ತಮ್ಮ ಕೇಂದ್ರ ಸ್ಥಾನ ಮಾಡಿಕೊಂಡಿದ್ದರಿಂದ ಅವರು ಹೆಚ್ಚಿಗೆ ಬೆಂಗಳೂರಿನಲ್ಲಿಯೇ ಇದ್ದರೂ, ತಮ್ಮ ಊರಿನ ನೆಚ್ಚಿನ ನಾಯಕರಿಗೆ ಹೊರಹೊಮ್ಮಿದ್ದರು.

ಹೀಗೆ ಕೆ.ಸಿ.ರೆಡ್ಡಿಯವರ ಹೆಸರಿನ ಜೊತೆಗೆ ತಳಕುಹಾಕಿಕೊಂಡಿರುವ ಕ್ಯಾಸಂಬಳ್ಳಿ ಸ್ವಾತಂತ್ರ್ಯ ಬಂದಾಗಿನಿಂದ ಅಭಿವೃದ್ಧಿ ಪಥಕ್ಕೆ ಬರಲೇ ಇಲ್ಲ. ಈಚೆಗೆ ಬಂದಿರುವ ಒಂದು ಮೊಬೈಲ್ ಟವರ್, ಗ್ರಾಮೀಣ ಬ್ಯಾಂಕ್, ಪೆಟ್ರೋಲ್ ಬಂಕ್  ಬಿಟ್ಟರೆ ಗ್ರಾಮ ಇನ್ನೂ ಹಳೇ ಗ್ರಾಮವಾಗಿಯೇ ಉಳಿದಿದೆ. ಹಲವು ದಶಕಗಳಿಂದ ಉಳಿದಿರುವ ಅದೇ ಬಸ್ ಸ್ಟಾಂಡ್, ಅದೇ ರಸ್ತೆಗಳು, ಮೂಲ ಸೌಕರ್ಯಗಳಿಲ್ಲದ ಶಾಲೆಗಳು ಗ್ರಾಮದ ಪ್ರಸ್ತುತ ಸ್ಥಿತಿಗತಿಗಳನ್ನು ವಿವರಿಸುತ್ತದೆ.

ಈಚೆಗೆ ಜೋಡಿ ರಸ್ತೆ ಮಾಡಲು ಹೊರಟ ಲೋಕೋಪಯೋಗಿ ಇಲಾಖೆ ಇದ್ದ ರಸ್ತೆಯನ್ನು ಅಗೆದು  ಅರ್ಧಕ್ಕೆ ನಿಲ್ಲಿಸಿರುವುದರಿಂದ ರಸ್ತೆ ಅಧ್ವಾನಗೊಂಡಿದೆ. ಕ್ಯಾಸಂಬಳ್ಳಿ ಗ್ರಾ.ಪಂ.ಈಚೆಗೆ ಹಾಕಿದ್ದ ಚರಂಡಿ ಕಿತ್ತು ಹಾಕಿ, ಅದೇ ಕಲ್ಲನ್ನು ಬಳಸಿ ಲೋಕೋಪಯೋಗಿ ಇಲಾಖೆ ದೊಡ್ಡ ಚರಂಡಿ ಕಟ್ಟಿತು. ಒಂದೇ ಕೆಲಸಕ್ಕೆ ಎರಡು ಇಲಾಖೆಗಳು ಲಕ್ಷಾಂತರ ರೂಪಾಯಿ ಸುರಿದವು. ಈ ಪ್ರಕರಣ ಗ್ರಾಮದಲ್ಲಿ ಸಾಕಷ್ಟು ವಿವಾದವನ್ನು ಸೃಷ್ಟಿಸಿತ್ತು.

ಗ್ರಾಮಕ್ಕೆ ಬರುತ್ತಿದ್ದಂತೆಯೇ ಕೊರಕಲು, ಹಳ್ಳಬಿದ್ದ ಮತ್ತು ಧೂಳುಮಯ ರಸ್ತೆ ದರ್ಶನವಾಗುತ್ತದೆ. ಒಂದು ವಾಹನ ಬಂದರೆ ಸಾಕು ಇಡೀ ರಸ್ತೆ ಅಕ್ಕಪಕ್ಕದ ಅಂಗಡಿಗಳು ಧೂಳಿನಿಂದ ಆವೃತ್ತವಾಗಿರುತ್ತದೆ. ರಸ್ತೆಯ ಮಧ್ಯದಲ್ಲೇ ಹಾಕಲಾಗಿರುವ ಕಲ್ಲುಗಳ ರಾಶಿಯನ್ನಾದರೂ ತೆಗೆದು ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂಬ ಇರಾದೆ ಲೋಕೋಪಯೋಗಿ ಇಲಾಖೆಗೆ ಇಲ್ಲಎಂಬುದನ್ನು ಸನ್ನಿವೇಶ ಪುಷ್ಠೀಕರಿಸುತ್ತದೆ.

ಕೃಷಿ ಉತ್ಪನ್ನಗಳನ್ನು ಬಂಗಾರಪೇಟೆ ಅಥವಾ ಕೆಜಿಎಫ್‌ಗೆ ತೆಗೆದುಕೊಂಡು ಹೋಗುವುದು ತ್ರಾಸದಾಯಕ ಮತ್ತು ಅನವಶ್ಯಕ ಖರ್ಚು ಎಂದು ಎಪಿಎಂಸಿ 2007ರಲ್ಲಿ ಹತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ರೈತರ ಸಂತೆ ಎಂಬ ಯಾರ್ಡನ್ನು ಕಟ್ಟಿತು. ಅದರ ವಿಧ್ಯುಕ್ತ ಉದ್ಘಾಟನೆಯೂ ನಡೆಯಿತು. ಆದರೆ ಇದುವರೆಗೂ ಒಂದು ಸಂತೆ ಕೂಡ ಅಲ್ಲಿ ನಡೆದಿಲ್ಲ. ಮುಂದಾಲೋಚನೆ ಇಲ್ಲದೆ ಮಾಡಿದ ಾಮಗಾರಿಯಿಂದ ಕಟ್ಟಡ ಯಾವುದಕ್ಕೂ ಪ್ರಯೋಜನ ಆಗುತ್ತಿಲ್ಲ.

ಸುಮಾರು 700 ಮನೆಗಳಿರುವ ಕ್ಯಾಸಂಬಳ್ಳಿ ಕೆಜಿಎಫ್ ವಿಧಾನಸಭಾ ಕ್ಷೇತ್ರದ ಹೃದಯಭಾಗದಲ್ಲಿದೆ. ಅಲ್ಲಿಂದ ಬೇತಮಂಗಲ ಮತ್ತು ಕೆಜಿಎಫ್ ನಗರ ಒಂದೇ ದೂರದಲ್ಲಿದೆ. ಆದರೆ ಬೇತಮಂಗಲ ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿ ಹೊಂದಿದಷ್ಟು ವೇಗವಾಗಿ ಕ್ಯಾಸಂಬಳ್ಳಿ ಅಭಿವೃದ್ಧಿ ಹೊಂದಲಿಲ್ಲ.
ರಾಜ್ಯಕ್ಕೆ ಮೊದಲ ಮುಖ್ಯಮಂತ್ರಿಯನ್ನು ಕೊಟ್ಟ ಗ್ರಾಮ ಎಂಬ ಹೆಮ್ಮೆ ಇದ್ದರೂ ಇಲ್ಲಿ ಸ್ವಚ್ಛವಾದ ರಸ್ತೆ, ಚರಂಡಿ, ಬೀದಿ ದೀಪ, ಕುಡಿಯುವ ನೀರಿನಂಥ ಮೂಲಸೌಕರ್ಯಗಳ ಕೊರತೆ ಹಾಗೇ ಉಳಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT