ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಜಿಎಫ್: ರೂಪಕಲಾ ಪರ ಹೆಚ್ಚಿದ ಲಾಬಿ

Last Updated 3 ಏಪ್ರಿಲ್ 2013, 9:09 IST
ಅಕ್ಷರ ಗಾತ್ರ

ಕೆಜಿಎಫ್: ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತೆ ತಳವೂರಬೇಕಾದರೆ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಅವರ ಮಗಳು ರೂಪಕಲಾ ಅವರಿಗೇ ಸ್ಪರ್ಧಿಸಲು ಟಿಕೆಟ್ ನೀಡಬೇಕು. ಇಲ್ಲವಾದರೆ ತಾವೂ ಸ್ಪರ್ಧಿಸುವುದಿಲ್ಲ ಎಂದು ಹೈಕಮಾಂಡ್ ಗಮನ ಸೆಳೆಯಲು ಕೆಲವು ಪ್ರಭಾವಿ ಆಕಾಂಕ್ಷಿಗಳು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೆಜಿಎಫ್ ವಿಧಾನಸಭಾ ಕ್ಷೇತ್ರದಿಂದ, ಜಿಲ್ಲೆಯಿಂದ ಮತ್ತು ರಾಜ್ಯದಿಂದ ಈ ಕ್ಷೇತ್ರಕ್ಕೆ ಏಕ ಮಾತ್ರ ಹೆಸರು ಶಿಫಾರಸ್ಸು ಮಾಡಲಾಗಿತ್ತು. ಕ್ಷೇತ್ರದ ಕಾಂಗ್ರೆಸ್ಸಿನ ವಿವಿಧ ಗುಂಪುಗಳು ಸಹ ಒಮ್ಮತವಾಗಿ ರೂಪಕಲಾ ಅವರ ಹೆಸರನ್ನು ಶಿಫಾರಸ್ಸು ಮಾಡಿದ್ದರು. ರೂಪಕಲಾ ಸಹ ತಾವು ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತ ಎಂದು ಭಾವಿಸಿ ಕಳೆದ ಒಂದು ವರ್ಷದಿಂದ ಕ್ಷೇತ್ರದಲ್ಲಿ ವ್ಯಾಪಕ ಪ್ರವಾಸ ಮಾಡಿದ್ದರು.

ತಮ್ಮ ಸ್ವಯಂಸೇವಾ ಸಂಸ್ಥೆಯಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಈ ಹಿನ್ನೆಲೆಯಲ್ಲಿಯೇ ಸಚಿವರ ಅಧೀನದಲ್ಲಿರುವ ಸಣ್ಣ, ಮಧ್ಯಮ ಕೈಗಾರಿಕೆ ಇಲಾಖೆ ವತಿಯಿಂದ ನಗರದಲ್ಲಿ ಮಿನಿ ಟೂಲ್ ರೂಂ ಸ್ಥಾಪನೆ ಮಾಡಲಾಗಿತ್ತು. ವ್ಯಾಪಕ ಪ್ರಚಾರವನ್ನೂ ಸಹ ನೀಡಲಾಗಿತ್ತು.

ರೂಪಕಲಾರವರಿಗೆ ಪ್ರತಿಸ್ಪರ್ಧಿಯೇ ಇಲ್ಲವಾದ್ದರಿಂದ ಸಹಜವಾಗಿಯೇ ಕಾರ್ಯಕರ್ತರು ಸಹ ಚುನಾವಣಾ ಪ್ರಚಾರವನ್ನು ಶುರು ಮಾಡಿಯೇ ಬಿಟ್ಟಿದ್ದರು. ಆದರೆ ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ನಡೆಯುತ್ತಿರುವ ವಿದ್ಯಾಮಾನಗಳು ಸ್ಥಳೀಯ ಕಾಂಗ್ರೆಸ್ಸಿಗರಲ್ಲಿ ಚಿಂತೆ ಹುಟ್ಟಿಸಿದೆ.

ಬೆಂಗಳೂರಿನ ಸಿ.ವಿ.ರಾಮನ್‌ನಗರ ಕ್ಷೇತ್ರದ ಆಕಾಂಕ್ಷಿಯಾಗಿದ್ದ ಕೆಜಿಎಫ್ ಮೂಲ ನಿವಾಸಿ ವಿ.ಶಂಕರ್ ಹೆಸರು ಕಾಂಗ್ರೆಸ್ ಅಭ್ಯರ್ಥಿ ಪಟ್ಟಿಯಲ್ಲಿದೆ ಎಂಬುದು ಆತಂಕಕ್ಕೆ ಕಾರಣವಾಗಿದೆ. ಅವರ ಹೆಸರನ್ನು ಸಿ.ವಿ.ರಾಮನ್ ನಗರದಿಂದ ಸೂಚಿಸಿ ಕೆ.ಎಚ್.ಮುನಿಯಪ್ಪ ಶಿಫಾರಸ್ಸು ಮಾಡಿದ್ದರು. ಶಂಕರ್ ಕೂಡ ಕೆಜಿಎಫ್‌ಗಿಂತ ಸಿ.ವಿ.ರಾಮನ್ ನಗರದಲ್ಲಿಯೇ ಸ್ಪರ್ಧಿಸಲು ಹೆಚ್ಚು ಉತ್ಸುಕರಾಗಿದ್ದರು.

ಈಗ ದೆಹಲಿಯಲ್ಲಿರುವ ಶಂಕರ್ `ತಮಗೆ ಕೆಜಿಎಫ್ ಕ್ಷೇತ್ರ ಬೇಡ. ಅದನ್ನು ಮುನಿಯಪ್ಪನವರ ಪುತ್ರಿಗೇ ನೀಡಲಿ. ಸಿ.ವಿ.ರಾಮನ್‌ನಗರ ಕ್ಷೇತ್ರದಲ್ಲಿ ತಮಗೆ ಅವಕಾಶ ನೀಡಲಿ' ಎಂದು `ಪ್ರಜಾವಾಣಿ'ಗೆ ತಿಳಿಸಿದ್ದಾರೆ.

ಸಿ.ವಿ.ರಾಮನ್‌ನಗರ ಮತ್ತು ಸುತ್ತಮುತ್ತಲಿನ ಸರ್ವಜ್ಞನಗರ, ಪುಲಕೇಶಿನಗರ, ಶಿವಾಜಿನಗರ ಮೊದಲಾದ ಕಡೆ ಪ್ರಭಾವ ಹೊಂದಿರುವ ಶಂಕರ್ ಈ ಹಿಂದೆ ಸಹ ಶಾಂತಿನಗರದಿಂದ ಕಾಂಗ್ರೆಸ್ ಟಿಕೆಟ್ ಪಡೆದು ನಂತರ ಕೊನೆ ಕ್ಷಣದಲ್ಲಿ ನಡೆದ ರಾಜಕೀಯದಿಂದ ಬೇರೊಬ್ಬರು ಸ್ಪರ್ಧಿಸುವಂತಾಗಿತ್ತು.
ಸದ್ಯ ಕಾಂಗ್ರೆಸ್ ಹೈಕಮಾಂಡಿನಲ್ಲಿ ನಡೆದಿರುವ ವಿದ್ಯಾಮಾನಗಳಿಂದ ಕೆ.ಎಚ್.ಮುನಿಯಪ್ಪನವರ ಕುಟುಂಬ ವಿಚಲಿತಗೊಂಡಿದೆ. ನವದೆಹಲಿಯಲ್ಲಿದ್ದ ರೂಪಕಲಾ ಆಪ್ತರ ಮುಂದೆ ಕಣ್ಣೀರಿಟ್ಟರು ಎಂದು ಹೇಳಲಾಗಿದೆ.

ಆದರೆ ಬಹುತೇಕ ಮುಖಂಡರು, ಈಗಲೂ ರೂಪಕಲಾ ಅವರಿಗೆ ಟಿಕೆಟ್ ಸಿಗುವುದು ಖಚಿತ. ಮುನಿಯಪ್ಪ ಏನಾದರೂ ತಂತ್ರ ಮಾಡಿ ಟಿಕೆಟ್ ಪಡೆದೇ ಪಡೆಯುತ್ತಾರೆ ಎಂದು ನಂಬಿದ್ದಾರೆ.

ಪಕ್ಷದ ನಾಯಕಿ ಸೋನಿಯಾ ಗಾಂಧಿ ವಿದೇಶ ಪ್ರವಾಸದಲ್ಲಿರುವುದರಿಂದ ಅವರು ಬಂದ ನಂತರ ಏನಾದರೂ ಬದಲಾವಣೆಗಳು ನಡೆಯಬಹುದೆಂಬ ನಿರೀಕ್ಷೆಯಲ್ಲಿ ಮುಖಂಡರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT