ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ಹೆಸರಲ್ಲಿ ಸಮಾಜ ಒಡೆಯುವ ಕೆಲಸ

Last Updated 13 ನವೆಂಬರ್ 2017, 9:07 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ’ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾತಿ ಹೆಸರಲ್ಲಿ ಸಮಾಜ ಒಡೆಯುವ ಕಾರ್ಯದಲ್ಲಿ ನಿರತವಾಗಿದ್ದು, ದುಡಿಯುವ ವರ್ಗ ನಿರ್ಲಕ್ಷಿಸಿವೆ’ ಎಂದು ರಾಜ್ಯ ಸಿಪಿಎಂ ಕಾರ್ಯದರ್ಶಿ ಮಂಡಳಿ ಸದಸ್ಯ ಗುರುಶಾಂತ್‌ ಆರೋಪಿಸಿದರು. ಪಟ್ಟಣದ ಶನಿವಾರ ಏರ್ಪಡಿಸಿದ್ದ ತಾಲ್ಲೂಕು ಸಿಪಿಎಂ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಸಿಪಿಎಂ ಕಾರ್ಯಕರ್ತರು ಸಂಘಟಿತ ಪ್ರಯತ್ನದ ಮೂಲಕ ಪಕ್ಷ ಬಲಪಡಿಸಬೇಕು. ದೊಡ್ಡ ರಾಜಕೀಯ ಶಕ್ತಿಯಾಗಿ ಬೆಳೆಸಬೇಕು. ದುಡಿಯು ವರ್ಗ ಎದುರಿಸುತ್ತಿರುವ ಸಮಸ್ಯೆಗಳ ವಿರುದ್ಧ ಹೋರಾಟ ಮಾಡಬೇಕು ಎಂದು ಹೇಳಿದರು.

ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ಸಾಮಾನ್ಯರ ಬದುಕು ದುಸ್ತರವಾಗಿದೆ. ಬಿಜೆಪಿ ಅಥವಾ ಕಾಂಗ್ರೆಸ್‌ ಸರ್ಕಾರಗಳು ಬಡವರ ಬಡತನ ನಿವಾರಣೆಗೆ ಪೂರಕವಾದ ಕಾರ್ಯಕ್ರಮ ಜಾರಿಗೆ ತಂದಿಲ್ಲ ಎಂದು ಹೇಳಿದರು.

ಸಿಪಿಎಂ ದುಡಿಯುವ ವರ್ಗದ ಹಾಗೂ ಧ್ವನಿಯಿಲ್ಲದವರ ಧ್ವನಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಹೋರಾಟದ ಮೂಲಕ ನ್ಯಾಯ ದೊರಕಿಸುವ ಪಕ್ಷ ಇದಾಗಿದೆ. ಜನ ಬೆಂಬಲ ಪಡೆದಾಗ ಪಕ್ಷದ ಶಕ್ತಿ ಹೆಚ್ಚುತ್ತದೆ. ಜನರ ವಿಶ್ವಾಸ ಗಳಿಸುವಲ್ಲಿ ಕಾರ್ಯಕರ್ತರು ಯಶಸ್ವಿಯಾಗಬೇಕು. ಬೆಂಗಳೂರಿನಲ್ಲಿ ಜ.30 ರಂದು ಸೌಹಾರ್ದತೆಗಾಗಿ ಕರ್ನಾಟಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಪಿ.ಆರ್‌.ಸೂರ್ಯ ನಾರಾಯಣ ಮಾತನಾಡಿ, ’ಸಿಪಿಎಂ ಯಾವುದೇ ಒಬ್ಬ ವ್ಯಕ್ತಿ ಅಥವಾ ಒಂದು ಜಾತಿಯಿಂದ ಅಸ್ತಿತ್ವಕ್ಕೆ ಬಂದಿಲ್ಲ. ಸ್ವಾತಂತ್ರ್ಯ ಪೂರ್ವದಿಂದಲೂ ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡುತ್ತ ಜನರ ನಡುವೆ ಜೀವಂತವಾಗಿದೆ. ಕಾರ್ಯಕರ್ತರು ಪಕ್ಷದ ಬಲವಾಗಿದ್ದಾರೆ. ಜನರ ವಿಶ್ವಾಸ ಗಳಿಸಿದಲ್ಲಿ ಅಧಿಕಾರ ಪಡೆಯುವುದು ಕಷ್ಟವಾಗುವುದಿಲ್ಲ ಎಂದು ಅವರು ಹೇಳಿದರು.

ಕೇಂದ್ರ ಸರ್ಕಾರ ಜಿಲ್ಲೆಯ ಹೆಮ್ಮೆಯಾಗಿರುವ ಬಿಇಎಂಎಲ್‌ ಹಾಗೂ ಚಿನ್ನದ ಗಣಿಯನ್ನು ಖಾಸಗಿಯವರಿಗೆ ವಹಿಸಲು ಮುಂದಾಗಿರುವುದು ಖಂಡನೀಯ. ಜಿಲ್ಲೆಯ ರಾಜಕಾರಣಿಗಳು ಹಾಗೂ ಜನ ಪ್ರತಿನಿಧಿಗಳು ಸರ್ಕಾರದ ಈ ನಿರ್ಧಾರದ ವಿರುದ್ಧ ಧ್ವನಿ ಎತ್ತುತ್ತಿಲ್ಲ. ಆದರೆ ಸಿಪಿಎಂ ಮಾತ್ರ ಸರ್ಕಾರದ ತೀರ್ಮಾನದ ವಿರುದ್ಧ ಹೋರಾಟ ಮುಂದುವರಿಸುತ್ತದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ದುಡಿಯುವ ವರ್ಗದ ಸಮಸ್ಯೆಗಳ ನಿವಾರಣೆಗೆ ಹೋರಾಡಲು, ಅಸಂಘಟಿತ ಕಾರ್ಮಿಕರಲ್ಲಿ ಆತ್ಮಸ್ಥೈರ್ಯ ತುಂಬಲು ಸಿಪಿಎಂ ಬಲಗೊಳ್ಳಬೇಕು. ಅದಕ್ಕೆ ಕಾರ್ಯಕರ್ತರು ಬೆನ್ನೆಲುಬಾಗಬೇಕು. ಭ್ರಷ್ಟಾಚಾರ ತಡೆಯಲು ಸತತ ಪ್ರಯತ್ನ ನಡೆಸಬೇಕು ಎಂದು ಹೇಳಿದರು.

ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ, ‘ಸಿಪಿಎಂ ಬಡವರ ಪರ ಹೋರಾಡುವ ಏಕೈಕ ಪಕ್ಷವಾಗಿದೆ. ಹೋರಾಟವೇ ಪಕ್ಷದ ಜೀವಾಳ. ಜನಸಾಮಾನ್ಯರ ಸಮಸ್ಯೆಗಳ ಪರಿಹಾರಕ್ಕೆ ಹೋರಾಟ ಅಗತ್ಯ’ ಎಂದರು.

ಪಕ್ಷದ ಸಂಘಟನೆ ಬಲಪಡಿಸುವುದು ಸಮ್ಮೇಳನದ ಮುಖ್ಯ ಉದ್ದೇಶ. ಕಾರ್ಯಕರ್ತರು ಹೆಚ್ಚು ಉತ್ಸಾಹದಿಂದ ಕಾರ್ಯನಿರ್ವಹಿಸಿ ಪಕ್ಷದ ಸಂಘಟನೆ ಇನ್ನಷ್ಟು ಬಲಪಡಿಸಬೇಕು ಎಂದರು. ಸಿಪಿಎಂ ಕಾರ್ಯದರ್ಶಿ ಪಾತಕೋಟ ನವೀನ್‌ ಕುಮಾರ್‌, ಮುಖಂಡರಾದ ಎನ್‌.ವೀರಪ್ಪರೆಡ್ಡಿ, ಜಿ.ಈಶ್ವರಮ್ಮ, ನೇತ್ರಾವತಿ, ಆಂಜಲಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT