ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಕೈಯಲ್ಲಿ ಭಾರತದ ಭವಿಷ್ಯ: ಸತ್ಯಾರ್ಥಿ

Last Updated 16 ಸೆಪ್ಟೆಂಬರ್ 2017, 8:51 IST
ಅಕ್ಷರ ಗಾತ್ರ

ಕೋಲಾರ: ‘ಮಕ್ಕಳಿಗೆ ರಕ್ಷಣೆ ಇಲ್ಲದೆ ದೇಶದ ರಕ್ಷಣೆ ಸಾಧ್ಯವಿಲ್ಲ. ದೇಶ ವಿವಿಧ ರಂಗಗಳಲ್ಲಿ ಅಭಿವೃದ್ಧಿ ಸಾಧಿಸುತ್ತಿರುವುದು ಹೆಮ್ಮೆಯ ಸಂಗತಿಯಾದರೂ ಮಕ್ಕಳ ಮೇಲಿನ ದೌರ್ಜನ್ಯದಿಂದ ತಲೆ ತಗ್ಗಿಸುವಂತಾಗಿದೆ’ ನೊಬೆಲ್ ಪ್ರಶಸ್ತಿ ಪುರಸ್ಕೃತ ಕೈಲಾಶ್ ಸತ್ಯಾರ್ಥಿ ವಿಷಾದಿಸಿದರು.

ಅವರು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಮಾನವ ಕಳ್ಳ ಸಾಗಾಣಿಕೆ ತಡೆಯುವ ಉದ್ದೇಶದಿಂದ ಹಮ್ಮಿಕೊಂಡಿರುವ ‘ಭಾರತ ಯಾತ್ರೆ’ಯ ಭಾಗವಾಗಿ ನಗರದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ದೇಶದಲ್ಲಿ ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಪಟ್ಟಂತೆ 15 ಸಾವಿರ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇವೆ. ಸರಾಸರಿ 100 ಮಕ್ಕಳಲ್ಲಿ 35 ಮಕ್ಕಳು ವಿವಿಧ ದೌರ್ಜನ್ಯಕ್ಕೆ ಒಳಗಾಗುತ್ತಿವೆ. ಪ್ರತಿ ಒಂದು ಗಂಟೆಯಲ್ಲಿ 2 ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗುತ್ತಿವೆ, 8 ಮಕ್ಕಳು ಕಾಣೆಯಾಗುತ್ತಿವೆ’ ಎಂದು ಕಳವಳ ವ್ಯಕ್ತಪಡಿಸಿದರು. ‘ಹತ್ತು ವರ್ಷದ ಬಾಲಕಿ ಗರ್ಭಿಣಿಯಾಗುತ್ತಾಳೆ.

ಆ ಸ್ಥಿತಿಗೆ ಆಕೆಯ ಮಾವನೇ ಕಾರಣ ಎಂಬುದು ಗೊತ್ತಾಗುತ್ತದೆ. ಮುಂಬೈನಲ್ಲಿ 13 ವರ್ಷದ ಬಾಲಕಿ ಲೈಂಗಿಕ ದೌರ್ಜನ್ಯ ಸಹಿಸಲಾರದೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಶಿಕ್ಷಕರಿಂದಲೇ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆಯುತ್ತಿರುವುದನ್ನು ದಿನನಿತ್ಯ ಕೇಳುತ್ತಿದ್ದೇವೆ. ಇಂತಹ ಘಟನೆಗಳಿಂದ ಸಮಾಜಕ್ಕೆ ಕೆಟ್ಟ ಹೆಸರು ಬರುತ್ತಿದೆ. ಜನ ಎಚ್ಚೆತ್ತುಕೊಂಡು ಇಂತಹ ಕುಕೃತ್ಯಗಳಿಗೆ ಕಡಿವಾಣ ಹಾಕಬೇಕು’ ಎಂದು ಕಿವಿಮಾತು ಹೇಳಿದರು.

ಬಾಂಧವ್ಯ ಬೆಳೆಯಬೇಕು: ‘ಮಕ್ಕಳನ್ನು ಭಯೋತ್ಪಾದನೆ ಮತ್ತು ನಕ್ಸಲ್‌ ಚಟುವಟಿಕೆಗಳಿಗೆ ಪ್ರೇರೇಪಿಸುತ್ತಿರುವುದನ್ನು ನೋಡುತ್ತಿ ದ್ದೇವೆ. ಜಮ್ಮು ಕಾಶ್ಮೀರದಲ್ಲಿ ಮಕ್ಕಳು ಭಯೋತ್ಪಾದನಾ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿರುವುದು ದುರ್ದೈವ. ಮಕ್ಕಳು ಮತ್ತು ಪೋಷಕರ ನಡುವೆ ಬಾಂಧವ್ಯ ಬೆಳೆಯಬೇಕು’ ಎಂದರು.

‘ಮಕ್ಕಳು ತಮಗಾದ ತೊಂದರೆ ಮತ್ತು ದೌರ್ಜನ್ಯದ ಬಗ್ಗೆ ಮುಕ್ತವಾಗಿ ಮಾತನಾಡುವ ವಾತಾವರಣವನ್ನು ಕುಟುಂಬದಲ್ಲಿ ನಿರ್ಮಿಸಬೇಕು. ಮಕ್ಕಳು ದೇವರ ಸ್ವಭಾವದವರು. ಅವರನ್ನು ನಿರ್ಲಕ್ಷಿಸಬಾರದು. ಅವರ ಭವಿಷ್ಯ ಉತ್ತಮವಾಗಿಸುವ ಜವಾಬ್ದಾರಿ ಪೋಷಕರದು ಮತ್ತು ಶಿಕ್ಷಕರದು, ಈ ನಿಟ್ಟಿನಲ್ಲಿ ಅತಿ ಜರೂರಾಗಿ ಚಿಂತನೆ ನಡೆಯಬೇಕು’ ಎಂದು ತಿಳಿಸಿದರು.

ಪ್ರಕ್ಷುಬ್ಧ ವಾತಾವರಣ: ‘ದೇಶ ಬಲಿಷ್ಠವಾಗಬೇಕಾದರೆ ಮಕ್ಕಳ ರಕ್ಷಣೆ ಅತಿ ಮುಖ್ಯ. ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯದಿಂದ ದೇಶದಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿದೆ. ಎಂದು ಕಳವಳ ವ್ಯಕ್ತಪಡಿಸಿದರು. ಜನ ಜಾಗೃತರಾಗಿ ಮಕ್ಕಳ ಮೇಲಿನ ದೌರ್ಜನ್ಯ ತಪ್ಪಿಸಬೇಕು ಎಂದು ಹೇಳಿದರು.

ಲೈಂಗಿಕ ದೌರ್ಜನ್ಯ, ಮಾನವ ಕಳ್ಳಸಾಗಣೆ ತಡೆಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕಿದೆ’ ಎಂದು ಜಿಲ್ಲಾ ಸತ್ರ ನ್ಯಾಯಾಧೀಶ ಗುರುರಾಜ್‌ ಜಿ.ಶಿರೋಳ್ ಸಲಹೆ ನೀಡಿದರು.
‘ಮಕ್ಕಳ ಮೇಲಿನ ದೌರ್ಜನ್ಯದಿಂದ ಅವರ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತದೆ ಎಂದು ಹೇಳಿದರು. ಜಿಲ್ಲೆಯಲ್ಲೂ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ. ಬಾಲ್ಯದಲ್ಲಿ ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳು ದೀರ್ಘ ಪರಿಣಾಮ ಬೀರಲಿದೆ ಎಂದು ಸತ್ಯಾರ್ಥಿ ಅವರು ಹೇಳಿದರು.

ಇದರಿಂದ ಮಕ್ಕಳ ಮನಸ್ಥೈರ್ಯ ಕುಸಿಯುತ್ತದೆ’ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕಚಂದ್ರ ಅಭಿಪ್ರಾಯಪಟ್ಟರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಬಿ.ಕಾವೇರಿ, ಸತ್ಯಾರ್ಥಿ ಅವರ ಪತ್ನಿ ಸುಮೇದಾ ಕೈಲಾಶ್‌, ಕಾರ್ಮಿಕ ಕಲ್ಯಾಣಾಧಿಕಾರಿ ನಿರಂಜನ್, ವಿನೋದ್‌ಕುಮಾರ್, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ (ಪ್ರಭಾರ) ಸೌಮ್ಯ, ವಕೀಲ ಧನರಾಜ್‌ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT