ಶುಕ್ರವಾರ, ಜನವರಿ 24, 2020
20 °C
ಸಂಗನಬಸವ ಶಿವಯೋಗಿ ಜಾತ್ರೋತ್ಸವ ಕಾರ್ಯಕ್ರಮ

ಧರ್ಮ ಕೂಡಿಸುವ ಸೂಜಿ: ಗಿರಿಸಾಗರ ಶ್ರೀ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಲ್ಹಾರ: ‘ಜಾತಿ ಕತ್ತರಿಸುವ ಕತ್ತರಿಯಾದರೆ, ಧರ್ಮ ಪೋಣಿಸಿ, ಕೂಡಿಸುವ ಸೂಜಿಯಂತೆ. ಹಾಗಾಗಿ ಎಲ್ಲರೂ ಮಾನವ ಧರ್ಮವನ್ನು ಪಾಲಿಸಬೇಕು’ ಎಂದು ಗಿರಿಸಾಗರದ ರುದ್ರಮುನಿ ಶಿವಾಚಾರ್ಯರು ಹೇಳಿದರು.

ತಾಲ್ಲೂಕಿನ ಮಸೂತಿ ಗ್ರಾಮದಲ್ಲಿ ಬುಧವಾರ ಜರುಗಿದ ಮೂಲ ಸಂಗನಬಸವ ಶಿವಯೋಗಿ (ಗಿಡ್ಡಯ್ಯಜ್ಜನಮಠ) ಜಾತ್ರೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಸೂತಿಯು ಮಹಾತ್ಮರು ಹಾಗೂ ಮಹಾನ್ ಶರಣರು ಜನಿಸಿದ ಪುಣ್ಯಗ್ರಾಮ ಮತ್ತು ಅವಿಮುಕ್ತ ಕ್ಷೇತ್ರ. ಸತ್ಯವನ್ನು ಅರಿಯಲು ಧರ್ಮ ಬೇಕು. ಧರ್ಮದಿಂದಲೇ ವಿಶ್ವಕ್ಕೆ ಶಾಂತಿ. ಇಂತಹ ಧರ್ಮ ಸಂದೇಶವನ್ನು ಸಾರುವ ಕೆಲಸ ಯರನಾಳ ಶ್ರೀಗಳ ನೇತೃತ್ವದ ಮಸೂತಿಯ ಗಿಡಯ್ಯಜ್ಜನಮಠ ಮಾಡುತ್ತಿದೆ. ಬಂಥನಾಳ ಶಿವಯೋಗಿಗಳಿಗೆ ಗಿರಿಸಾಗರ ಹಾಗೂ ಆಲಮಟ್ಟಿ ಪಟ್ಟಾಧ್ಯಕ್ಷರುಗಳು ಎರಡು ಕಣ್ಣುಗಳಂತಿದ್ದರು. ಜಗತ್ತಿನಲ್ಲಿ ಮಾನವ ಒಳ್ಳೆಯ ಜೀವನ ನಡೆಸಲು ತ್ರೀರತ್ನಗಳಾದ ನೀರು, ಅನ್ನ ಹಾಗೂ ಸುಭಾಷಿತ ಅವಶ್ಯಕ’ ಎಂದು ಹೇಳಿದರು.

ಯರನಾಳದ ಗುರು ಸಂಗನಬಸವ ಸ್ವಾಮೀಜಿ ಮಾತನಾಡಿ, ‘ಬಸವಣ್ಣ ಮೌಢ್ಯ ಹಾಗೂ ಕಂದಾಚಾರಗಳನ್ನು ದೂರ ಮಾಡಿ, ಜಗತ್ತಿಗೆ ಸಮಾನತೆಯ ತತ್ವವನ್ನು ಸಾರಿದವರು. ಬಸವಣ್ಣನವರ ವಚನ ಸಾಹಿತ್ಯವನ್ನು ನಾಡಿನಾದ್ಯಂತ ಪಸರಿಸಿದವರು ಮಸೂತಿ ಗ್ರಾಮದ ಬಂಥನಾಳ ಶಿವಯೋಗಿಗಳು. ವಚನ ಪಿತಾಮಹ ಡಾ.ಫ.ಗು ಹಳಕಟ್ಟಿ ಅವರು ಪರಿಷ್ಕೃತ ವಚನ ಸಾಹಿತ್ಯವನ್ನು ರಚಿಸಿದರು. ಇವರ ಕಾರ್ಯಕ್ಕೆ ಹರ್ಡೇಕರ ಮಂಜಪ್ಪ ಹಾಗೂ ಬಂಥನಾಳ ಶಿವಯೋಗಿ ಶಕ್ತಿಯಾಗಿ ನಿಂತಿದ್ದರು. ಜ್ಞಾನದ ದೀಪವನ್ನು ಹಚ್ಚಿ ಅಜ್ಞಾನವನ್ನು ದೂರ ಮಾಡಿ ಎಲ್ಲರನ್ನೂ ಸುಜ್ಞಾನದೆಡೆಗೆ ತಂದವರು ಬಂಥನಾಳದ ಸಂಗನಬಸವ ಶಿವಯೋಗಿ’ ಎಂದರು.

ಕಾರ್ಯಕ್ರಮದ ನಂತರ ಭಕ್ತರು ಯರನಾಳ ಶ್ರೀಗಳಿಗೆ ನಾಣ್ಯಗಳು ಹಾಗೂ ಸಕ್ಕರೆಯಲ್ಲಿ ತುಲಾಭಾರ ಸೇವೆ ಸಲ್ಲಿಸಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಸಿ.ಪಿ.ಪಾಟೀಲ, ಪಿಕೆಪಿಎಸ್ ಅಧ್ಯಕ್ಷ ಕೆ.ವಿ.ಕುಲಕರ್ಣಿ, ತಾಲ್ಲೂಕು ಪಂಚಾಯಿತಿ ಸದಸ್ಯ ಗುರುಸಂಗಪ್ಪ ಯರಂತೇಲಿ, ವಕೀಲ ಗೋಪಾಲ ಧನಶೆಟ್ಟಿ, ಬಿ.ಆರ್.ಪಾಟೀಲ, ಎಸ್.ಎಸ್.ಗರಸಂಗಿ, ಈರಣ್ಣ ಚನಗೊಂಡ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು