ದೇವಾಲಯಗಳ ಸಂಗಮ ಕೂಡಲಿ ಕ್ಷೇತ್ರ

7
ಶೃಂಗೇರಿ ಮಹಾಸಂಸ್ಥಾನಕ್ಕೆ ಒಳಪಟ್ಟ ಶಾರದಾಂಬೆಯ ಮೂಲ ಸ್ಥಾನ

ದೇವಾಲಯಗಳ ಸಂಗಮ ಕೂಡಲಿ ಕ್ಷೇತ್ರ

Published:
Updated:
Deccan Herald

ಹೊಳೆಹೊನ್ನೂರು: ತುಂಗಾಭದ್ರಾ ನದಿಯ ದಡದ ಮೇಲಿರುವ ಸಮೀಪದ ಕೂಡಲಿ ಗ್ರಾಮ ಐತಿಹಾಸಿಕ ಮಹತ್ವ ಹೊಂದಿದೆ. ಈ ಕ್ಷೇತ್ರಕ್ಕೂ ಮೊದಲು ತುಂಗೆ ಹಾಗೂ ಭದ್ರೆ ಎಂಬ ಎರಡು ನದಿಗಳಾಗಿ ಹರಿಯುವ ನದಿಗಳು ನಂತರದಲ್ಲಿ ತುಂಗಾಭದ್ರಾ ನದಿಯಾಗಿ ಹರಿಯುತ್ತದೆ. ಶೃಂಗೇರಿ ಶಾರದಾಂಬೆಯ ಮೂಲ ಸಂಸ್ಥಾನವಾದ ಈ ಕ್ಷೇತ್ರ ಶಂಕರಾಚಾರ್ಯರ ತಪೋ ಭೂಮಿಯಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.

ಪ್ರಾಚೀನ ಕಾಲದಲ್ಲಿ ಋಷ್ಯ ಶ್ರಮಗಳಿಂದ ತುಂಬಿದ್ದು, ಹರಿಹರಾದಿ ದೇವತೆಗಳು ಈ ಪ್ರದೇಶಕ್ಕೆ ಬಂದು ಹೋಗುತ್ತಿದ್ದರು ಎಂದು ಭವಿಷ್ಯೋತ್ತ ಪುರಾಣ ಹೇಳುತ್ತದೆ. ತುಂಗಾಭದ್ರಾನದಿಯ ಸಂಗಮದಲ್ಲಿ ಈಗ ಸಂಗಮೇಶ್ವರ ದೇವಾಲಯವಿದೆ. ಈ ದೇವಾಲಯದ ಒಳಗೆ ಒಂದು ಚಿಕ್ಕ ಕೊಳವಿದೆ. ಈ ಕೊಳದ ನೀರಿನಲ್ಲಿ ಲಿಂಗಾಕೃತಿಯ ಎರಡು ಕಲ್ಲುಗಳಿವೆ. ಇವೇ ಹರಿಹರರ ಪಾದ ಚಿಹ್ನೆಗಳು. ಈ ದೇವಾಲಯವನ್ನು ಹರಿಹರೇಶ್ವರ ದೇವಾಲಯ ಎಂದೂ ಕರೆಯುತ್ತಾರೆ.

ಈ ದೇವಾಲಯ ಸ್ವಲ್ಪ ದೂರದಲ್ಲಿ ಭದ್ರಾನದಿಯ ಹರಿವು ಇರುವಲ್ಲಿ ಕರಿಯ ಬಂಡೆಗಳ ಸಮೂಹವಿದೆ. ಇದನ್ನು ಗೌರಿ ಬಂಡೆ ಅಥವಾ ಗೌರಿಕಲ್ಲು ಎಂದು ಕರೆಯುತ್ತಾರೆ. ಈ ಗೌರಿ ಬಂಡೆಯಲ್ಲಿ ಸ್ನಾನ ಮಾಡಿದರೆ ಪುಣ್ಯ ಸಿಗುತ್ತದೆ ಎಂಬ ನಂಬಿಕೆಯಿದೆ. ಈ ಗೌರಿ ಬಂಡೆಯನ್ನು ಬೇಸಿಗೆ ಕಾಲದಲ್ಲಿ ಮಾತ್ರ ನೋಡಬಹುದು. ಮಳೆಗಾಲದಲ್ಲಿ ಸಾಧ್ಯವಿಲ್ಲ. ಗೌರಿ ಬಂಡೆಯ ವಿವಿಧ ಸ್ಥಳಗಳನ್ನು ತೀರ್ಥಗಳ ಹೆಸರಿನಿಂದ ಕರೆಯುತ್ತಾರೆ. ಅವು ಪಿಶಾಚ ವಿಮೋಚನಾ ತೀರ್ಥ, ಶಕ್ತಿ, ಶಂಖ, ವೈನಾಯಕ, ಪಾವಕ ತೀರ್ಥ, ನರಸಿಂಹ ತೀರ್ಥ ಹಾಗೂ ಸರಸ್ವತಿ ತೀರ್ಥ ಎಂದು ಕೂಡಲಿ ರಮೇಶ ಹೇಳುತ್ತಾರೆ.

ಆರ್ಯ ಅಕ್ಷೋಭ್ಯತೀರ್ಥ ಸಂಸ್ಥಾನ: ಮದಕ್ಷೋಭ್ಯ ತೀರ್ಥರು ಶ್ರೀ ಕೂಡಲಿ ವೈಶಿಷ್ಟವನ್ನು ತಿಳಿದು ಇಲ್ಲಿಗೆ ಬರುತ್ತಾರೆ. ಆ ವೇಳೆಗಾಗಲೇ ಅವರು ವೃದ್ಧರಾಗಿದ್ದರಿಂದ ಅವರ ಶಿಷ್ಯರಾಗಿದ್ದ ಕೂಡಲಿಯ ಕೇಶವಾಚಾರ್ಯ ಎಂಬುವರಿಗೆ ದೀಕ್ಷೆಯನ್ನು ಕೊಟ್ಟು ಶ್ರೀ ತ್ರೈಲೋಕ್ಯ ಭೂಷಣ ತೀರ್ಥರು ಎಂಬ ದೀಕ್ಷಾನಾಮವನ್ನು ಕೊಡುತ್ತಾರೆ. ಅನಂತರ ಅವರು ಕೂಡಲಿಯಲ್ಲಿ ತಮ್ಮ ಹೆಸರಿನಲ್ಲಿ ಒಂದು ಪೀಠವನ್ನು ಕ್ರಿ.ಶ. 1936 ಸ್ಥಾಪಿಸಿ ಶ್ರೀ ಅಕ್ಷೋಭ್ಯತೀರ್ಥ ಸಂಸ್ಥಾನ ಎಂಬ ಹೆಸರಿಟ್ಟು, ತ್ರೈಲೋಕ್ಯ ಭೋಷಣ ತೀರ್ಥರನ್ನು ಪೀಠಾಧಿಪತಿಗಳನ್ನಾಗಿ ಮಾಡುತ್ತಾರೆ. ಅಲ್ಲಿಂದ ಶ್ರೀಪೀಠದ ಪರಂಪರೆಯು ಮುಂದುವರಿಯುತ್ತಾ ಬಂದಿದ್ದು, ರಘುವಿಜಯ ತೀರ್ಥರು 31ನೇ ಪೀಠಾಧಿಪತಿಯಾಗಿದ್ದಾರೆ.

ಕೂಡಲಿ-ಶೃಂಗೇರಿ ಮಹಾಸಂಸ್ಥಾನ:

ಈ ಪೀಠವು ಕ್ರಿ.ಶ. 1576ರಲ್ಲಿ ಶ್ರೀ ದಕ್ಷಿಣಾಮ್ನಾಯ ಜಗದ್ಗುರು ಪೀಠವನ್ನು ಸ್ಥಾಪಿಸಿ, ಶ್ರೀ ಕೂಡಲಿ-ಶೃಂಗೇರಿ ಮಹಾಸಂಸ್ಥಾನವನ್ನು ನೆಲೆಗೊಳಿಸಿ, ನರಸಿಂಹ ಭಾರತಿ ಸ್ವಾಮೀಜಿ ಪ್ರಥಮ ಪೀಠಾಧಿಪತಿಗಳಾದರು. ಅಂದಿನಿಂದ ಇಂದಿನವರೆಗೂ ಮುಂದುವರಿಯುತ್ತಾ ಬಂದಿದ್ದು, 24ನೇ ಪೀಠಾಧಿಪತಿ ಸಚ್ಚಿದಾನಂದ ವಾಲುಕೇಶ್ವರ ಭಾರತಿ ಸ್ವಾಮೀಜಿ ಹಿರಿಯ ಪೀಠಾಧಿಪತಿ ಹಾಗೂ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಸ್ವಾಮೀಜಿ 25ನೇ ಕಿರಿಯ ಪೀಠಾಧಿಪತಿಯಾಗಿದ್ದಾರೆ.

ಈ ಪೀಠಗಳಿಗೆ ಸಂಬಂಧಿಸಿದಂತೆ ಅನೇಕ ದೇವಾಲಯಗಳಿವೆ. ರಾಮೇಶ್ವರ ದೇವಾಲಯ, ರಾಮಲಿಂಗೇಶ್ವರ ದೇವಾಲಯ, ವಿದ್ಯಾಶಂಕರ ದೇವಾಲಯ, ಚಂದ್ರಮೌಳೇಶ್ವರ ದೇವಾಲಯ, ಕಾಶಿ ವಿಶ್ವೇಶ್ವರ ದೇವಾಲಯ, ಭವಾನಿ ಶಂಕರ ದೇವಾಲಯ, ಮಾತೃ ಭೂತೇಶ್ವರ ದೇವಾಲಯ, ರಾಜರಾಮೇಶ್ವರ ದೇವಾಲಯ, ಕಿವುಡು ವೆಂಕಣ್ಣೇಶ್ವರ ದೇವಾಲಯ, ಬ್ರಹ್ಮೇಶ್ವರ ದೇವಾಲಯ, ಸಂಗಮೇಶ್ವರ ದೇವಾಲಯ, ಆದಿ ಭೈರವೇಶ್ವರ ದೇವಾಲಯ, ಚಿಂತಾಮಣಿ ನರಸಿಂಹ ದೇವಾಲಯ ಹಾಗೂ ಶ್ರೀ ಶಾರದಾಂಬ ದೇವಾಲಯಗಳಿವೆ. ಅಲ್ಲದೇ ಇಲ್ಲಿ ಎರಡು ಗೋಶಾಲೆಗಳಿದ್ದು, ಸುಮಾರು 100ಕ್ಕೂ ಹೆಚ್ಚು ಗೋವುಗಳನ್ನು ಸಾಕಲಾಗುತ್ತಿದೆ.

ಶಾರದಾಂಬ ದೇವಾಲಯ:

ಸುಮಾರು 8ನೇ ಶತಮಾನದಲ್ಲಿ ಶಂಕರಾಚಾರ್ಯರು ಶೃಂಗೇರಿಗೆ ಹೋಗುವ ಮಾರ್ಗದಲ್ಲಿ ಕೂಡಲಿ ಕ್ಷೇತ್ರಕ್ಕೆ ಬಂದು ಇಲ್ಲಿ ಶಾರದೆಯನ್ನು ಶ್ರೀಚಕ್ರದಲ್ಲಿ ಸ್ಥಾಪಿಸಿ, ಪೂಜೆಗೆ ವ್ಯವಸ್ಥೆ ಮಾಡಿ ಶೃಂಗೇರಿ ಹೋದರು ಎಂಬುದು ಪ್ರತೀತಿ.

ಹೀಗಾಗಿ ಈ ದೇವಾಲಯವು ಶೃಂಗೇರಿ ದೇವಾಲಯದ ಮೂಲ ಸಂಸ್ಥಾನವಾಗಿದ್ದು, ಈ ದೇವಾಲಯದಲ್ಲಿ ನಿಂತಿರುವ ಶಾರದಾಂಬೆ ಮೂರ್ತಿಯಿದೆ. ಇಲ್ಲಿ ನಡೆಯುವ ಅಕ್ಷರಾಭ್ಯಾಸ ಕಾರ್ಯಕ್ರಮಕ್ಕೆ ವಿವಿಧೆಡೆಯಿಂದ ಭಕ್ತರು ಬರುತ್ತಾರೆ.

ನೂತನ ಕಟ್ಟಡ:

ಶಾರದಾಂಬ ದೇವಾಲಯದ ನೂತನ ಕಟ್ಟಡವನ್ನು ನಿರ್ಮಿಸಲಾಗುತ್ತಿದ್ದು, ಕಾಮಗಾರಿಯೂ ಪೂರ್ಣಗೊಳ್ಳುವ ಹಂತದಲ್ಲಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !