ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಶೋಚನಿಯ ಸ್ಥಿತಿಯಲ್ಲಿ ಅಂಗನವಾಡಿಗಳು’

ಜಿಲ್ಲೆಯ ವಿವಿಧ ಕೇಂದ್ರಗಳಿಗೆ ನ್ಯಾಯಾಧೀಶರ ಭೇಟಿ, ಸಮಗ್ರ ವರದಿ ಸಲ್ಲಿಕೆ
Published : 10 ಆಗಸ್ಟ್ 2024, 14:02 IST
Last Updated : 10 ಆಗಸ್ಟ್ 2024, 14:02 IST
ಫಾಲೋ ಮಾಡಿ
Comments

ಕೊಪ್ಪಳ: ’ಜಿಲ್ಲೆಯ ಹಲವು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದ್ದು, ಸಾಕಷ್ಟು ಸಮಸ್ಯೆಗಳು ಕಂಡುಬಂದಿವೆ. ಅವುಗಳೆಲ್ಲವುಗಳ ಪಟ್ಟಿಮಾಡಿ ವರದಿ ತಯಾರಿಸಲಾಗಿದೆ. ಜಿಲ್ಲೆಯಲ್ಲಿ ಅಂಗನವಾಡಿ ಕೇಂದ್ರಗಳು ಶೋಚನೀಯ ಸ್ಥಿತಿಯಲ್ಲಿವೆ’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಚಂದ್ರಶೇಖರ ಸಿ. ಹೇಳಿದರು.

ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಬಹಳಷ್ಟು ಅಂಗನವಾಡಿಗಳಲ್ಲಿ ಶುಚಿತ್ವ ಕಾಯ್ದುಕೊಂಡಿರಲಿಲ್ಲ. ಮಕ್ಕಳಿಗೆ ಯಾವ ದಿನ ಯಾವ ಆಹಾರ ನೀಡಬೇಕು ಎನ್ನುವ ಫಲಕ ಇರಲಿಲ್ಲ. ಬಹಳಷ್ಟು ಹಾಜರಾತಿ ಪುಸ್ತಕದಲ್ಲಿ ಕಾಣಿಸಿದ್ದ ಸಂಖ್ಯೆಯಷ್ಟು ಮಕ್ಕಳು ಇರಲಿಲ್ಲ. ಮಕ್ಕಳಿಗೆ ವಿದ್ಯಾಭ್ಯಾಸ ನೀಡಿದ ಕುರಿತು ಮತ್ತು ನಡೆಸಿದ ಚಟುವಟಿಕೆಗಳ ಬಗ್ಗೆ ಮಾಹಿತಿ ಇರಲಿಲ್ಲ’ ಎಂದರು. ಒಟ್ಟು 53 ಕೇಂದ್ರಗಳಿಗೆ ಭೇಟಿ ನೀಡಿದ್ದಾರೆ.

‘ಬಹಳಷ್ಟು ಕೇಂದ್ರಗಳಲ್ಲಿ ಶೌಚಾಲಯ ಶುಚಿತ್ವದಿಂದ ಕೂಡಿರಲಿಲ್ಲ, ಇನ್ನೂ ಕೆಲವೆಡೆ ನೀರಿದ್ದರೂ ಶೌಚಾಲಯಕ್ಕೆ ಸಂಪರ್ಕ ಕಲ್ಪಿಸಿರಲಿಲ್ಲ. ಬಹುತೇಕ ಅಂಗನವಾಡಿಗಳಲ್ಲಿ ಶುದ್ಧ ಕುಡಿಯುವ ನೀರಿನ ಕೊರತೆ, ಹೊಟ್ಟು ಮತ್ತು ಹಿಟ್ಟು ಮಿಶ್ರಿತ ರವೆ ಇತ್ತು. ಅದರಲ್ಲಿ ನುಸಿ ಇತ್ತು. ಆಟಿಕೆ ಸಾಮಗ್ರಿಗಳು ಮಕ್ಕಳ ಕೈಗೆ ಸಿಗುವಂತೆ ಇರಲಿಲ್ಲ, ಕೆಲವೆಡೆ ದೂಳು ಅಂಟಿಕೊಂಡಿತ್ತು’ ಎಂದು ವಿವರಿಸಿದರು.

‘ಅಂಗನವಾಡಿ ಕೇಂದ್ರಗಳು ಬೆಳಿಗ್ಗೆ 9.30ರಿಂದ ಸಂಜೆ 4ರ ತನಕ ತೆರೆದಿರಬೇಕು ಎನ್ನುವ ನಿಯಮವಿದ್ದರೂ ಮಧ್ಯಾಹ್ನದ ಹೊತ್ತಿಗೆ ಮುಚ್ಚಲಾಗುತ್ತಿದೆ. ಬೆಳಿಗ್ಗೆ ಮತ್ತು ಮಧ್ಯಾಹ್ನ ಎರಡು ಬಾರಿ ಆಹಾರ ನೀಡಲಾಗುತ್ತಿಲ್ಲ. ಕೆಲವು ಕೇಂದ್ರಗಳಿಗೆ ಆವರಣ ಗೋಡೆ ಇಲ್ಲ. ಕೊಪ್ಪಳದ ಕುವೆಂಪು ನಗರ, ಬಸವನಗರ–1 ಮತ್ತು ಕಿಡದಾಳದ ಕೇಂದ್ರಗಳು ಮಳೆ ಬಂದರೆ ಸೋರುತ್ತವೆ. ಕೇಂದ್ರದಲ್ಲಿ ಮಕ್ಕಳು ಮತ್ತು ಬಾಣಂತಿಯರು ಸರಿಯಾಗಿ ಆಹಾರ ಪಡೆಯುತ್ತಿಲ್ಲ’ ಎಂದು ಮಾಹಿತಿ ನೀಡಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮಲಕಾರಿ ರಾಮಪ್ಪ ಒಡೆಯರ್, ಮಹಾಂತೇಶ ಪಾಲ್ಗೊಂಡಿದ್ದರು.

ಪೆನ್ಸಿಲ್‌ನಿಂದ ಮಾಹಿತಿ ದಾಖಲು

ಅಂಗನವಾಡಿ ಕೇಂದ್ರಗಳಲ್ಲಿ ವಿವಿಧ ದಾಖಲೆಗಳ ನಿರ್ವಹಣೆ ಹಾಗೂ ಮಾಹಿತಿ ದಾಖಲು ಮಾಡುವ ಪ್ರಕ್ರಿಯೆಯನ್ನು ಅಲ್ಲಿನ ಸಿಬ್ಬಂದಿ ಮೊದಲು ಪೆನ್ಸಿಲ್‌ನಿಂದ ಮಾಡುತ್ತಿದ್ದು ಬಳಿಕ ಪೆನ್‌ನಿಂದ ಬರೆಯುತ್ತಿದ್ದಾರೆ. ಹೀಗೆ ಮಾಡುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳೇ ಹೇಳಿದ್ದಾರೆ ಎನ್ನುವ ಮಾಹಿತಿಯೂ ನ್ಯಾಯಾಧೀಶರು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದ್ದಾಗ ಬಹಿರಂಗವಾಗಿದೆ.

ಪ್ರಾಧಿಕಾರಕ್ಕೆ ವರದಿ

ನಿವೃತ್ತ ನ್ಯಾಯಮೂರ್ತಿಯೂ ಆದ ಅಪೌಷ್ಠಿಕತೆ ನಿವಾರಣಾ ರಾಜ್ಯ ಸಲಹಾ ಸಮಿತಿ ಅಧ್ಯಕ್ಷ  ವೇಣುಗೋಪಾಲಗೌಡ ಬೆಂಗಳೂರಿನಲ್ಲಿ ಹಲವು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದಾಗ ಕಂಡುಬಂದ ನ್ಯೂನ್ಯತೆಗಳ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಇದರ ಬಗ್ಗೆ ಹೈಕೋರ್ಟ್‌ಗೆ ವರದಿ ಸಲ್ಲಿಸಬೇಕಾಗಿರುವ ಕಾರಣ ಜಿಲ್ಲೆಯ ಅಂಗನವಾಡಿ ಕೇಂದ್ರ ಪರಿಶೀಲಿಸಿ ಕುಂದುಕೊರತೆ ಪರಿಶೀಲಿಸುವಂತೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವೂ ನ್ಯಾಯಾಧೀಶರಿಗೆ ತಿಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT