ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಂಕಿತರಿಗೆ ಆಯುಷ್ ಕಿಟ್

ಕೋವಿಡ್‌ ಕೇರ್‌ ಸೆಂಟರ್‌ನಲ್ಲಿರುವವರಿಗೆ ಶೀಘ್ರ ವಿತರಣೆ
Last Updated 20 ಮೇ 2021, 4:03 IST
ಅಕ್ಷರ ಗಾತ್ರ

ಕೊಪ್ಪಳ: ಕೊರೊನಾ ಸೋಂಕಿತರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ ಆಯುಷ್‌ ಇಲಾಖೆ ವತಿಯಿಂದ, ಆಸ್ಪತ್ರೆಗೆ ದಾಖಲಾಗಿರುವ ರೋಗಿಗಳಿಗೆ ಕಿಟ್‌ ವಿತರಣೆಗೆ ನಿರ್ಧರಿಸಲಾಗಿದೆ.

ಯಾವುದೇ ಅಡ್ಡ ಪರಿಣಾಮ ಇಲ್ಲದೆ, ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧಗಳ ಕಿಟ್‌ ಇದಾಗಿದ್ದು, ಆಯುರ್ವೇದ, ಯೋಗ ಮತ್ತು ನ್ಯಾಚರೋಪತಿ, ಯುನಾನಿ ಸಿದ್ಧ ಮತ್ತು ಹೋಮಿಯೋಪತಿ (ಆಯುಷ್‌) ಇಲಾಖೆಯಿಂದ ಸಂಬಂಧಿಸಿದ ಜಿಲ್ಲೆಗಳಿಗೆ ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ವಿತರಿಸಲಾಗಿದೆ.

ಕೋವಿಡ್‌ ಮೊದಲನೇ ಅಲೆಯ ಸಂದರ್ಭದಲ್ಲಿ ದಾವಣಗೇರಿ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಾಗಿದೆ. ಈ ಔಷಧಿ ಪರಿಣಾಮ ಮತ್ತು ಪ್ರಭಾವಗಳ ಅಧ್ಯಯನ ನಡೆಸಿ ಕಿಟ್‌ ನೀಡಲಾಗುತ್ತದೆ.

ಕಿಟ್‌ನಲ್ಲಿ ಏನಿರಲಿದೆ?: ಗಂಭೀರ ಕೋವಿಡ್‌ ಸೋಂಕಿತರು, ಅಲ್ಪಪ್ರಮಾಣದ ಸೋಂಕು, ಸೋಂಕಿನ ಲಕ್ಷಣ ಉಳ್ಳವರಿಗೆ 12 ತರಹದ ಔಷಧಿ, ಮಾತ್ರೆ, ಚೂರ್ಣಗಳ ಪೊಟ್ಟಣ ಇದಾಗಿದೆ. ಜ್ವರ, ತಲೆನೋವು, ಕಫ, ಕುತ್ತಿಗೆ ನೋವು, ನರದ ಸೆಳೆತ, ರುಚಿ ಗುರುತಿಸುವ ಕೊರತೆ, ಆಗ್ರಾಣ ಶಕ್ತಿ ಕೊರತೆಗೆ ಶಮ್‌ಶಾನ್‌ ವಟಿ, ಅಶ್ವಗಂಧ ಮಾತ್ರೆ, ಆಯುಷ್‌-64 ಹೆಸರಿನ ಔಷಧಿ, ಅಶ್ವಗಂಧ ಶುಂಠಿ, ಪಿಪ್ಪಲಿ ಚೂರ್ಣ, ಸುದರ್ಶನ ಗಾನ ವಟಿ, ನಗರಾದಿ ಕಷಾಯ, ಸೀತಾಫಲ ಚೂರ್ಣ, ಜೇನು ತುಪ್ಪ ಬೆರೆಸಿದ ಚೂರ್ಣ ಸೇರಿದಂತೆ ವಿವಿಧ ಔಷಧಿಗಳು ಕಿಟ್‌ನಲ್ಲಿ ಇರಲಿವೆ.

ರಾಜ್ಯದ 30 ಜಿಲ್ಲೆಗಳಲ್ಲಿ ಇರುವ ಆಯುಷ್‌ ಇಲಾಖೆ ಮತ್ತು ಸರ್ಕಾರಿ ಆರ್ಯುವೇದ ಕಾಲೇಜುಗಳ ಮೂಲಕ ಈ ಕಿಟ್‌ ಅನ್ನು ವಿತರಣೆ ಮಾಡಲಾಗುತ್ತದೆ. ಮಾತ್ರೆ, ಚೂರ್ಣ, ಪೌಡರ್‌, ಲಾವಣದ ಮಾದರಿಗಳಲ್ಲಿ ಲಭ್ಯವಿದೆ. ರೋಗಿಗಳು ಸ್ವಚ್ಛವಾದ ವಾತಾವರಣ ತುಳಸಿ, ಅಜವಾನ್‌, ಕರ್ಪೂರದ ಮಿಶ್ರಣವನ್ನು ಬಿಸಿ ನೀರಿನಲ್ಲಿ ಚಿಟಿಕೆ ಪ್ರಮಾಣದಲ್ಲಿ ಹೊಗೆಯಾಡುವಂತೆ ಕುದಿಸಿ ಸೇವಿಸಿದರೆ ತಕ್ಷಣಕ್ಕೆ ಉಪಶಮನವಾಗುತ್ತದೆ.

ಮಾರ್ಗಸೂಚಿ:ಔಷಧಗಳನ್ನು ನಿಯಮಿತವಾಗಿ ತೆಗೆದುಕೊಳ್ಳುವವರು ತಜ್ಞ ವೈದ್ಯರನ್ನು ಸಂಪರ್ಕಿಸಿ ಕಿಟ್‌ಗಳಲ್ಲಿಯ ಸಾಮಗ್ರಿಗಳನ್ನು ಬಳಕೆ ಮಾಡಿಕೊಳ್ಳಬಹುದು. ಸಸ್ಯಜನ್ಯ ಮೂಲಿಕೆಗಳಾದ ಬಳ್ಳೊಳ್ಳಿ, ಶುಂಠಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಬಹುದು. ಚಿಟಿಕೆ ಉಪ್ಪಿನೊಂದಿಗೆ ನಿಯಮಿತವಾಗಿ ಬಿಸಿ ನೀರಿನೊಂದಿಗೆ ಸೇವಿಸಿದರೆ ಕಫ, ಶ್ವಾಸಕೋಶ ಸೋಂಕು, ಉಸಿರಾಟದಲ್ಲಿನ ತೊಂದರೆ, ಆಯಾಸ, ತಲೆ ನೋವು ನಿವಾರಿಸುವ ಶಕ್ತಿ ಈ ಔಷಧಗಳಿಗೆ ಇದೆ.

‘ಕೇಂದ್ರ ಸರ್ಕಾರ ಆಯುರ್ವೇದಕ್ಕೆ ಹೆಚ್ಚಿನ ಮಹತ್ವ ನೀಡಿದೆ. ಕೊರೊನಾದ ಸಂಕಷ್ಟದಲ್ಲಿ ಆಯುಷ್ ಕಿಟ್‌ಗಳು ರೋಗ ಶಮನಕ್ಕೆ ಹೆಚ್ಚಿನ ಸಹಾಯ ಮಾಡುತ್ತಿವೆ’ ಎನ್ನುತ್ತಾರೆ ಹಿರಿಯ ಆರ್ಯುವೇದ ತಜ್ಞ ಡಾ.ಸಾಂಬಯ್ಯ.

‘ಶೀಘ್ರದಲ್ಲಿಯೇ ಕೋವಿಡ್‌ ಕೇರ್‌ ಸೆಂಟರ್‌ಗಳಿಗೆ ದಾಖಲಾಗಿರುವ ರೋಗಿಗಳಿಗೆ ಈ ಕಿಟ್‌ ಅನ್ನು ತಲುಪಿಸುವ ವ್ಯವಸ್ಥೆ ಮಾಡಲಾಗಿದ್ದು, ದಾಸ್ತಾನು ಬಂದ ನಂತರ ಕಾರ್ಯ ಆರಂಭಿಸುವುದಾಗಿ’ ಜಿಲ್ಲಾ ಆಯುಷ್ಯ ಇಲಾಖೆ ವೈದ್ಯಾಧಿಕಾರಿಗಳು
ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT