ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ಯಾಗ, ಬಲಿದಾನದ ಪ್ರತೀಕ ಬಕ್ರೀದ್

ಗಂಗಾವತಿ: ಸರಳ ಆಚರಣೆ, ರಸ್ತೆಗಳಲ್ಲಿಯೇ ಹಬ್ಬದ ಶುಭಾಶಯ ವಿನಿಮಯ
Last Updated 21 ಜುಲೈ 2021, 13:06 IST
ಅಕ್ಷರ ಗಾತ್ರ

ಗಂಗಾವತಿ: ಇಸ್ಲಾಂ ಧರ್ಮೀಯರ ತ್ಯಾಗ–ಬಲಿದಾನದ ಸಂಕೇತವಾಗಿರುವ ‘ಬಕ್ರೀದ್’ ಅನ್ನು ತಾಲ್ಲೂಕಿನಲ್ಲಿ‌ ಬುಧವಾರ ಸರಳವಾಗಿ ಆಚರಿಸಲಾಯಿತು.

ಕೋವಿಡ್ ಮಾರ್ಗಸೂಚಿ ಪಾಲಿಸುವ ಮೂಲಕ ಇಸ್ಲಾಂ ಸಮುದಾಯದವರು ಹಬ್ಬ ಆಚರಿಸಿದರು.

ಜನ ದಟ್ಟಣೆ ತಪ್ಪಿಸಲು ತಾಲ್ಲೂಕಿನ ಎಲ್ಲ ಮಸೀದಿಗಳಲ್ಲೂ ಬೆಳಿಗ್ಗೆ 5 ಮತ್ತು 7 ಗಂಟೆಗೆ ಪ್ರತ್ಯೇಕವಾಗಿ ಎರಡು ಬಾರಿ ಪ್ರಾರ್ಥನೆಗೆ ಅವಕಾಶ ಕಲ್ಪಿಸಲಾಗಿತ್ತು.

ಅನುಮತಿ ನೀಡದ ಕಾರಣ ಹಿರಿಯ ನಾಗರಿಕರು ಹಾಗೂ ಮಕ್ಕಳು ಮಸೀದಿಗಳಿಗೆ ಬರಲಿಲ್ಲ. ಮನೆಗಳಲ್ಲೇ ಪ್ರಾರ್ಥನೆ ಸಲ್ಲಿಸಿದರು. ಮಸೀದಿಯೊಳಗೆ ಪರಸ್ಪರ ದೂರದಿಂದಲೇ ಶುಭಾಶಯ ವಿನಿಮಯ ಮಾಡಿಕೊಳ್ಳಲಾಯಿತು.

ಹಿಂದಿನ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಬಕ್ರೀದ್ ಹಬ್ಬ ಮುಸ್ಲಿಮರಿಗೆ ಸ್ವಲ್ಪ ಮೆರಗು ತಂದಿತ್ತು. ಆದರೆ ಈದ್ಗಾ ಮೈದಾನಗಳಲ್ಲಿ ಪ್ರಾರ್ಥನೆಗೆ ಅವಕಾಶ ಇರಲಿಲ್ಲ.

‘ಹಲವರು ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಹಬ್ಬ ಸರಳವಾಗಿ ಆಚರಿಸಬೇಕು’ ಎಂದು ಮಸೀದಿಯ ಧರ್ಮ ಗುರುಗಳು ಸೂಚನೆ ನೀಡಿದ್ದರು ಎಂದು ನಗರದ ನಿವಾಸಿ ಮೆಹಬೂಬ್ ಖಾನ್ ತಿಳಿಸಿದರು.

ಹಬ್ಬದ ಅಂಗವಾಗಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಪೊಲೀಸರನ್ನು ನಿಯೋಜಿಸಿ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. ಪ್ರಮುಖ ಮಸೀದಿಗಳ ಬಳಿಯೂ ಪೊಲೀಸರನ್ನು ನಿಯೋಜಿಸಲಾಗಿತ್ತು.

‘ಬಕ್ರೀದ್, ತ್ಯಾಗ ಬಲಿದಾನದ ಪ್ರತೀಕ. ಪ್ರತಿಯೊಬ್ಬ ವ್ಯಕ್ತಿಯೂ ತನ್ನಲ್ಲಿರುವ ದ್ವೇಷ, ಅಸೂಯೆ ಭಾವನೆಗಳನ್ನು ಬಲಿದಾನ ನೀಡಬೇಕು’ ಎಂದು ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಹೇಳಿದರು.

ಸುಮಾರು ವರ್ಷಗಳಿಂದ ಸಾಂಪ್ರದಾಯಿಕವಾಗಿ ಹಬ್ಬ ಆಚರಿಸುತ್ತಿದ್ದು, ದೇವರ ಆಜ್ಞೆಯಂತೆ ನಡೆಯುತ್ತಿದೆ. ನಾವೆಲ್ಲರೂ ಒಂದೇ ತಾಯಿಯ ಮಕ್ಕಳು, ಸಹನೆ, ಪ್ರೀತಿ, ಮಮತೆ, ಭ್ರಾತೃತ್ವ ಭಾವನೆಗಳನ್ನು ಬೆಳಸಿಕೊಳ್ಳಬೇಕು ಎಂದರು.

ಮುಸ್ಲಿಂ ಸಮುದಾಯದವರಿಗೆ ಬಕ್ರೀದ್ ಹಬ್ಬದ ಶುಭಾಶಯ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT