ಬುಧವಾರ, ಸೆಪ್ಟೆಂಬರ್ 29, 2021
20 °C
ಅಡವಿಭಾವಿ, ಚಳಗೇರಾ, ಹುಲ್ಸಗೇರಿ ವಿದ್ಯಾರ್ಥಿಗಳ ಗೋಳು

ಬಾರದ ಬಸ್‌: ಕಮರುತ್ತಿದೆ ಶೈಕ್ಷಣಿಕ ಭವಿಷ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಷ್ಟಗಿ: ಸಮಯಕ್ಕೆ ಸರಿಯಾಗಿ ಸಾರಿಗೆ ಸಂಸ್ಥೆ ಬಸ್‌ಗಳು ಇಲ್ಲದ ಕಾರಣ ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ಶಾಲಾ ಕಾಲೇಜಿನ ವಿದ್ಯಾರ್ಥಿಗಳು ದೂರಿದ್ದಾರೆ.

ಈ ಸಮಸ್ಯೆ ಕುರಿತು ಶಾಸಕರ ಗಮನಸೆಳೆಯಲು ಸೋಮವಾರ ವಿದ್ಯಾರ್ಥಿ ಫೆಡರೇಶನ್ ನೇತೃತ್ವದಲ್ಲಿ ಇಲ್ಲಿಗೆ ಆಗಮಿಸಿದ್ದ ಅಡವಿಭಾವಿ, ಹುಲ್ಸಗೇರಿ, ಚಳಗೇರಿ ಗ್ರಾಮದ ಅನೇಕ ವಿದ್ಯಾರ್ಥಿಗಳು ಶಾಸಕ ಅಮರೇಗೌಡ ಬಯ್ಯಾಪುರ ಅವರಿಗೆ ಬರೆದ ಮನವಿಯನ್ನು ಕಚೇರಿ ಸಿಬ್ಬಂದಿಗೆ ಸಲ್ಲಿಸಿ ಸಾರಿಗೆ ವ್ಯವಸ್ಥೆಯ ದೈನಂದಿನ ತೊಂದರೆಯನ್ನು ವಿವರಿಸಿದರು.

ನಿಗದಿತ ಸಮಯದಲ್ಲಿ ಬಸ್‌ಗಳು ಬಾರದಿರುವುದು, ಬಂದರೂ ನಿಲ್ಲಿಸದೇ ಹೋಗುವುದು ಸಾಮಾನ್ಯ ಸಂಗತಿಯಾಗಿ. ಇದರಿಂದ ನಿತ್ಯ ಶಾಲೆ, ಕಾಲೇಜುಗಳಿಗೆ ಹೋಗಲಾರದೆ ನೂರಾರು ವಿದ್ಯಾರ್ಥಿಗಳು ಪಾಠಗಳಿಂದ ವಂಚಿತರಾಗುತ್ತಿದ್ದು ಭವಿಷ್ಯದಲ್ಲಿ ಶೈಕ್ಷಣಿಕ ಹಿನ್ನಡೆ ಅನುಭವಿಸುವಂತಾಗುವ ಸಾಧ್ಯತೆ ಇದೆ. ಅಡವಿಭಾವಿಯಿಂದ ವಿದ್ಯಾರ್ಥಿಗಳು ನಿತ್ಯ 4 ಕಿಮೀ ನಡೆದು ಹನುಸಾಗರ ಕುಷ್ಟಗಿ ಮಾರ್ಗದ ಕ್ರಾಸ್‌ಗೆ ಬರಬೇಕಾಗುತ್ತದೆ. ಬರುವುದರೊಳಗಾಗಿ ಬಸ್‌ಗಳೇ ಇರುವುದಿಲ್ಲ. ಹಾಗಾಗಿ ಕಾದು ಕುಳಿತು ಮರಳಿ ಮನೆಗೆ ಹೋಗುವ ಅನಿವಾರ್ಯತೆ ಎದುರಾಗಿದೆ ಎಂದರು.

ಈ ಕಾರಣಕ್ಕೆ ಈ ಗ್ರಾಮಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಪ್ರತ್ಯೇಕವಾಗಿ ಬೆಳಿಗ್ಗೆ 8.45ಕ್ಕೆ ಮತ್ತು ಮಧ್ಯಾಹ್ನ 2.30ರ ಸಮಯದಲ್ಲಿ ಬಸ್‌ಗಳನ್ನು ಓಡಿಸುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ನಂತರ ಇಲ್ಲಿಯ ಈಶಾನ್ಯ ಸಾರಿಗೆ ಸಂಸ್ಥೆ ಘಟಕದ ವ್ಯವಸ್ಥಾಪಕರಿಗೂ ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು.

ನವೀನ್‌, ಶ್ರೀಕಾಂತ, ಈರಣ್ಣ, ಹನುಮಂತ, ಯಮನೂರಪ್ಪ, ಮಂಜುನಾಥ, ಬಸವರಾಜ, ಸಂತೋಷ
ಈ ಸಂದರ್ಭದಲ್ಲಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.