ಕಾಲುವೆ ನೀರಿಗೆ ಕನ್ನ: ಕೊನೆಯ ಭಾಗದ ರೈತರಿಗೆ ಇಲ್ಲ ನೀರು

7
ತುಂಗಭದ್ರಾ ಎಡದಂಡೆ ಕಾಲುವೆ ಕಥೆ-ವ್ಯಥೆ: ಬೇಸಿಗೆಯಲ್ಲಿ ಕುಡಿಯುವ ನೀರಿಗೂ ತತ್ವಾರ

ಕಾಲುವೆ ನೀರಿಗೆ ಕನ್ನ: ಕೊನೆಯ ಭಾಗದ ರೈತರಿಗೆ ಇಲ್ಲ ನೀರು

Published:
Updated:
Prajavani

ಕೊಪ್ಪಳ: ಈ ಭಾಗದ ಲಕ್ಷಾಂತರ ಜನರ ಜೀವನಾಡಿಯಾಗಿರುವ ತುಂಗಭದ್ರಾ ಎಡದಂಡೆ ಕಾಲುವೆ ಬಗೆದು ಅಕ್ರಮವಾಗಿ ನೀರು ಪಡೆದುಕೊಳ್ಳುತ್ತಿರುವ  ಪ್ರಭಾವಿಗಳ ವಿರುದ್ಧ ಜಲಾಶಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಕೊನೆಯ ಭಾಗದ ರೈತರಲ್ಲಿ ಅಸಮಾಧಾನ ಮೂಡಿಸಿದೆ.

ಬೇಸಿಗೆಯ ಬೆಳೆಗೆ ನೀರು ಬಿಡುವುದನ್ನು ಬಂದ್ ಮಾಡಿದ ನಂತರ ಕಾಲುವೆ ಬರಿದಾಗುತ್ತದೆ. ಆಗ ಕಾಲುವೆಯನ್ನು ತೂರಿಕೊಂಡು ಬೋಂಗಾ ಹಾಕಿ ಪಂಪ್‌ಗಳನ್ನು ಅಳವಡಿಸುತ್ತಾರೆ. ನರಮಂಡಲದಂತೆ ಹೊರಗೆ ಕಾಣುವ ಆ ಪೈಪ್‌ಗಳ ಮೂಲಕ ನೀರು ಅಕ್ರಮ ಪಡೆಯುವುದು ಬಯಲಿಗೆ ಬರುತ್ತದೆ. ಈ ಘಟನೆ ಪ್ರತಿವರ್ಷ ನಡೆಯುತ್ತಿದ್ದರೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಸೋಜಿಗವಾದರೂ ಸತ್ಯ.

ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಕಾಲುವೆ ನಿರ್ಮಾಣ ಮಾಡಿರುವ ತುಂಗಭದ್ರಾ ಜಲಾಶಯದ ಅಧಿಕಾರಿಗಳಿಗೂ ಇದು ಬಿಸಿತುಪ್ಪವಾಗಿದೆ. ಅಕ್ರಮ ನೀರು ಪಡೆಯುವುದನ್ನು ಪತ್ತೆ ಮಾಡಲು ಹೋದರೆ ಪ್ರಭಾವಿಗಳ ಬೆದರಿಕೆಗೆ ಈಡಾಗಬೇಕಾಗುತ್ತದೆ. ಅಲ್ಲದೆ 'ನಮ್ಮ ಜಮೀನು ತ್ಯಾಗ ಮಾಡಿರುವ ನಮಗೆ ನೀರು ಇಲ್ಲ' ಎಂದರೆ ಹೇಗೆ? ಎಂಬ ರೈತರ ವಾದಕ್ಕೆ ಹೆದರುವ ಜಲಾಶಯದ ಅಧಿಕಾರಿಗಳು ಇತ್ತ ಸುಳಿಯದೇ ಜಾಣ ಮೌನ ವಹಿಸುವುದು ನಡೆದೇ ಇದೆ.

ಎಡದಂಡೆ ಖಾಲಿಯಾದಾಗ ರಂಧ್ರ ಕೊರೆದು ಪೈಪ್‌ ಹಾಗೂ ಪಂಪ್ ಅಳವಡಿಸುತ್ತಾರೆ. ನೀರು ಬಿಟ್ಟ ನಂತರ ಈ ಪಂಪ್‌ಗಳು ನೀರಿನಲ್ಲಿ ಕಾಣದೆ ಹೋಗುತ್ತಿವೆ. ಖಾಲಿಯಾದ ನಂತರ ಎಲ್ಲೆಂದರಲ್ಲಿ ಹಾಕಿರುವ ಪೈಪ್‌ಗಳು ಹೊರಗೆ ಕಾಣುತ್ತವೆ. ಇದರಿಂದ ಕಾಲುವೆ ಭದ್ರತೆಗೆ ಅಪಾಯ ಎದುರಾಗಿದೆ. ಕಾಲುವೆ ವ್ಯಾಪ್ತಿಯ 50 ಮೀಟರ್ ವರೆಗೆ ಯಾವುದೇ ಬಾವಿ ತೋಡಲು ಅವಕಾಶ ಇಲ್ಲ. 100 ಮೀಟರ್ ವ್ಯಾಪ್ತಿಯಲ್ಲಿ ಕೊಳವೆಬಾವಿ ಕೊರೆಸಬೇಕು ಎಂದರೆ ಜಲಾಶಯ ಅಧಿಕಾರಿಗಳ ಅನುಮತಿ ಬೇಕು. ಇಂತಹ ಅನೇಕ ನಿಯಮಗಳು ಇದ್ದರೂ ಕಾಲುವೆ ರಕ್ಷಣೆ ಮಾತ್ರ ಯಕ್ಷಪ್ರಶ್ನೆಯಾಗಿದೆ.

ಸದ್ಯ ಡ್ಯಾಂನಲ್ಲಿ ಕೇವಲ 17 ಟಿಎಂಸಿ ನೀರು ಇದ್ದು, ಎರಡನೇ ಬೆಳೆಗೆ ನೀರು ಬಿಡುವುದನ್ನು ಸ್ಥಗಿತಗೊಳಿಸಲಾಗಿದೆ. ಇದೀಗ ಕಾಲುವೆ ಖಾಲಿ-ಖಾಲಿಯಾಗಿದ್ದು, ಪ್ರಭಾವಿಗಳ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳ ಬಂಡವಾಳ ಬಯಲಾಗಿದೆ.

'ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಬರಗಾಲದ ಛಾಯೆ ಆವರಿಸಿರುವುದರಿಂದ ಕುಡಿಯುವ ನೀರು ಒದಗಿಸುವ ಸಲುವಾಗಿ ನೀರನ್ನು ಹಿಡಿದಿಟ್ಟುಕೊಳ್ಳಲಾಗಿದೆ. ತುಂಗಭದ್ರಾ ಜಲಾಶಯ ಮಂಡಳಿ ಇನ್ನು ಕೆಲವೇ ದಿನಗಳಲ್ಲಿ ಕುಡಿಯೋ ನೀರಿನ ಸಲುವಾಗಿ ಜಲಾಶಯದ ಎಡದಂಡೆ, ಬಲದಂಡೆ ಕಾಲುವೆಗೆ ನೀರು ಬಿಡುತ್ತಾ ಇದೆ. ಇದಕ್ಕೂ ಹೊಂಚು ಹಾಕಿರೋ ಪ್ರಭಾವಿಗಳು ಕುಡಿಯೋ ನೀರನ್ನು ಕದ್ದು, ಭತ್ತ ಬೆಳೆಯಲು ಸಿದ್ಧರಾಗಿದ್ದಾರೆ. ಇದೇ ರೀತಿ ಮುಂದುವರಿದರೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಲಿದೆ' ಎನ್ನುತ್ತಾರೆ ಸ್ಥಳೀಯರಾದ ಸುದರ್ಶನ್ ತಾಂದಳೆ.

'ಕಾಲುವೆಗೆ ಕುಡಿಯಲು ಬಿಡುವ ನೀರನ್ನು ಅಕ್ರಮವಾಗಿ ಬೆಳೆಗೆ ಪಂಪ್‌ಸೆಟ್‌ಗಳ ಮೂಲಕ ಪಡೆಯುವುದು ಅಪರಾಧ. ಇಂತಹ ಅಕ್ರಮ ಪತ್ತೆ ಹಚ್ಚಿ ದಂಡ ವಿಧಿಸಬೇಕು ಎಂಬುವುದು ಕೊನೆಯ ಭಾಗದ ರೈತ ಬಸವರಾಜ ಪಾಟೀಲ ಅವರ ಒತ್ತಾಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !