ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರಿ, ಮೇಕೆ ಗ್ರಾಮೀಣರ ಜೀವನಾಧಾರ

ಅನುಗ್ರಹ ಯೋಜನೆ ಫಲಾನುಭವಿಗಳಿಗೆ ಚೆಕ್ ವಿತರಣೆ: ಪಶುಸಂಗೋಪನಾ ಸಚಿವ ಪ್ರಭು ಚವಾಣ್ ಅಭಿಮತ
Last Updated 2 ಸೆಪ್ಟೆಂಬರ್ 2021, 3:58 IST
ಅಕ್ಷರ ಗಾತ್ರ

ಕೊಪ್ಪಳ: ‘ಕುರಿ, ಮೇಕೆ ಗ್ರಾಮೀಣರಿಗೆ ಜೀವನಾಧಾರ. ಆದ್ದರಿಂದ ಅನುಗ್ರಹ ಯೋಜನೆಯಡಿ ರಾಜ್ಯದ70 ಸಾವಿರ ಫಲಾನುಭವಿಗಳ ಖಾತೆಗೆ ₹39.18 ಕೋಟಿಗಳನ್ನು ಡಿ.ಬಿ.ಟಿಮೂಲಕ ನೇರವಾಗಿ ಜಮಾ ಮಾಡಲಾಗುತ್ತಿದೆ. ಕಾನೂನಿನ ಚೌಕಟ್ಟಿನಲ್ಲಿ ಜನರಿಗೆ ಸೌಲಭ್ಯ ಒದಗಿಸಿ ಅವರ ಏಳಿಗೆಗೆ ಸಹಕರಿಸುತ್ತೇವೆ’ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವಾಣ್‌ ತಿಳಿಸಿದರು.

ನಗರದ ಸಾಹಿತ್ಯ ಭವನದಲ್ಲಿರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ವತಿಯಿಂದ ಬುಧವಾರ ನಡೆದ ಅನುಗ್ರಹ ಕೊಡುಗೆ ಯೋಜನೆಯಡಿ ಫಲಾನುಭವಿಗಳಿಗೆ ಪರಿಹಾರ ಹಾಗೂ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಕ್ಕೆ ಪ್ರೋತ್ಸಾಹಧನದ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸರ್ಕಾರದ ವಿವಿಧ ಯೋಜನೆ ಹಾಗೂ ಸೌಲಭ್ಯಗಳನ್ನು ಜನರ ಮನೆಬಾಗಿಲಿಗೆ ತಲುಪಿಸಬೇಕು ಎನ್ನುವ ಧ್ಯೇಯ ಮತ್ತು ಸಂಕಲ್ಪ ನಮ್ಮದಾಗಿದೆ. ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿದ್ದೇವೆ. ಮುಂದಿನ ದಿನಗಳಲ್ಲಿಯೂ ಪ್ರಾಣಿ ರಕ್ಷಣೆಗಾಗಿ ವಿವಿಧ ಯೋಜನೆಗಳನ್ನು ಹಾಕಿಕೊಂಡಿದ್ದೇವೆ ಎಂದು ಅವರು ಹೇಳಿದರು.

ಸಂಸದ ಸಂಗಣ್ಣ ಕರಡಿ ಮಾತನಾಡಿ,‘ರೈತರ ಹಿತದೃಷ್ಟಿಯಿಂದ ಸಚಿವರು ಇಂದು ಕುರಿಗಾಹಿಗಳಿಗೆ ಡಿಬಿಟಿ ಮೂಲಕ ಹಣ ಜಮಾವಣೆಗೆ ಚಾಲನೆ ನೀಡಿದ್ದು ಸಂತಸದ ಸಂಗತಿ. ರೈತರು ಕುರಿ ಗೊಬ್ಬರವನ್ನು ಉಪಯೋಗಿಸಿದರೆ ಭೂಮಿ ಫಲವತ್ತತೆಯಿಂದ ಕೂಡಿರುತ್ತದೆ. ಆದರೆ, ಇಂದಿನ ದಿನಮಾನದಲ್ಲಿ ಜಾನುವಾರು ಸಾಕಾಣಿಕೆ ಪ್ರಮಾಣ ಇಳಿಕೆಯಾಗಿದೆ’ ಎಂದು ಅವರು ವಿಷಾದಿಸಿದರು.

ಇಲಾಖೆಯಿಂದ ಗೋ ಸಂರಕ್ಷಣೆ ಮತ್ತು ಪಾಲನೆಗೆ ವಿವಿಧ ಯೋಜನೆಗಳನ್ನು ರೂಪಿಸಿದ್ದು, ಇದಕ್ಕೆ ಸಹಕಾರವೆಂಬಂತೆ ಸಚಿವರಾದ ಪ್ರಭು ಚೌವಾಣ್‌ ಅವರು ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅವರು ಹೇಳಿದರು.

ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಶರಣು ತಳ್ಳಿಕೇರಿ ಮಾತನಾಡಿ,‘ಕೊರೊನಾ ಕಾರಣಕ್ಕೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಅನುಗ್ರಹ ಕೊಡುಗೆ ಯೋಜನೆಯನ್ನು ಮುಂದುವರಿಸಲು ಸರ್ಕಾರ ಸಹಕಾರ ನೀಡಿದೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡಲಾಗುತ್ತಿದೆ’ ಎಂದು ಅವರು ಹೇಳಿದರು.

ನಿಗಮ ಹಲವು ಯೋಜನೆ ಜಾರಿ ಮಾಡಿದೆ. ಎಲ್ಲರೂ ಅವುಗಳನ್ನು ಸದುಪಯೊಗ ಪಡಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ಶಾಸಕ ಪರಣ್ಣ ಮುನವಳ್ಳಿ, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪಿ.ಶ್ರೀನಿವಾಸ್, ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ.ಎಚ್.ನಾಗರಾಜ್, ನಿಗಮದ ಅನುಷ್ಠಾನಾಧಿಕಾರಿ ಡಾ.ಯಮನಪ್ಪ ಅವರು
ಈ ವೇಳೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT