ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ಸವದಲ್ಲಿ ರಾಮಾಯಣ ಕಥನ ಅನಾವರಣ

Published 14 ಮಾರ್ಚ್ 2024, 6:17 IST
Last Updated 14 ಮಾರ್ಚ್ 2024, 6:17 IST
ಅಕ್ಷರ ಗಾತ್ರ

ಆನೆಗೊಂದಿ (ಗಂಗಾವತಿ): ವಿಶಾಲವಾದ ಇಲ್ಲಿನ ಮೈದಾನದಲ್ಲಿ ಬೆಟ್ಟಕ್ಕೆ ಅಂಟಿಕೊಂಡಂತೆಯೇ ನಿರ್ಮಾಣವಾಗಿರುವ ಭವ್ಯ ಶ್ರೀರಂಗದೇವರಾಯಲು ವೇದಿಕೆಯಲ್ಲಿ ಸೋಮವಾರ ತಡರಾತ್ರಿ ರಾಮಾಯಣದ ಪ್ರಸಂಗಗಳ ಕಥನ ಅನಾವರಣಗೊಂಡಿತು.

ಹನುಮ ಜನಿಸಿದ ನಾಡು ಎಂದೇ ಖ್ಯಾತಿ ಪಡೆದಿರುವ ತಾಲ್ಲೂಕಿನ ಅಂಜನಾದ್ರಿ ಪ್ರದೇಶ ಐತಿಹಾಸಿಕವಾಗಿ ಪ್ರಾಮುಖ್ಯತೆ ಪಡೆದುಕೊಂಡಿದೆ. ಪಂಪಾ ಸರೋವರ, ಕಿಷ್ಕಿಂಧೆ, ಋಷಿಮುಖ ಪರ್ವತ ಹೀಗೆ ರಾಮಾಯಣಕ್ಕೆ ಸಂಬಂಧಿಸಿದ ಪ್ರಸಂಗಗಳನ್ನು ಸಂಗೀತ ನಿರ್ದೇಶಕ ಹಂಸಲೇಖ ಅವರು ಕಲಾವಿದರೊಂದಿಗೆ ಹಾಡುಗಳ ಮೂಲಕ  ಪ್ರಸ್ತುತಪಡಿಸಿದರು.

ಸೀತೆಯನ್ನು ಹುಡುಕಿಕೊಂಡು ರಾಮ ಹಾಗೂ ಲಕ್ಷ್ಮಣ ಇಲ್ಲಿನ ಕಿಷ್ಕಿಂಧೆ ಪ್ರದೇಶಕ್ಕೆ ಬಂದಾಗ ಭೇಟಿಯಾಗುವ ಶಬರಿ, ಹನುಮಂತ, ಸೀತೆಯ ಹುಡುಕಾಟಕ್ಕೆ ನೆರವಾದ ಪ್ರಸಂಗವನ್ನು ಅವರು ಸಿನಿಮಾ ಹಾಡುಗಳ ಮೂಲಕ ಕಟ್ಟಿಕೊಟ್ಟಿದ್ದು ವಿಶೇಷವಾಗಿತ್ತು. ಸುಮಾರು 30 ನಿಮಿಷ ನಡೆದ ಪ್ರದರ್ಶನದಲ್ಲಿ ನೂರಾರು ಕಲಾವಿದರು ಮಾಡಿದ ಮನೋಜ್ಞ ಅಭಿನಯ ಸಾವಿರಾರು ಜನರ ಕಣ್ಮನ ಸೆಳೆಯಿತು. 

ಕಿಷ್ಕಿಂಧೆ ಪ್ರದೇಶದ ಸುತ್ತ ಬೆಟ್ಟ–ಗುಡ್ಡಗಳ ಸಾಲು, ನದಿಯ ವೈಭವ, ಹಸಿರು ತೋರಣದ ಸುಂದರ ದೃಶ್ಯ ಕಾವ್ಯ ಹಾಗೂ ಪ್ರಕೃತಿ ಸೌಂದರ್ಯವನ್ನು ಹಾಡಿನಲ್ಲಿ ತೋರಿಸಲಾಯಿತು. ರಾಮಾಯಣದ ರಾಮ, ಲಕ್ಷ್ಮಣ, ಸೀತೆ, ಹನುಮಂತ ಅವರ ಕಲಾಕೃತಿಗಳನ್ನೇ ವೇದಿಕೆಯಲ್ಲಿ ನಿರ್ಮಿಸಿದ್ದು, ಹಂಸಲೇಖ ಅವರ ಪ್ರದರ್ಶನದ ತೂಕ ಹೆಚ್ಚಿಸಿತು.   

ಪ್ರದರ್ಶನ ಮುಗಿದ ಬಳಿಕ ಮಾತನಾಡಿದ ಹಂಸಲೇಖ ಅವರು, ‘ಸುದೀರ್ಘವಾದ ರಾಮಾಯಣದ ಬಹುಮುಖ್ಯ ಪ್ರಸಂಗವನ್ನು ಕೇವಲ ಎರಡು ದಿನಗಳಲ್ಲಿ ಕಠಿಣವಾಗಿ ಅಭ್ಯಾಸ ಮಾಡಿದ ನಮ್ಮ ತಂಡದವರು ಯಶಸ್ವಿಯಾಗಿ ಪ್ರದರ್ಶನ ಮಾಡಿದ್ದಾರೆ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ರಾಮಾಯಣವನ್ನು ಬೇರೆ ಬೇರೆ ದೃಷ್ಟಿಕೋನದಲ್ಲಿ ಬರೆಯುವ ಕೆಲಸವನ್ನು ಅನೇಕರು ಮಾಡಿದ್ದಾರೆ. ಆದರೆ, ವಾಲ್ಮೀಕಿ ರಾಮಾಯಣಕ್ಕೆ ಸಾಟಿಯಾಗುವಂತೆ ಯಾರೂ ಹೊಸ ರಾಮಾಯಣ ಬರೆಯಲು ಸಾಧ್ಯವಾಗಿಲ್ಲ. ಮಹಾನ್‌ ಗ್ರಂಥಕ್ಕೆ ಇರುವ ಶಕ್ತಿಯೇ ಅಂಥದ್ದು’ ಎಂದರು.

ಹಂಸಲೇಖ
ಹಂಸಲೇಖ
ನಮ್ಮ ತಂಡದ ಕಲಾವಿದರು ಕೇವಲ ಎರಡು ದಿನ ಅಭ್ಯಾಸ ಮಾಡಿ ರಾಮಾಯಣದ ಕಥನವನ್ನ ಜನರ ಮುಂದಿಟ್ಟಿದ್ದಾರೆ. ನಮ್ಮ ಪ್ರಯತ್ನ ಯಶಸ್ವಿಯಾಗಿದೆ ಎಂದು ಭಾವಿಸುವೆ.
ಹಂಸಲೇಖ, ಸಂಗೀತ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT