ಶುಕ್ರವಾರ, ಸೆಪ್ಟೆಂಬರ್ 24, 2021
27 °C
ಸನ್ಮಾನ ಕಾರ್ಯಕ್ರಮ: ಮಾಜಿ ಸಚಿವ ಬಸವರಾಜ ರಾಯರಡ್ಡಿ ಟೀಕೆ

ಸಚಿವರಿಂದ ಜನತೆಗೆ ತಪ್ಪು ಸಂದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಲಬುರ್ಗಾ: ‘ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೆರೆ ತುಂಬಿಸುವ ಯೋಜನೆ ಜಾರಿಗೆ ತಂದಿದ್ದನ್ನು ಮರೆತು ಸಚಿವ ಹಾಲಪ್ಪ ಆಚಾರ ತಾವು ಜಾರಿಗೆ ತಂದಿರುವುದಾಗಿ ಸುಳ್ಳು ಹೇಳುವ ಮೂಲಕ ಕ್ಷೇತ್ರದ ಜನತೆಗೆ ತಪ್ಪು ಸಂದೇಶ ನೀಡುತ್ತಿದ್ದಾರೆ’ ಎಂದು ಮಾಜಿ ಸಚಿವ ಬಸವರಾಯ ರಾಯರಡ್ಡಿ ಆರೋಪಿಸಿದರು.

ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮುಖಂಡರ ಸಭೆ ಹಾಗೂ ಪಕ್ಷಕ್ಕೆ ಸೇರ್ಪಡೆಗೊಂಡವರನ್ನು ಸನ್ಮಾನಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಸಿದ್ಧರಾಮಯ್ಯನವರೇ ಈ ಯೋಜನೆಗೆ ಚಾಲನೆ ನೀಡಿದ್ದಾರೆ. ಕಾರ್ಯಕ್ರಮಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು. ಸಚಿವರು ಇದನ್ನೆಲ್ಲ ಮರೆತು ಕೆರೆಗೆ ನೀರು ತುಂಬಿಸುವ ಯೋಜನೆ ಕುರಿತು ಮಾತನಾಡುತ್ತಿರುವುದು ಶೋಭೆ ತರುವುದಿಲ್ಲ. ಕಾಲ ಮಿಂಚಿಲ್ಲ. 50 ಹೊಸ ಕೆರೆ ತುಂಬಿಸಲು ಪ್ರಯತ್ನಿಸಿದರೆ ಸಂತೋಷ ಪಡುತ್ತೇವೆ’ ಎಂದರು.

ಬಡವರಿಗಾಗಿ ತೆರೆದಿರುವ ಇಂದಿರಾ ಕ್ಯಾಂಟಿನ್‍ನ ಹೆಸರು ಬದಲಿಸಲು ಹೊರಟಿರುವ ಬಿಜೆಪಿಯವರ ಧೋರಣೆಯು ಕೆಟ್ಟ ರಾಜಕೀಯ ಸಂಸ್ಕೃತಿಯನ್ನು ಬೆಳೆಸುವಂತಿದೆ. ಯಾವುದೇ ಪಕ್ಷಕ್ಕೂ ಇದು ಶೋಭೆ ತರುವುದಿಲ್ಲ. ಜನವಿರೋಧಿ ನೀತಿ ಅನುಸರಿಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ದೇಶಕ್ಕಾಗಲಿ, ನಾಡಿನ ಜನತೆಗಾಗಲಿ ಪ್ರಯೋಜನವಿಲ್ಲ ಎಂದು ದೂರಿದರು.

ಕೆಟ್ಟ ನಡಾವಳಿಯುಳ್ಳ ಬಿಜೆಪಿಯನ್ನು ತಿರಸ್ಕರಿಸುವ ಸಮಯ ಸನ್ನಿಹಿತವಾಗಿದೆ. ತಕ್ಕ ಪಾಠ ಕಲಿಸಲು ಜನ ತುದಿಗಾಲಲ್ಲಿ ನಿಂತಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳಿಸಿ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು.

ತರಲಕಟ್ಟಿ ಗ್ರಾಮದ ಬಿಜೆಪಿ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರಿದರು. ಸಂಕನೂರು, ಹಿರೇಮ್ಯಾಗೇರಿ ಗ್ರಾಮ ಪಂಚಾಯಿತಿ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಕೆರಿಬಸಪ್ಪ ನಿಡಗುಂದಿ, ಬಿ.ಎಂ.ಶಿರೂರು, ಡಾ.ಶರಣಪ್ಪ ಕೊಪ್ಪಳ, ಡಾ.ಶಿವನಗೌಡ ದಾನರೆಡ್ಡಿ, ಆನಂದ ಉಳ್ಳಾಗಡ್ಡಿ, ಶರಣಪ್ಪ ಗಾಂಜಿ, ರಾಜಶೇಖರ ನಿಂಗೋಜಿ, ಛತ್ರಪ್ಪ ಛಲವಾದಿ, ಈಶ್ವರ ಅಟಮಾಳಗಿ ಹಾಗೂ ಸಂಗಣ್ಣ ಟೆಂಗಿನಕಾಯಿ ಸೇರಿ ಹಲವರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು