ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಂಜನಾದ್ರಿ ಅಭಿವೃದ್ಧಿಪಡಿಸಿ’

ಆಂಜನೇಯಸ್ವಾಮಿ ಮೇಲೆ ರಾಜ್ಯಪಾಲರಿಗೆ ವಿಶಿಷ್ಟ ಭಕ್ತಿ
Last Updated 11 ಜನವರಿ 2021, 2:08 IST
ಅಕ್ಷರ ಗಾತ್ರ

ಕೊಪ್ಪಳ: ‘ಅಂಜನಾದ್ರಿ ಪವಿತ್ರ ಸ್ಥಳ. ಇಲ್ಲಿ ಭವ್ಯವಾದ ಆಂಜನೇಯನ ದೇವಾಲಯ ನಿರ್ಮಾಣವಾಗಬೇಕು’ ಎಂದು ರಾಜ್ಯಪಾಲ ವಜುಭಾಯಿ ವಾಲಾ ಹೇಳಿದರು.

ಗಂಗಾವತಿ ತಾಲ್ಲೂಕಿನ ಆನೆಗೊಂದಿ ಸಮೀಪದ ಅಂಜನಾದ್ರಿ ಪರ್ವತಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು, ‘ಅಂಜನಾದ್ರಿ ಹನುಮನ ಜನ್ಮಸ್ಥಳ. ಹನುಮ ಎಂದರೆ ಕರ್ಮನಿಷ್ಠೆ, ಆ ಸಂಸ್ಕಾರ ನಮ್ಮಲ್ಲಿ ಬರಬೇಕು. ಆದ್ದರಿಂದ ಸರ್ಕಾರ ಈ ಸುಂದರವಾದ ಪ್ರದೇಶವನ್ನು ಅಭಿವೃದ್ಧಿಪಡಿಸಬೇಕು’ ಎಂದರು.

‘ಇದು ಪ್ರೇರಣಾದಾಯಕ ಸ್ಥಳ. ಇದರ ಸಮಗ್ರ ಅಭಿವೃದ್ಧಿಗೆ ಇರುವ ತಾಂತ್ರಿಕ ತೊಂದರೆಗಳನ್ನು ನಿವಾರಿಸಬೇಕು. ಯಾತ್ರಿಕರಿಗೆ ಸಕಲ ಸೌಲಭ್ಯ ಒದಗಿಸಬೇಕು. ಈ ಪ್ರದೇಶಕ್ಕೆ ಇಡೀ ಪ್ರಪಂಚದಿಂದ ಹಿಂದೂಗಳುದರ್ಶನಕ್ಕೆ ಬರುತ್ತಿದ್ದಾರೆ. ಆದ್ದರಿಂದ ಇಲ್ಲಿ ಶಾಶ್ವತವಾದ ಅಭಿವೃದ್ಧಿ ಕಾರ್ಯಗಳನ್ನು ನೆರೆವೇರಿಸಬೇಕು’ ಎಂದರು.

ರಾಜ್ಯಪಾಲ ವಜುಭಾಯಿ ವಾಲಾ ಬೆಳಿಗ್ಗೆ 11ಕ್ಕೆ ಆನೆಗೊಂದಿ ಉತ್ಸವ ಮೈದಾನದಲ್ಲಿ ವಿಶೇಷ ವಿಮಾನದ ಮೂಲಕ ಬಂದಿಳಿದರು. ಜಿಲ್ಲಾಧಿಕಾರಿ ವಿಕಾಸ್‌ ಕಿಶೋರ್‌ ಸುರಳ್ಕರ್‌, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ, ಉಪವಿಭಾಗಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಸ್ವಾಗತಿಸಿದರು.

ನಂತರ ರಸ್ತೆಯ ಮೂಲಕ ಬೆಟ್ಟಕ್ಕೆ ತೆರಳಿದರು.ಅಂಜನಾದ್ರಿ ಪರ್ವತ ಏರಲು 525 ಮೆಟ್ಟಿಲುಗಳು ಇದ್ದು, ರಾಜ್ಯಪಾಲರು ದೇಗುಲದ ಕೆಳಗೆ ಇರುವ ಪಾದಗಟ್ಟೆಯಲ್ಲಿ ಪೂಜೆ ಸಲ್ಲಿಸಿದರು.

ರಾಜ್ಯಪಾಲರ ಆಗಮನದ ಹಿನ್ನೆಲೆಯಲ್ಲಿ ಎರಡು ಗಂಟೆ ರಸ್ತೆ ಬಂದ್ ಮಾಡಿ, ಪರ್ಯಾಯ ವ್ಯವಸ್ಥೆ ಮಾಡಲಾಗಿತ್ತು. ಬಿಗಿಪೊಲೀಸ್‌ ಬಂದೋಬಸ್ತ್‌ ವ್ಯವಸ್ಥೆ ಕೂಡ ಮಾಡಲಾಗಿತ್ತು. ರಾಜ್ಯಪಾಲರು ತೆರಳಿದ ನಂತರ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಯಿತು.

ಗುಜರಾತ್‌ನ ಹನುಮ ದೇಗುಲಕ್ಕೆ ಅಂಜನಾದ್ರಿ ಪರ್ವತದ ಶಿಲೆ:

ತಮ್ಮ ತವರು ರಾಜ್ಯ ಗುಜರಾತಿನ ಆನಂದ ಜಿಲ್ಲೆಯಲಂಬಾವೇಲಾದಲ್ಲಿ ನಿರ್ಮಾಣ ಹಂತದಲ್ಲಿರುವ ₹25 ಕೋಟಿ ವೆಚ್ಚದ ಆಂಜನೇಯನ ದೇಗುಲಕ್ಕೆ ಅವರು ಅಂಜನಾದ್ರಿ ಬೆಟ್ಟದ ಶಿಲೆ ಹಾಗೂ ಹನುಮ ಮೂರ್ತಿಯನ್ನು ಒಯ್ದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ ಅಯೋಧ್ಯೆಗೆ ಸಮನಾದ ಪವಿತ್ರ ಧಾರ್ಮಿಕ ಕ್ಷೇತ್ರವಾದ ಅಂಜನಾದ್ರಿಯಿಂದ ಪವಿತ್ರ ಶಿಲೆಯನ್ನು ನಮ್ಮ ಗ್ರಾಮದಲ್ಲಿ ನಿರ್ಮಿಸಲಾಗುತ್ತಿರುವ ದೇವಸ್ಥಾನಕ್ಕೆ ಒಯ್ಯಬೇಕು ಎಂಬ ಇಚ್ಛೆಯಿತ್ತು’ ಎಂದರು.

‘ಅಂಜನಾದ್ರಿಯಲ್ಲಿ ಪೂಜೆ ಮತ್ತು ಸ್ಥಳದ ವಿವಾದ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ.

ಅದನ್ನು ಸರ್ಕಾರ ಬಗೆಹರಿಸುತ್ತದೆ. ಒಟ್ಟಿನಲ್ಲಿ ಇಲ್ಲಿ ಭವ್ಯವಾದ ಆಂಜನೇಯನ ದೇವಾಲಯ ನಿರ್ಮಾಣವಾಗಬೇಕು’ ಎಂದು
ಅಭಿಪ್ರಾಯಪಟ್ಟರು.

ಅಂಜನಾದ್ರಿ ದೇಗುಲದ ಅರ್ಚಕ ವಿದ್ಯಾದಾಸ ಬಾಬಾ, ಯೋಗಾಚಾರ್ಯ ಜಿತೇಂದ್ರ ಮಹಾರಾಜ್ ಪೂಜಾ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಸಂಸದ ಸಂಗಣ್ಣ ಕರಡಿ, ಶಾಸಕ ಪರಣ್ಣ ಮುನವಳ್ಳಿ, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಶ್ರೀಧರ್, ಅಮರೇಶ ಕರಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT