ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರೇಹಳ್ಳ ಆವಾಂತರ; ತಪ್ಪದ ಗಂಡಾಂತರ

ನೀರು ನಿಂತರೂ ನಿಲ್ಲದ ರೈತರ ಸಂಕಷ್ಟ,ವರವಾಗಬೇಕಿದ್ದ ಹಳ್ಳದ ನೀರಿನಿಂದ ಅನಾಹುತ, ಬೆಳೆ, ಬದುಕು ಎರಡೂ ಹಾಳು
Last Updated 12 ಸೆಪ್ಟೆಂಬರ್ 2022, 4:33 IST
ಅಕ್ಷರ ಗಾತ್ರ

ಕೊಪ್ಪಳ: ’ಅಲ್ಲಿ ಬಿದ್ದೈತಿ ನೋಡ್ರಿ ತ್ಯಾಜ್ಯದ ರಾಶಿ. ದೊಡ್ಡ ರಾಶಿಗಳ ಗುಂಪು ಎರಡೂವರೆ ಎಕರೆ ಜಾಗದಲ್ಲಿ ಐದಾರು ಕಡೆ ಐತ್ರಿ. ಅದನ್‌ ಹೊರಗ ಹಾಕೊಕೊ ಸಾಧ್ಯವಿಲ್ರೀ...’

–ಹಿರೇಹಳ್ಳ ಜಲಾಶಯದಿಂದ ದಿಢೀರನೇ ನೀರು ಬಿಟ್ಟ ಕಾರಣ ಆದ ಆವಾಂತರವನ್ನು ಕೊಪ್ಪಳ ತಾಲ್ಲೂಕಿನ ಹಿರೇಸಿಂದೋಗಿ ಗ್ರಾಮದ ರೈತ ರಾಮಣ್ಣ ಡೊಳ್ಳಿನ ಹೀಗೆ ವಿವರಿಸುತ್ತಾ ಹೋದರು.

ಅಲ್ಲಿ ಕಣ್ಣು ಹಾಯಿಸಿದಷ್ಟೂ ದೂರ ತ್ಯಾಜ್ಯದ ರಾಶಿ. ಅದನ್ನು ನೋಡಿದರೆ ಅಲ್ಲಿ ಕಬ್ಬು ಬೆಳೆದಿದ್ದರು ಎನ್ನುವ ಕುರುಹು ಕೂಡ ಇಲ್ಲ. ನೆಲಕ್ಕೊರಗಿದ ಕಬ್ಬಿನ ಮೇಲೆಹಳ್ಳದ ಜೊತೆಗೆ ಹರಿದು ಬಂದ ಪ್ಲಾಸ್ಟಿಕ್‌ ಹಾಗೂ ಇನ್ನಿತರ ತ್ಯಾಜ್ಯದ ರಾಶಿಯೇ ಎದ್ದು ಕಾಣುತ್ತಿತ್ತು.

ಕಾತರಕಿಗೆ ಹೋಗುವ ರಸ್ತೆಯಲ್ಲಿರುವ ರಾಮಣ್ಣ ಅವರ ಹೊಲದಲ್ಲಿ ಎರಡೂವರೆ ಎಕರೆಯಲ್ಲಿ ಕಬ್ಬು ಬೆಳೆಯಲಾಗಿದೆ. ಅದರಲ್ಲಿ ಒಂದೂವರೆ ಎಕರೆಯಷ್ಟು ತ್ಯಾಜ್ಯ ತುಂಬಿಕೊಂಡಿದೆ. ‘ಪ್ರಜಾವಾಣಿ’ ತಂಡ ಅದರ ವೀಕ್ಷಣೆಗೆ ಹೋದಾಗ ಕಾಲಿಡಲೂ ಆಗದಷ್ಟು ಅವ್ಯವಸ್ಥೆ ಕಂಡು ಬಂತು. ಕಬ್ಬಿನ ಬೆಳೆ ಎಲ್ಲಿದೆ ಎಂದು ಹುಡುಕಾಡಬೇಕಾಯಿತು.

ಮಾತು ಮುಂದುವರಿಸಿದ ರಾಮಣ್ಣ ‘ಇಷ್ಟೊಂದು ಬೆಳೆ ಹಾನಿಯಾಗಿದ್ರೂ ಅಧಿಕಾರಿಗಳು ಮಾತ್ರ ರಸ್ತೆಗೆ ನಿಂತು ಹಾನಿ ಬರೆದುಕೊಂಡು ಹೋದ್ರು’ ಎಂದು ಬೇಸರ ವ್ಯಕ್ತಪಡಿಸಿದರು.

ಇದು ರಾಮಣ್ಣ ಅವರದ್ದಷ್ಟೇ ಸ್ಥಿತಿಯಲ್ಲ. ಜಲಾಶಯದ ನೀರು ಬಂದು ಸೇರುವ ಹಿರೇಸಿಂದೋಗಿ–ಚಿಕ್ಕಸಿಂದೋಗಿ ಮಾರ್ಗ ಮಧ್ಯದಲ್ಲಿರುವ ಬ್ಯಾರೇಜ್‌ಗಳಲ್ಲಿ ನೀರು ಹರಿಯುವ ಎರಡೂ ಬದಿಯ ಹೊಲಗಳ ರೈತರ ಸಮಸ್ಯೆ ಇದು.

ಹಿರೇಹಳ್ಳ ಜಲಾಶಯದ ನೀರಿನಿಂದಾಗಿ ಮುದ್ಲಾಪುರ, ಕಾಟ್ರಹಳ್ಳಿ, ಕೋಳೂರು, ಗೊಂಡಬಾಳ, ಹಿರೇಸಿಂದೋಗಿ, ಚಿಕ್ಕಸಿಂದೋಗಿ ಹಾಗೂ ಬೂದಿಹಾಳ ಗ್ರಾಮಗಳಲ್ಲಿ ಸಮಸ್ಯೆಯಾಗಿದೆ. ಮೆಕ್ಕಜೋಳ, ಹತ್ತಿ, ಸಜ್ಜೆ, ಉಳ್ಳಾಗಡ್ಡಿ, ಮೆಣಸಿನಕಾಯಿ, ಟೊಮೊಟೊ ಬೆಳೆಗಳು ನೀರಿನಲ್ಲಿ ನಿಂತಿವೆ. ಪ್ರತಿ ಬಾರಿ ನೀರು ಬಿಟ್ಟಾಗಲೂ ಇದೇ ಸಮಸ್ಯೆ ಎದುರಾಗುತ್ತಿದ್ದು, ಶಾಶ್ವತ ಪರಿಹಾರ ಒದಗಿಸಬೇಕು ಎನ್ನುವ ಬೇಡಿಕೆ ಮೊದಲಿನಿಂದಲೂ ಇದೆ. ಬ್ಯಾರೇಜ್‌ ಸಮೀಪದ ಶಿಗ್ಗಾವಿ–ಕಲ್ಮಲಾ ರಾಜ್ಯ ಹೆದ್ದಾರಿಗೆ ಹಾಕಿದ ಡಾಂಬಾರು ಕಿತ್ತು ಹೋಗಿ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಆವಾಂತರಕ್ಕೆ ಕಾರಣವೇನು: ತುಂಗಭದ್ರಾ ನದಿಗೆ ಹೂಳು ಸೇರುವುದನ್ನು ತಪ್ಪಿಸಲು ಕೊಪ್ಪಳ ತಾಲ್ಲೂಕಿನ‌ ಕಿನ್ನಾಳ ಸಮೀಪದ ಮುದ್ಲಾಪುರ ಬಳಿ ಹಿರೇಹಳ್ಳ ಜಲಾಶಯ ನಿರ್ಮಿಸಲಾಗಿದೆ.

ಜಲಾಶಯ 1.62 ಟಿಎಂಸಿ ಅಡಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. ಈ ಹಳ್ಳದ ಪಾತ್ರದಲ್ಲಿ 33 ಗ್ರಾಮಗಳು ಬರುತ್ತವೆ. ನಾಲ್ಕು ದಿನಗಳ ಹಿಂದೆ ಈ ಜಲಾಶಯದಿಂದ ಏಕಾಏಕಿ 33 ಸಾವಿರ ಕ್ಯುಸೆಕ್ ನೀರು ಹೊರಬಿಟ್ಟಿದ್ದಿರಿಂದ ಹಳ್ಳದ ವ್ಯಾಪ್ತಿಯ ಗ್ರಾಮಗಳ ಹೊಲಗಳಿಗೆ ನೀರು ನುಗ್ಗಿದೆ. ಮಂಗಳಾಪೂರ, ಕಾಟ್ರಳ್ಳಿ, ಹಿರೇಸಿಂದೋಗಿ ಸೇರಿದಂತೆ ಹತ್ತಕ್ಕೂ ಹೆಚ್ಚು ಗ್ರಾಮಗಳಲ್ಲಿ ಆವಾಂತರ ಸೃಷ್ಟಿಸಿದೆ. ಇದು ರೈತರ ಸಂಕಷ್ಟವನ್ನೂ ಹೆಚ್ಚಿಸಿದೆ.

‘ವಾಸ್ತವ ಅರಿತು ಪರಿಹಾರ ಕೊಡಬೇಕು’
ಎರಡೂವರೆ ಎಕರೆಯಲ್ಲಿ ಕಬ್ಬು ಬೆಳೆದಿದ್ದು, ಹಿರೇಹಳ್ಳ ಜಲಾಶಯದಿಂದ ಬಂದ ನೀರಿನಲ್ಲಿ ಕೊಚ್ಚಿ ಹೋಗಿದೆ. ಪ್ರತಿ ಸಲ ಒಂದು ಎಕರೆಗೆ 50ರಿಂದ 55 ಟನ್‌ ಕಬ್ಬಿನ ಫಸಲು ಬೆಳೆಯುತ್ತಿದ್ದವು. ಈಗ ಎರಡೂವರೆ ಎಕರೆಯಿಂದ 40ರಿಂದ 50 ಟನ್‌ ಬೆಳೆ ಬಂದರೆ ಅದೇ ಹೆಚ್ಚು ಎನ್ನುವಂತಾಗಿದೆ. ಹೊಲದಲ್ಲಿ ಅಗಿರುವ ಸಮಸ್ಯೆಯನ್ನು ಅಧಿಕಾರಿಗಳು ಖುದ್ದು ಭೇಟಿ ನೀಡಿ ಪರಿಶೀಲಿಸಬೇಕು. ಮೇಲ್ನೊಟಕ್ಕೆ ಗಮನಿಸಿದರೆ ವಾಸ್ತವ ಅರ್ಥವಾಗುವುದಿಲ್ಲ.
–ರಾಮಣ್ಣ ಡೊಳ್ಳಿನ, ಹಿರೇಸಿಂದೋಗಿ

‘ಹಂತಹಂತವಾಗಿ ನೀರು ಬಿಟ್ಟರೆ ಅನುಕೂಲ’
ಹಿರೇಹಳ್ಳ ಜಲಾಶಯದಲ್ಲಿ ಹೆಚ್ಚು ನೀರು ಸಂಗ್ರಹವಾಗುತ್ತಿದ್ದಂತೆ ಕ್ರಮೇಣವಾಗಿ ಹೊರಗಡೆ ಬಿಡಬೇಕು. ಆದರೆ, ಅಧಿಕಾರಿಗಳು ನಿಗದಿಗಿಂತ ಹೆಚ್ಚು ನೀರು ಸಂಗ್ರಹಿಸಿಕೊಟ್ಟು ದಿಢೀರನೇ ಬಿಡುತ್ತಾರೆ. ಇದರಿಂದ ರಸ್ತೆ, ಹೊಲಗಳೆಲ್ಲವೂ ಕೊಚ್ಚಿಕೊಂಡು ಹೋಗುತ್ತವೆ. ಒಂದೆಡೆ ಹಿರೇಹಳ್ಳದ ನೀರು, ಇನ್ನೊಂದೆಡೆ ನಮ್ಮ ಭಾಗದಲ್ಲಿ ಸುರಿಯುವ ಮಳೆ ನೀರು ಎರಡೂ ಸೇರಿ ಬೆಳೆ ಕೊಚ್ಚಿಕೊಂಡು ಹೋಗುತ್ತವೆ. ಆದ್ದರಿಂದ ಹಂತಹಂತವಾಗಿ ನೀರು ಬಿಡಬೇಕು.
–ಉಮೇಶ ಮಾದಿನೂರು, ಹಿರೇಸಿಂದೋಗಿ

‘ಸರ್ಕಾರ ಭೂಮಿ ಖರೀದಿಸಿ ಪರಿಹಾರ ನೀಡಲಿ‘
ಕಬ್ಬಿನ ಹೊಲದಲ್ಲಿ 15 ದಿನಗಳ ಹಿಂದೆ ಗೊಬ್ಬರ ಸಿಂಪಡಣೆ ಮಾಡಲಾಗಿತ್ತು. ಹಿರೇಹಳ್ಳದ ನೀರು ಬಂದು ಈಗ ಕಬ್ಬು ಹಾಗೂ ಗೊಬ್ಬರ ಎರಡೂ ಕೊಚ್ಚಿಕೊಂಡು ಹೋಗಿದೆ. ನೀರು ಬಂದಾಗಲೆಲ್ಲೆ ಪದೇ ಪದೇ ಇದೆ ಸಮಸ್ಯೆ. ನಾವು ಏನೂ ತಪ್ಪು ಮಾಡದಿದ್ದರೂ ಪ್ರತಿ ಸಲವೂ ನಷ್ಟ ಅನುಭವಿಸಬೇಕಾಗಿದೆ. ₹50 ಸಾವಿರ ಖರ್ಚು ಮಾಡಿದರೂ ಹೊಲದಲ್ಲಿರುವ ತ್ಯಾಜ್ಯ ಹೊರಗಡೆ ಹಾಕುವುದು ಆಗುವುದಿಲ್ಲ. ಸರ್ಕಾರ ಈ ಭೂಮಿ ಖರೀದಿಸಿ ನಮಗೆ ಬೇರೆ ಕಡೆ ವ್ಯವಸ್ಥೆ ಮಾಡಿಕೊಡಬೇಕು. ಶಾಶ್ವತ ಪರಿಹಾರ ಕೊಡಬೇಕು.
–ಶ್ರೀಧರ ಅಂಗನಕಟ್ಟಿ, ಹಿರೇಹಳ್ಳ ಸಮೀಪದ ಹೊಲವಿರುವ ರೈತ

ಬಿಡುವಿಲ್ಲದ ಮಳೆ ಕೊಳೆಯುತ್ತಿವೆ ಬೆಳೆ
–ನಾರಾಯಣರಾವ್‌ ಕುಲಕರ್ಣಿ
ಕುಷ್ಟಗಿ:
ಬೇಕಾದಾಗ ಬಾರದಿರುವುದು ಅನಗತ್ಯವಾಗಿ ನಿತ್ಯ ಬರುವ ಅತಿಥಿಯಂತೆ ಸುರಿಯುತ್ತಿರುವುದು ಈ ಬಾರಿಯ ಮಳೆಗಾಲದ ವಿಶೇಷ.

ಮಘ ಮಳೆ ಮಗಿ (ಮಣ್ಣಿನ ಕೊಡ)ಯಂತೆ ಸುರಿಯುತ್ತದೆ ಎಂಬ ಗಾದೆ ಮಾತು ಸುಳ್ಳಾಯಿತು. ಈ ಮಳೆ ಬಾರದೆ ಜಿಲ್ಲೆಯಲ್ಲಿನ ಬಹುತೆಕ ಪ್ರದೇಶದಲ್ಲಿನ ಮೆಕ್ಕೆಜೋಳ ಕಾಳುಕಟ್ಟುವುದಕ್ಕೆ ತೇವಾಂಶ ಕೊರತೆ ಎದುರಾಯಿತು. ಗುಬ್ಬಿ ಪುಕ್ಕವೂ ತೊಯ್ಯುವುದಿಲ್ಲ ಎಂದೆ ಹುಬ್ಬ ನಕ್ಷತ್ರದ ಮಳೆ ವಿಚಾರದಲ್ಲಿ ಹಿರಿಯರು ಹೇಳುವ ಮಾತಿದೆ. ಆದರೆ ಹುಬ್ಬ ಮಳೆ ಈ ಬಾರಿ ಅತ್ಯಧಿಕ ಪ್ರಮಾಣದಲ್ಲಿ ಸುರಿದು ಹಳ್ಳ ಕೊಳ್ಳಗಳು ತುಂಬಿಹರಿದವು. ಹೊಲಗದ್ದೆಗಳಲ್ಲಿ ನೀರು ನಿಂತು ಬೆಳೆಗಳು ಹಾಳಾಗುತ್ತಿವೆ.

ಜಿಲ್ಲೆಯ ಬಹುತೇಕ ಪ್ರದೇಶದಲ್ಲಿ ಮುಂಗಾರು ಹಂಗಾಮಿನಲ್ಲಿ ಮೆಕ್ಕೆಜೋಳ, ಸಜ್ಜೆ, ಸೂರ್ಯಕಾಂತಿ. ಇನ್ನು ಶೇಂಗಾ ಅಲ್ಪಸ್ವಲ್ಪ ಬಿತ್ತನೆಯಾಗಿದ್ದರೆ, ತೊಗರಿ ಅಂತರಬೆಳೆಯಾಗಿದೆ. ದಶಕದ ಹಿಂದೆ ಕೇವಲ ನೀರಾವರಿ ಆಶ್ರಯಕ್ಕೆ ಸೀಮಿತವಾಗಿದ್ದ ಮೆಕ್ಕೆಜೋಳ ಈ ಮಳೆಯಾಶ್ರಿತ ಪ್ರಮುಖ ಬೆಳೆಯಾಗಿದೆ. ಅದನ್ನು ಹೊರುತುಪಡಿಸಿದರೆ ಸಜ್ಜೆ. ಹೀಗೆ ಎಲ್ಲ ರೈತರು ಈ ಬೆಳೆಗಳಿಗೆ ಅಂಟಿಕೊಂಡಿದ್ದು ಪ್ರತಿವರ್ಷ ಒಂದೇ ಮಾದರಿ ಬೆಳೆ ಬೆಳೆಯುತ್ತಿರುವುದರಿಂದ ಬೆಳೆ ವೈವಿಧ್ಯತೆ ಇಲ್ಲದಂತಾಗಿದೆ.

ಈಗ ಮುಂಗಾರು ಹಂಗಾಮಿನಲ್ಲಿ ಬೆಳೆದ ಮೆಕ್ಕೆಜೋಳ, ಸಜ್ಜೆ, ಎಳ್ಳು, ಸೂರ್ಯಕಾಂತಿ ಬೆಳೆಗಳು ಕಟಾವಿಗೆ ಬಂದಿದ್ದು ಬಿಡುವಿಲ್ಲದ ಮಳೆಯಿಂದಾಗಿ ರೈತರು ತೊಂದರೆಗೆ ಸಿಲುಕಿದ್ದಾರೆ. ಕೊಯಿಲಿಗೆ ಬಂದಿರುವ ಬೆಳೆಗಳಿಗೆ ಹಾನಿಯಾಗುವ ಸಾಧ್ಯತೆ ಇದೆ, ಇದೇ ರೀತಿ ಮಳೆ ಮುಂದುವರೆದರೆ ಮೆಕ್ಕೆಜೋಳದ ಕಾಳುಗಳು ತೆನೆಯಲ್ಲಿಯೇ ಮೊಳಕೆಯೊಡೆಯುತ್ತವೆ. ರೈತರು ಮತ್ತೆ ಪರಿಹಾರಕ್ಕಾಗಿ ಸರ್ಕಾರದತ್ತ ಮುಖಮಾಡುವಂತಾಗುತ್ತದೆ ಎನ್ನುತ್ತಾರೆ ಬೇವೂರಿನ ರೈತ ಹನುಮಂತಗೌಡ ಪಾಟೀಲ.

ಇನ್ನು ಸಜ್ಜೆ ಬೆಳೆ ಕಟಾವು ಭರ್ಜರಿಯಾಗಿ ನಡೆದಿದ್ದು ಒಣಗಿಸುವುದಕ್ಕೆ ಸಮಸ್ಯೆಯಾಗಿದೆ. ತೆನೆಯನ್ನಷ್ಟೇ ಕಟಾವು ಮಾಡಿರುವ ಹಿರೇವಂಕಲಕುಂಟಾ, ಮಾಟಲದಿನ್ನಿ ರೈತರು ಸಜ್ಜೆ ತೆನೆಗಳನ್ನು ಡಾಂಬರು ರಸ್ತೆಯಲ್ಲಿ ಹಾಕಿಕೊಂಡು ಬಿಸಿಲಿಗಾಗಿ ಕಾಯುತ್ತಿರುವುದು ಕಂಡುಬಂದಿದೆ.

ಎಳ್ಳು ಕಟಾವಾಗಿದ್ದರೂ ಸೂರ್ಯರಶ್ಮಿ ಸೋಕದೆ ಗೂಡುಗಳು ಕೊಳೆಯುವ ಹಂತ ತಲುಪಿವೆ ಎಂದು ಕುಷ್ಟಗಿಯ ರೈತ ಭರಮಣ್ಣ ಹೇಳಿದರು. ಉತ್ತಮ ಬೆಳೆ ಬೆಳೆದರೂ ಸಮಸ್ಯೆ, ಬೆಳೆಯದಿದ್ದರೆ ಇನ್ನೊಂದು ತೊಂದರೆ ಒಟ್ಟಾರೆ ರೈತರು ಏನಾದರೊಂದು ಸಂಕಷ್ಟ ಎದುರಿಸುವುದು ಖಾತರಿಯಾಗಿದೆ ಎನ್ನುತ್ತಾರೆ ಚಳಗೇರಿಯ ರೈತ ವೀರಭದ್ರಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT