ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಗಿರಿ | ಕುಡುಕರ ತಾಣವಾದ ಖಾಲಿ ನಿವೇಶನಗಳು!

ಕುಡಿದು ಬಾಟಲಿ ಬಿಸಾಕುವವರ ಕಾಟ, ನಿವೇಶನಗಳ ಮಾಲಿಕರಿಗೆ ಸಂಕಟ
Published 25 ಮೇ 2023, 20:29 IST
Last Updated 25 ಮೇ 2023, 20:29 IST
ಅಕ್ಷರ ಗಾತ್ರ

ಕನಕಗಿರಿ: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಖಾಲಿಯಿರುವ ನಿವೇಶನಗಳು ಕುಡುಕರ ಅಡ್ಡೆಗಳಾಗಿ ಮಾರ್ಪಟ್ಟಿದ್ದು, ಇದರಿಂದ ನಿವೇಶನಗಳ ಮಾಲಿಕರು ಹಾಗೂ ನಿವಾಸಿಗಳಿಗೆ ಕಿರಿಯುಂಟಾಗುತ್ತಿದೆ. ಮದ್ಯದ ಬಾಟಲಿಗಳನ್ನು ಅಲ್ಲೇ ಬಿಸಾಕುತ್ತಿರುವುದರಿಂದ ಮಾಲಿನ್ಯವುಂಟಾಗುತ್ತಿದೆ.

ನೀರ್ಲೂಟಿ, ತಾವರಗೇರಾ, ಗಂಗಾವತಿ, ನವಲಿ, ಕೊಪ್ಪಳ ಸೇರಿದಂತೆ ವಿವಿಧ ನಗರ, ಪಟ್ಟಣ, ಗ್ರಾಮಗಳ ರಸ್ತೆಯಲ್ಲಿರುವ ಖಾಲಿ ನಿವೇಶನ ಹಾಗೂ ರಸ್ತೆಗಳಲ್ಲಿ ಕುಡುಕರು ದಿನಲೂ ಮದ್ಯ ಸೇವಿಸಿ, ಖಾಲಿ ಬಾಟಲಿಗಳನ್ನು ಬಿಸಾಕಿ ಹೋಗುತ್ತಿದ್ದಾರೆ ಎಂದು ನಿವೇಶನಗಳ ಮಾಲೀಕರು, ನಿವಾಸಿಗಳು ದೂರಿದ್ದಾರೆ.

ಪಟ್ಟಣದ ವ್ಯಾಪ್ತಿಯ ವೇಮನ ನಗರ, ತೊಂಡೆತೇವರಪ್ಪ ದೇಗುಲ ಸೇರಿದಂತೆ ಹಲವು ಹೊಸ ನಿವೇಶನಗಳಲ್ಲಿ ಖಾಲಿ ಬಾಟಲಿಗಳ ದರ್ಶನವಾಗುತ್ತಿದೆ. ಬಾಟಲಿಗಳ ಮೇಲೆ ಕೆಲವರು ವಿಕೃತಿ ಮೆರೆದಿದ್ದು, ಬಾಟಲಿಗಳನ್ನು ಒಡೆದು ಹಾಕುತ್ತಿದ್ದಾರೆ ಎಂದು ಮಾಲೀಕ ಜಯಪ್ರಕಾಶರೆಡ್ಡಿ ಮಾದಿನಾಳ ಅಳಲು ತೋಡಿಕೊಂಡರು.

ಕುಡುಕರು, ಊಟ ಮಾಡಿ ಬಿಸಾಕಿದ ಪತ್ರೋಳಿಗಳು, ನೀರಿನ ಬಾಟಲಿ, ಕುಡಿಯುವ ಸಮಯದಲ್ಲಿ ಬಳಸುವ ಕುರುಕಲು ತಿಂಡಿಗಳ ಖಾಲಿ ಪ್ಯಾಕೆಟ್‌ಗಳನ್ನು ಬೀಸಾಡುತ್ತಿದ್ದಾರೆ. ನಿವೇಶನಗಳ ಖರೀದಿಗೆ ಬರುವ ಜನರು ಖಾಲಿ ಬಾಟಲಿಗಳನ್ನು ನೋಡಿಕೊಂಡು ಬರುವ ಪರಿಸ್ಥಿತಿಯಿದೆ. ಸಾಕಷ್ಟು ಸಲ ಮುಜುಗರ ಅನುಭವಿಸಿದ್ದೇವೆ ಎಂದು ನಿವೇಶನ ಮಾಲೀಕರ ಪುತ್ರ ಶೌಕತ್‌ ನಡಲಮನಿ ತಿಳಿಸಿದರು.

ವಾಯುವಿಹಾರಿಗಳಿಗೆ ತೊಂದರೆ: ತಾವರಗೇರಾ ಹಾಗೂ ನೀರ್ಲೂಟಿ, ತೊಂಡೆತೇವರಪ್ಪ ದೇಗುಲದ ರಸ್ತೆಯಲ್ಲಿರುವ ನಿವೇಶನಗಳು ಎನ್.ಎ. ಆಗಿದ್ದು, ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುತ್ತಿವೆ. ನಿವೇಶನಗಳು ಆದಷ್ಟು ಬೇಗನೆ ಮಾರಾಟವಾಗಲಿ ಎಂಬ ಕಾರಣಕ್ಕೆ ಮಾಲಿಕರು ರಸ್ತೆ ಡಾಂಬರೀಕರಣ ಹಾಗೂ ಚರಂಡಿ ನಿರ್ಮಿಸಿದ್ದಾರೆ. ಈ ಪರಿಸರದಲ್ಲಿ ಪ್ರಶಾಂತವಾದ ವಾತಾವರಣ ಇರುವ ಕಾರಣ ವೃದ್ಧರು, ಮಹಿಳೆಯರು ಹಾಗೂ ಯುವಕರು ಬೆಳಿಗ್ಗೆ ಹಾಗೂ ಸಂಜೆ ವೇಳೆ ವಾಯುವಿಹಾರಕ್ಕೆ ಬರಲು ಸಮಸ್ಯೆಯಾಗಿದೆ ಎಂದು ಹಸರು ಹೇಳಲು ಇಚ್ಚಿಸದ ಶಿಕ್ಷಕರೊಬ್ಬರು ಅಳಲು ತೋಡಿಕೊಂಡರು.

ಬೊಕ್ಕಸಕ್ಕೆ ನಷ್ಟ: ಪಟ್ಟಣದಲ್ಲಿ ಖಾಲಿ ನಿವೇಶನಗಳ ಸಂಖ್ಯೆ ಹೆಚ್ಚಿದ್ದು, ನಿವೇಶನಗಳ ಮಾಲೀಕರು ತೆರಿಗೆ ಪಾವತಿಸಿಲ್ಲ. ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಕರವಸೂಲಿಗಾರರು ಕಚೇರಿ ಕೆಲಸಕ್ಕೆ ಮಾತ್ರ ಸೀಮಿತರಾಗಿರುವ ಪರಿಣಾಮ, ಆದಾಯಕ್ಕೆ ಕತ್ತರಿ ಬಿದ್ದಿದೆ. ಮೇಲಾಧಿಕಾರಿಗಳು ಸಹ ಮೌನ ವಹಿಸಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಕರವಸೂಲಿ ಮಾಸಾಚರಣೆ ಮಾಡುವ ಮೂಲಕ ಖಾಲಿ ನಿವೇಶನಗಳ ಮೇಲೆ ತೆರಿಗೆ ವಿಧಿಸಿದರೆ ಪಂಚಾಯಿತಿಯ ಆದಾಯ ಹೆಚ್ಚಳವಾಗುತ್ತದೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕೆಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ತಾಲ್ಲೂಕು ಸಂಚಾಲಕ ಪಾಮಣ್ಣ ಅರಳಿಗನೂರು ಒತ್ತಾಯಿಸಿದ್ದಾರೆ.

ಪಾರ್ಸಲ್ ಮಾತ್ರ: ಪಟ್ಟಣದಲ್ಲಿರುವ ಸರ್ಕಾರದಿಂದ ಪರವಾನಗಿ ಪಡೆದಿರುವ ಕೆಲ ಮದ್ಯದಂಗಡಿಗಳಲ್ಲಿ ಊಟದ ವ್ಯವಸ್ಥೆ ನೀಡಬೇಕೆಂಬ ನಿಯಮವಿದೆ. ಆದರೆ ಅಂಗಡಿ ಮಾಲೀಕರು ಊಟದ ವ್ಯವಸ್ಥೆ ಮಾಡಿರುವುದಿಲ್ಲ. ಹೀಗಾಗಿ ಮದ್ಯವನ್ನು ಪಾರ್ಸಲ್‌ ನೀಡುತ್ತಾರೆ. ಬಾರ್‌ಗಳಲ್ಲಿ ಕುಳಿತುಕೊಂಡು ಕುಡಿಯಲು ಬಯಸದವರು ಖಾಲಿ ನಿವೇಶಗಳನ್ನು ಕುಡಿಯಲು ಕಾಯಂ ಜಾಗ ಮಾಡಿಕೊಂಡಿದ್ದಾರೆ ಎಂಬುದು ಬಹುತೇಕ ರಿಯಲ್ ಎಸ್ಟೇಟ್ ಉದ್ಯಮದಾರರು ಹೇಳುತ್ತಾರೆ.

ಕನಕಗಿರಿಯ ತಾವರಗೇರಾ ರಸ್ತೆಯಲ್ಲಿರುವ ಲೇಔಟ್ ಜಾಗದಲ್ಲಿ ಕುಡಿದು ಬಿಸಾಕಿರುವ ವಿವಿಧ ನಮೂನೆಯ ಮದ್ಯದ ಖಾಲಿ ಬಾಟಲಿಗಳು
ಕನಕಗಿರಿಯ ತಾವರಗೇರಾ ರಸ್ತೆಯಲ್ಲಿರುವ ಲೇಔಟ್ ಜಾಗದಲ್ಲಿ ಕುಡಿದು ಬಿಸಾಕಿರುವ ವಿವಿಧ ನಮೂನೆಯ ಮದ್ಯದ ಖಾಲಿ ಬಾಟಲಿಗಳು

Quote - ಖಾಲಿ ನಿವೇಶನಗಳ ಜಾಗದಲ್ಲಿ ಕುಡುಕರ ಹಾವಳಿ ತಪ್ಪಿಸಲು ಪೊಲೀಸರನ್ನು ಗಸ್ತು ತಿರುಗಲು ಸೂಚಿಸಲಾಗುವುದು ದೂರು ನೀಡಿದರೆ ಕ್ರಮ ತೆಗೆದುಕೊಳ್ಳಲಾಗುವುದು ಜಗದೀಶ ಪಿಐ ಕನಕಗಿರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT