ಭಾರತೀಯ ನ್ಯಾಯಾಂಗ ವ್ಯವಸ್ಥೆ ಶ್ರೇಷ್ಠ

7
ವಕೀಲರ ದಿನಾಚರಣೆಯಲ್ಲಿ ನ್ಯಾಯಮೂರ್ತಿ ಜಿ.ನರೇಂದರ್ ಅಭಿಮತ

ಭಾರತೀಯ ನ್ಯಾಯಾಂಗ ವ್ಯವಸ್ಥೆ ಶ್ರೇಷ್ಠ

Published:
Updated:
Prajavani

ಕೊಪ್ಪಳ: ವಿಶ್ವದ ಎಲ್ಲಾ ನ್ಯಾಯಾಂಗ ವ್ಯವಸ್ಥೆಗಿಂತ ಭಾರತೀಯ ನ್ಯಾಯಾಂಗ ವ್ಯವಸ್ಥೆ ಅತ್ಯಂತ ಸದೃಢವಾಗಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ, ಕೊಪ್ಪಳ-ಬಳ್ಳಾರಿ ಜಿಲ್ಲೆಗಳ ಆಡಳಿತಾತ್ಮಕ ನ್ಯಾಯಾಧೀಶ ಜಿ.ನರೇಂದರ್ ಅಭಿಪ್ರಾಯಪಟ್ಟರು.

ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಕೀಲರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಕೀಲರು ತಮ್ಮ ಪ್ರಕರಣಗಳತ್ತ ಮಾತ್ರ ಗಮನಹರಿಸದೇ ಸದೃಢ, ಸಶಕ್ತ ಸಮಾಜ ನಿರ್ಮಾಣಕ್ಕೆ ತಮ್ಮ ಸುತ್ತಲೂ ಇರುವ ಪ್ರಸ್ತುತ ಸಮಸ್ಯೆಗಳ ಕುರಿತು ವಾದ ಮಂಡಿಸಿ ಅವುಗಳಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಸಲಹೆ ನೀಡಿದರು.

ಪ್ರಕರಣಗಳಿಗಿಂತ ವಿಷಯಕ್ಕೆ ಮಹತ್ವ ನೀಡಬೇಕು. ಸಾಮಾಜಿಕ ಸಮಾನತೆ, ವ್ಯಕ್ತಿಯ ಘನತೆಯನ್ನು ವಕೀಲರು ನ್ಯಾಯಾಲಯಗಳು ಎತ್ತಿ ಹಿಡಿದಿವೆ. ಉನ್ನತ ಪರಂಪರೆ ಇರುವ ನಮ್ಮ ನ್ಯಾಯಾಂಗ ವ್ಯವಸ್ಥೆಯನ್ನು  ಗಟ್ಟಿಗೊಳಿಸಬೇಕು. ವಕೀಲರು ನಾಗರಿಕ ಸಮಾಜದ ಒಳಿತಿಗೆ ದುಡಿಯುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ವಕೀಲರ ಪರಿಶ್ರಮವೇ ಕಾರಣ. ದೇಶದ ಗಡಿ ಕಾಯುವ ಸೈನಿಕರು, ಸಮಾಜವನ್ನು ವಕೀಲರು ಕಾಯಬೇಕು. ನೈತಿಕತೆ, ಸ್ವಾತಂತ್ರ್ಯ, ಸಂಸ್ಕೃತಿ, ಪರಂಪರೆಯನ್ನು ನಾವೇಲ್ಲರೂ ಗೌರವಿಸಬೇಕು ಎಂದು ಹೇಳಿದರು.

’ನಾವೆಲ್ಲರೂ ಒಂದು ವ್ಯವಸ್ಥೆಯ ಭಾಗ. ಅಧಿಕಾರಶಾಹಿಗೆ ಸೀಮಿತವಾದ ವ್ಯಾಪ್ತಿ ಇರುತ್ತದೆ. ಜನರಿಗೆ ಸಮರ್ಪಕ ಸೌಲಭ್ಯ ಮುಟ್ಟಿವೆ. ಇಲ್ಲವೋ, ಒಂದು ಸಂಸ್ಥೆ ನಿಷ್ಕ್ರಿಯವಾಗಿದೆ ಎಂದರೆ ಅದಕ್ಕೆ ಚುರುಕು ಮುಟ್ಟಿಸುವ ಕೆಲಸವನ್ನು ಮಾಡುವ ಎಲ್ಲ ಅವಕಾಶ ವಕೀಲರಿಗೆ ಇದೆ‘ ಎಂದು ಹೇಳಿದರು.

ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್ ಮಾತನಾಡಿ, ಜಿಲ್ಲೆಯ ಅಭಿವೃದ್ಧಿಗೆ ವಕೀಲರ ಸಹಕಾರ ಅವಶ್ಯ. ಅನೇಕ ಕಾಮಗಾರಿಗಳು ನಡೆಯುತ್ತವೆ. ಅವುಗಳ ಆಕ್ಷೇಪಣೆ ಕುರಿತು ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗುವುದರಿಂದ ವಿಳಂಬವಾಗಬಾರದು. ಶೀಘ್ರ ನ್ಯಾಯದಾನ ನೀಡಿ, ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಕಾನೂನು ತಿಳಿವಳಿಕೆ ಕೊರತೆ, ಗೊಂದಲಗಳು ಇವೆ. ಈ ಕುರಿತು ಕಾರ್ಯಾಗಾರ ಹಮ್ಮಿಕೊಂಡು ಜಿಲ್ಲಾಡಳಿತಕ್ಕೆ ಮಾರ್ಗದರ್ಶನ ನೀಡಬೇಕು ಎಂದು ನ್ಯಾಯಾಧೀಶರನ್ನು ಕೋರಿದರು.

ಜಿಲ್ಲಾ ನ್ಯಾಯಾಧೀಶ ಸಂಜೀವ್ ಕುಲಕರ್ಣಿ ಮಾತನಾಡಿದರು.

ನ್ಯಾಯಾಧೀಶರಾದ ಎಸ್.ಕುಮಾರ್, ಟಿ.ಶ್ರೀನಿವಾಸ, ಹರೀಶ ಆರ್. ಪಾಟೀಲ, ಮನು ಎಸ್. ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೇಣುಕಾ ಸುಕುಮಾರ್, ಪ್ರಭಾರ ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಡಿ.ಗೀತಾ, ವಕೀಲರ ಪರಿಷತ್ತಿನ ರಾಜ್ಯ ಉಪಾಧ್ಯಕ್ಷ ಬಿ.ವಿ.ಶ್ರೀನಿವಾಸ, ಸದಸ್ಯ ಎಸ್.ಅಸೀಫ್ ಅಲಿ, ವಕೀಲರ ಸಂಘದ ಜಿಲ್ಲಾ ಅಧ್ಯಕ್ಷ ದೊಡ್ಡಬಸಪ್ಪ ಕಂಪ್ಲಿ ಇದ್ದರು.

ಹಿರಿಯ ವಕೀಲ ರಾಘವೇಂದ್ರ ಪಾನಗಂಟಿ ಸ್ವಾಗತಿಸಿದರು. ವಿ.ಎಂ.ಭೂಸನೂರಮಠ, ಎ.ವಿ.ಕಣವಿ ಪ್ರಾಸ್ತಾವಿಕವಾಗಿ ಮಾತನಾಡಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !